

Sara Ali Khan: ಪ್ರಸ್ತುತ ಬಾಲಿವುಡ್ ಬ್ಯೂಟಿ, ನಟಿ ಸಾರಾ ಅಲಿ ಖಾನ್ ತಮ್ಮ ಮುಂಬರುವ ಚಿತ್ರಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದಾರೆ. 2023ರಲ್ಲಿ ತೆರೆಕಂಡ 'ಜರಾ ಹಟ್ಕೆ ಜರಾ ಬಚ್ಕೆ' ಸಿನಿಮಾದಲ್ಲಿ ಮಿಂಚಿದ ಸಾರಾ, ಒಂದೇ ಒಂದು ಹಾಡಿನಿಂದ ಚಿತ್ರಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾದರು. ಇದೀಗ ತಮ್ಮ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮುಕ್ತವಾಗಿ ಮಾತನಾಡಿರುವ ನಟಿ, ತನ್ನ ಗೂಗಲ್ ಪೇ ತಾಯಿಯ ಹೆಸರಿನಲ್ಲಿ ಲಿಂಕ್ ಆಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಇತ್ತೀಚಿಗೆ ತನ್ನ ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ಹಲವು ವಿಷಯಗಳನ್ನು ಹಂಚಿಕೊಂಡ ನಟಿ ಸಾರಾ, "ನಾನು ವಿದೇಶ ಪ್ರಯಾಣ ಬೆಳೆಸಿದಾಗ ಅಥವಾ ಎಲ್ಲಿಯಾದರೂ ದೂರ ಪ್ರಯಾಣ ಮಾಡಿದಾಗ, ಏನ್ನನಾದರೂ ಖರೀದಿಸುವ ಹವ್ಯಾಸವಿದೆ. ಹೀಗಾಗಿ ಅನಗತ್ಯ ಖರ್ಚು ಮಾಡುತ್ತೇನೆ ಎಂಬ ನಿಟ್ಟಿನಲ್ಲಿ ನನ್ನ ತಾಯಿ ಗೂಗಲ್ ಪೇನಲ್ಲಿ ಅವರ ನಂಬರ್ ಅನ್ನು ಲಿಂಕ್ ಮಾಡಿದ್ದಾರೆ. ಇದರಿಂದ ಒಂದು ಟಿಕೆಟ್ ಬುಕ್ ಮಾಡಬೇಕು ಎಂದರೂ ಅವರು ನನ್ನೊಂದಿಗೆ ಇರಲೇಬೇಕು" ಎಂದರು.
"ನನಗೆ ಮುಂಚಿನಿಂದಲೂ ಪ್ರವಾಸ ಹೋಗಬೇಕು, ದೂರ ಪ್ರಯಾಣ ಮಾಡಬೇಕು ಎಂಬ ಆಸೆಯಿದೆ. ಹೀಗಾಗಿ ನನ್ನ ಬಹುತೇಕ ಉಳಿತಾಯದ ಹಣವನ್ನು ಟ್ರಾವೆಲಿಂಗ್ಗಾಗಿಯೇ ಮೀಸಲಿಡುತ್ತೇನೆ. ನನ್ನ ಹಣಕಾಸಿನ ವ್ಯವಹಾರವನ್ನು ನಮ್ಮ ತಾಯಿಯೇ ನೋಡಿಕೊಳ್ಳುವುದು. ಉಳಿಸಿದ ಹಣವನ್ನು ಹಲವು ಇತರೆ ಸೆಕ್ಟರ್ಗಳಲ್ಲಿ ಹೂಡಿಕೆ ಮಾಡುವುದು ಮುಖ್ಯ ಎಂದು ಅಮ್ಮ ಹೇಳುತ್ತಿರುತ್ತಾರೆ. ಈಗಲೂ ನನ್ನ ಗೂಗಲ್ ಪೇ ಖಾತೆ ಅಮ್ಮನ ನಂಬರ್ಗೆ ಲಿಂಕ್ ಆಗಿದೆ. ಆಕೆಯ ಅನುಮತಿ ಇಲ್ಲದೆ ನಾನೇನು ಖರೀದಿಸಲು ಸಾಧ್ಯವಿಲ್ಲ. ಒಟಿಪಿ ಬರುವುದು ಅವರ ಸಂಖ್ಯೆಗೆ" ಎಂದು ಹಾಸ್ಯ ಚಟಾಕಿ ಸಿಡಿಸಿದರು,(ಏಜೆನ್ಸೀಸ್).