ಧರ್ಮಶಾಲಾ ಟೆಸ್ಟ್​ ಪಂದ್ಯಕ್ಕೆ ಹಿಮಪಾತ ಅಡಚಣೆ ಭೀತಿ

test snow web
Published on

ಧರ್ಮಶಾಲಾ: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿರುವ ಭಾರತ-ಇಂಗ್ಲೆಂಡ್​ ಕೊನೇ ಟೆಸ್ಟ್​ ಪಂದ್ಯಕ್ಕೆ ಮಳೆ ಮತ್ತು ಹಿಮಪಾತದಿಂದ ಅಡಚಣೆಯಾಗುವ ಭೀತಿ ಇದೆ. ಅಲ್ಲದೆ ಚಳಿಯ ವಾತಾವರಣದ ನಡುವೆ ಆಡುವುದು ಆತಿಥೇಯ ಭಾರತ ತಂಡದ ಆಟಗಾರರಿಗೆ ಹೆಚ್ಚು ಸವಾಲಿನದ್ದಾಗಿರಲಿದೆ ಎನ್ನಲಾಗಿದೆ.

ಇಂಗ್ಲೆಂಡ್​ ತಂಡದ ಆಟಗಾರರಿಗೆ ತವರಿನಲ್ಲಿರುವ ವಾತಾವರಣದ ಅನುಭವವನ್ನೇ ಧರ್ಮಶಾಲಾ ನೀಡಲಿದೆ. ಹೀಗಾಗಿ ಚಳಿ ವಾತಾವರಣಕ್ಕೆ ಹೊಂದಿಕೊಳ್ಳುವುದು ಪ್ರವಾಸಿ ಇಂಗ್ಲೆಂಡ್​ ತಂಡದ ಆಟಗಾರರಿಗೆ ಹೆಚ್ಚು ಸುಲಭವೆನಿಸಲಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ಪಂದ್ಯ ಶುರುವಾಗುವ ಮಾರ್ಚ್​ 7ರಂದು ಗರಿಷ್ಠ 9 ಡಿಗ್ರಿ ಸೆಲ್ಸಿಯಸ್​ ತಾಪಮಾನ ಇರಲಿದೆ.

ಧರ್ಮಶಾಲಾಗೆ ಭಾರತ-ಇಂಗ್ಲೆಂಡ್​ ತಂಡಗಳು

ನಾಲ್ಕನೇ ಟೆಸ್ಟ್​ ಪಂದ್ಯದ ಬಳಿಕ ಕಳೆದ 5 ದಿನಗಳಿಂದ ವಿಶ್ರಾಂತಿಯಲ್ಲಿದ್ದ ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್​ ತಂಡದ ಆಟಗಾರರು ಐದನೇ ಹಾಗೂ ಟೆಸ್ಟ್​ ಪಂದ್ಯಕ್ಕೆ ಪೂರ್ವಭಾವಿಯಾಗಿ ಭಾನುವಾರ ಧರ್ಮಶಾಲಾಗೆ ಆಗಮಿಸಿದ್ದಾರೆ. ಗುರುವಾರದಿಂದ ನಡೆಯಲಿರುವ ಕೊನೇ ಟೆಸ್ಟ್​ಗೆ ಉಭಯ ತಂಡಗಳ ಆಟಗಾರರು ಸೋಮವಾರ ಅಭ್ಯಾಸ ಆರಂಭಿಸಲಿದ್ದಾರೆ.

ರಾಂಚಿಯಲ್ಲಿ ಕಳೆದ ಸೋಮವಾರ ಮುಕ್ತಾಯಗೊಂಡ 4ನೇ ಟೆಸ್ಟ್​ ಬಳಿಕ ಇಂಗ್ಲೆಂಡ್​ ತಂಡದ ಕೆಲ ಆಟಗಾರರು ಚಂಡೀಗಢಕ್ಕೆ ತೆರಳಿದ್ದರೆ, ಇನ್ನು ಕೆಲ ಆಟಗಾರರು ಬೆಂಗಳೂರಿಗೆ ಆಗಮಿಸಿ ಗಾಲ್ಫ್​ ಆಡಿದ್ದರು. ಭಾರತ ತಂಡದ ಆಟಗಾರರು ತಮ್ಮ ಮನೆಗಳಿಗೆ ನಿರ್ಗಮಿಸಿದ್ದರು. ಎಚ್​ಪಿಸಿಎ ಸ್ಟೇಡಿಯಂನಲ್ಲಿ ಭಾರತ ತಂಡದ ಆಟಗಾರರು ಬೆಳಗ್ಗೆ 9.30ರಿಂದಲೇ ಅಭ್ಯಾಸ ನಡೆಸಲಿದ್ದರೆ, ಇಂಗ್ಲೆಂಡ್​ ತಂಡದ ಆಟಗಾರರು ಮಧ್ಯಾಹ್ನ 1.30ರಿಂದ ಅಭ್ಯಾಸ ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net