

ಬೆಂಗಳೂರು: ಉದ್ಯಾನನಗರಿಯಲ್ಲಿ ನಡೆಯುತ್ತಿರುವ ಮಹಿಳೆಯರ ಐಪಿಎಲ್ ಖ್ಯಾತಿಯ ಡಬ್ಲ್ಯುಪಿಎಲ್ಗೆ ಕ್ರಿಕೆಟ್ ಪ್ರೇಮಿಗಳು ಆಸಕ್ತಿಯಿಂದ ಆಗಮಿಸುತ್ತಿದ್ದಾರೆ. ಅದರಲ್ಲೂ ಆರ್ಸಿಬಿ ಮಹಿಳಾ ತಂಡದ ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಬಹುತೇಕ ಭರ್ತಿಯಾಗುತ್ತಿವೆ. ಇದರ ನಡುವೆ ಅತ್ತ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಪುರುಷರ ಟಿ20 ಟೂರ್ನಿಯ ಕರಾಚಿ ಪಂದ್ಯಗಳ ವೇಳೆ ಕ್ರೀಡಾಂಗಣ ಬಹುತೇಕ ಖಾಲಿಯಾಗಿವೆ. ಇದರಿಂದಾಗಿ ಪುರುಷರ ಐಪಿಎಲ್ಗೆ ಪ್ರತಿಸ್ಪರ್ಧಿ ಎಂದು ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳು ಹೇಳಿಕೊಳ್ಳುವ ಪಿಎಸ್ಎಲ್ ಟೂರ್ನಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗಳಿಗೆ ಒಳಾಗುತ್ತಿದೆ.
"ಪಿಎಸ್ಎಲ್ ವೇಳೆ ಗ್ಯಾಲರಿಗಿಂತ ಹೆಚ್ಚಿನ ಜನರು ಮೈದಾನದಲ್ಲಿರುತ್ತಾರೆ' ಎಂದೂ ಭಾರತದ ಕ್ರಿಕೆಟ್ ಪ್ರೇಮಿಗಳು ಕಾಲೆಳೆಯುತ್ತಿದ್ದಾರೆ. ಐಪಿಎಲ್&ಡಬ್ಲ್ಯುಪಿಎಲ್ ಬಿಡಿ ಭಾರತದ ಕಬಡ್ಡಿ ಲೀಗ್ಗೆ ಆಗಮಿಸುವಷ್ಟೂ ಪ್ರೇಕ್ಷಕರು ಪಿಎಸ್ಎಲ್ಗೆ ಬರುತ್ತಿಲ್ಲ ಎಂದೂ ಕೆಲವರು ತಮಾಷೆ ಮಾಡಿದ್ದಾರೆ. ಪಿಎಸ್ಎಲ್ನಲ್ಲಿ ಪಾಕ್ ತಂಡದ ಮಾಜಿ ನಾಯಕ ಬಾಬರ್ ಅಜಮ್ಗಿಂತ (1.23 ಕೋಟಿ ರೂ.) ಡಬ್ಲ್ಯುಪಿಎಲ್ನಲ್ಲಿ ಸ್ಮೃತಿ ಮಂದನಾ (3.4 ಕೋಟಿ ರೂ.) ಆರ್ಸಿಬಿ ಪರ ಅಧಿಕ ವೇತನ ಪಡೆಯುತ್ತಾರೆ ಎಂಬ ಹೋಲಿಕೆ ಕೂಡ ಈ ಹಿಂದೆ ಟ್ರೋಲ್ಗೆ ಒಳಗಾಗಿತ್ತು.
ಪಿಎಸ್ಎಲ್ ತ್ಯಜಿಸಿ ಜಾಮ್ನಗರಕ್ಕೆ ಬಂದ ಪೊಲ್ಲಾರ್ಡ್: ಕರಾಚಿ ಕಿಂಗ್ಸ್ ತಂಡದ ಪರ ಆಡುತ್ತಿದ್ದ ವೆಸ್ಟ್ ಇಂಡೀಸ್ ಆಲ್ರೌಂಡರ್ ಕೈರಾನ್ ಪೊಲ್ಲಾರ್ಡ್ ಪಿಎಸ್ಎಲ್ ಟೂರ್ನಿಯನ್ನು ಅರ್ಧದಲ್ಲೇ ತ್ಯಜಿಸಿ ಮುಂಬೈ ಇಂಡಿಯನ್ಸ್ ಮಾಲೀಕರಾದ ಮುಕೇಶ್&ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ ವಿವಾಹಪೂರ್ವ ಸಮಾರಂಭಕ್ಕಾಗಿ ಜಾಮ್ನಗರಕ್ಕೆ ಆಗಮಿಸಿದ್ದಾರೆ. ಇದು ಪಿಎಸ್ಎಲ್ ಇನ್ನಷ್ಟು ಟ್ರೋಲ್ಗಳಿಗೆ ಒಳಗಾಗಲು ಕಾರಣವಾಗಿದೆ. ಪಿಎಸ್ಎಲ್ ಯೋಗ್ಯತೆ ಏನೆಂಬುದನ್ನು ಇದು ತೋರಿಸುತ್ತಿದೆ, ಇದು ಪಿಎಸ್ಎಲ್ಗೆ ಆಗಿರುವ ಮುಖಭಂಗ ಎಂದು ಭಾರತದ ಕ್ರಿಕೆಟ್ ಪ್ರೇಮಿಗಳು ತಮಾಷೆ ಮಾಡಿದ್ದಾರೆ. ಪೊಲ್ಲಾರ್ಡ್ 2010ರಿಂದ ಮುಂಬೈ ಇಂಡಿಯನ್ಸ್ ಜತೆಗೆ ವಿಶೇಷ ಸಂಬಂಧ ಹೊಂದಿದ್ದಾರೆ.