

ನ್ಯೂಯಾರ್ಕ್: ಹಾಲಿ ರನ್ನರ್ಅಪ್ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಮುಗ್ಗರಿಸುವ ಮೂಲಕ ಮಾಡು ಇಲ್ಲವೆ ಮಡಿ ಒತ್ತಡಕ್ಕೆ ಸಿಲುಕಿದೆ. ಸೂಪರ್-8 ಹಂತಕ್ಕೇರುವ ಆಸೆ ಜೀವಂತ ಉಳಿಸಿಕೊಳ್ಳಲು ಬಾಬರ್ ಅಜಮ್ ಪಡೆ, ಕೆನಡಾ ವಿರುದ್ಧ ಮಂಗಳವಾರ ನಡೆಯಲಿರುವ ತನ್ನ 3ನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಸವಾಲು ಎದುರಿಸುತ್ತಿದೆ.
ಆತಿಥೇಯ ಅಮೆರಿಕ ವಿರುದ್ಧದ ಮೊದಲ ಪಂದ್ಯದಲ್ಲಿ ಸೂಪರ್ ಓವರ್ನಲ್ಲಿ ಸೋತಿದ್ದ ಪಾಕ್, ಸಾಂಪ್ರದಾಯಿಕ ಎದುರಾಳಿ ಭಾರತದ ಎದುರು ಸಾಧಾರಣ ಮೊತ್ತದ ಸವಾಲು ಬೆನ್ನಟ್ಟಲಾಗದೆ ಎಡವಿದೆ. ಇನ್ನೀಗ ಎ ಗುಂಪಿನ ಉಳಿದ 2 ಪಂದ್ಯಗಳಲ್ಲಿ ಭಾರಿ ಅಂತರದಿಂದ ಗೆದ್ದರಷ್ಟೇ ಪಾಕ್ ಮುಂದಿನ ಹಂತಕ್ಕೇರುವ ಆಸೆ ಉಳಿಸಿಕೊಳ್ಳಬಹುದಾಗಿದೆ.
ಭಾರತ ವಿರುದ್ಧದ ಪಂದ್ಯದಲ್ಲಿ ಪಾಕ್ ಬೌಲರ್ಗಳು ಅಮೋ ನಿರ್ವಹಣೆ ತೋರಿದ್ದರೂ, ಬ್ಯಾಟರ್ಗಳ ನಿರ್ವಹಣೆ ನೀರಸವೆನಿಸಿದೆ. ಪ್ರಮುಖವಾಗಿ ಖರ್ ಜಮಾನ್, ಇಮಾದ್ ವಾಸಿಂ, ಶಾದಾಬ್ ಖಾನ್ ಮತ್ತು ಇಫ್ತಿಕಾರ್ ಅಹ್ಮದ್ ಕೆಟ್ಟ ಹೊಡೆತಗಳಿಗೆ ಔಟಾಗಿದ್ದು ಟೀಕೆಗೆ ಗುರಿಯಾಗಿದೆ.
ಮತ್ತೊಂದೆಡೆ ಕೆನಡಾ ಕೂಡ ಆರಂಭಿಕ ಪಂದ್ಯದಲ್ಲಿ ಅಮೆರಿಕ ಎದುರು ಸೋತಿದ್ದರೂ, ಐರ್ಲೆಂಡ್ ಎದುರು 12 ರನ್ಗಳಿಂದ ಗೆದ್ದು ಬೀಗಿತ್ತು. ಹೀಗಾಗಿ ಸದ್ಯ ಎ ಗುಂಪಿನ ಅಂಕಪಟ್ಟಿಯಲ್ಲಿ ಪಾಕ್ಗಿಂತ ಕೆನಡಾ ತಂಡವೇ ಮೇಲಿನ ಸ್ಥಾನದಲ್ಲಿದೆ. ಭಾರತ-ಪಾಕ್ ಮೂಲದ ಆಟಗಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಕೆನಡಾ ಕೂಡ ಪಾಕ್ಗೆ ಕಠಿಣ ಸವಾಲೇ ಆಗುವ ಅಪಾಯವಿದೆ.
ಪಾಕ್ ಸೂಪರ್-8 ಲೆಕ್ಕಾಚಾರ...
ಪಾಕಿಸ್ತಾನದ ಸೂಪರ್-8 ಪ್ರವೇಶ ಈಗ ಬರೀ ಅದರ ಗೆಲುವನ್ನು ಅವಲಂಭಿಸಿಲ್ಲ. ಜತೆಗೆ ಅಮೆರಿಕದ ಕೊನೇ 2 ಪಂದ್ಯಗಳ ಫಲಿತಾಂಶವೂ ಪಾಕ್ ಪಾಲಿಗೆ ನಿರ್ಣಾಯಕವೆನಿಸಿದೆ. ಅಮೆರಿಕ ತನ್ನ ಕೊನೇ 2 ಪಂದ್ಯಗಳಲ್ಲಿ ಭಾರತ ಮತ್ತು ಐರ್ಲೆಂಡ್ ಎದುರು ಆಡಲಿದೆ. ಅಮೆರಿಕ ಇವೆರಡರಲ್ಲಿ ಒಂದರಲ್ಲಿ ಗೆದ್ದರೂ ಪಾಕ್ ಟೂರ್ನಿಯಿಂದ ಹೊರಬೀಳಲಿದೆ. ಅಮೆರಿಕ ಎರಡರಲ್ಲೂ ಸೋತು, ಪಾಕ್ ಕೊನೇ ಎರಡೂ ಪಂದ್ಯ ಗೆದ್ದರೆ ಆಗ ರನ್ರೇಟ್ ಲೆಕ್ಕಾಚಾರ ನಿರ್ಣಾಯಕ ಪಾತ್ರ ವಹಿಸಲಿದೆ. ಹೀಗಾಗಿ ಪಾಕ್ ಕೊನೇ 2 ಪಂದ್ಯಗಳಲ್ಲಿ ದೊಡ್ಡ ಅಂತರದಿಂದ ಗೆದ್ದು ರನ್ರೇಟ್ ಕೂಡ ಸುಧಾರಿಸಿಕೊಳ್ಳುವುದು ಅಗತ್ಯವಾಗಿದೆ. ಸದ್ಯಕ್ಕೆ ಪಾಕ್ (-0.150) ರನ್ರೇಟ್ ಕೂಡ ಅಮೆರಿಕಕ್ಕಿಂತ (+0.626) ಕಳಪೆಯಾಗಿದೆ.