

ಹೈದರಾಬಾದ್: ಗೆಲುವಿನ ಹಳಿಗೆ ಮರಳುವ ಮೂಲಕ ಪ್ಲೇಆಫ್ ಆಸೆಗೆ ಬಲ ತುಂಬಿಸಿಕೊಳ್ಳುವ ಹಂಬಲದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಸೋಮವಾರ ಮುಖಾಮುಖಿ ಆಗಲಿವೆ. ಈಗಾಗಲೆ ಪ್ಲೇಆಫ್ ಆಸೆಯನ್ನು ಬಹುತೇಕ ಕೈಚೆಲ್ಲಿರುವ ಸನ್ರೈಸರ್ಸ್ ತಂಡ ಈ ಪಂದ್ಯ ಸೋತರೆ ಅಧಿಕೃತವಾಗಿ ಹೊರಬೀಳಲಿದೆ.
ಡೆಲ್ಲಿ ತಂಡ ಕಳೆದ 2 ಪಂದ್ಯಗಳಲ್ಲಿ ಆರ್ಸಿಬಿ, ಕೆಕೆಆರ್ ಎದುರು ಸೋತು ಲಯ ತಪ್ಪಿದೆ. ಪ್ಲೇಆ್ ರೇಸ್ ರೋಚಕ ಹಂತ ತಲುಪಿರುವ ಈ ಸಮಯದಲ್ಲಿ ಅಕ್ಷರ್ ಪಟೇಲ್ ಪಡೆ ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸುಧಾರಣೆ ಕಾಣಬೇಕಾಗಿದೆ. ಕನ್ನಡಿಗ ಕರುಣ್ ನಾಯರ್ ಆರಂಭಿಕ ಪಂದ್ಯದ ಪ್ರತಾಪದ ಬಳಿಕ ಲಯ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್ಗೆ ಇತರ ವೇಗಿಗಳು ಸಮರ್ಥ ಬೆಂಬಲ ಒದಗಿಸುತ್ತಿಲ್ಲ. ಸನ್ರೈಸರ್ಸ್ ತಂಡಕ್ಕೆ ಬ್ಯಾಟಿಂಗ್ ವಿಭಾಗದ ಅಸ್ಥಿರ ನಿರ್ವಹಣೆ ದೊಡ್ಡ ಹಿನ್ನಡೆ ತಂದಿದೆ. ಟ್ರಾವಿಸ್ ಹೆಡ್, ಇಶಾನ್ ಕಿಶನ್ ಸತತ ವೈಫಲ್ಯ ಕಾಣುತ್ತಿದ್ದಾರೆ. ಬೌಲಿಂಗ್ನಲ್ಲಿ ಅನುಭವಿ ವೇಗಿ ಮೊಹಮದ್ ಶಮಿ ಪರಿಣಾಮಕಾರಿ ಬೌಲಿಂಗ್ ನಡೆಸುವಲ್ಲಿ ವಿಲರಾಗಿದ್ದಾರೆ. ಶಮಿ 9 ಪಂದ್ಯಗಳಲ್ಲಿ 6 ವಿಕೆಟ್ ಮಾತ್ರ ಗಳಿಸಿದ್ದು, ಪ್ರತಿ ಓವರ್ಗೆ 11ಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ.
ಪ್ಲೇಆಫ್ ಲೆಕ್ಕಾಚಾರ...
ಆರಂಭಿಕ 4 ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಡೆಲ್ಲಿ ತಂಡ ನಂತರದ 6 ಪಂದ್ಯಗಳಲ್ಲಿ 2ರಲ್ಲಷ್ಟೇ ಜಯಿಸಿದೆ. ಒಟ್ಟು 10 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 4ರಲ್ಲಿ ಸೋತಿರುವ ಡೆಲ್ಲಿ ಪ್ಲೇಆಫ್ಗೇರಲು ಉಳಿದ 4 ಪಂದ್ಯಗಳಲ್ಲಿ 2ರಲ್ಲಾದರೂ ಗೆಲ್ಲಲೇಬೇಕಿದೆ. ಜತೆಗೆ ರನ್ರೇಟ್ ಕೂಡ ಸುಧಾರಿಸಿಕೊಳ್ಳುವ ಅಗತ್ಯವಿದೆ. ಮತ್ತೊಂದೆಡೆ ಸನ್ರೈಸರ್ಸ್ 10 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 7ರಲ್ಲಿ ಸೋತಿದೆ. ಉಳಿದ 4 ಪಂದ್ಯಗಳಲ್ಲಿ ಗೆದ್ದರೂ ಸನ್ರೈಸರ್ಸ್ಗೆ ಪ್ಲೇಆಫ್ ಸ್ಥಾನ ಖಚಿತವಿಲ್ಲ. ಇತರ ಲಿತಾಂಶಗಳು ಪೂರಕವಾಗಿ ಬಂದರಷ್ಟೇ ಪ್ಲೇಆ್ಗೇರಬಹುದಾಗಿದೆ.
ಮುಖಾಮುಖಿ: 25
ಸನ್ರೈಸರ್ಸ್: 13
ಡೆಲ್ಲಿ: 12
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
ಅಕ್ಷರ್ ಗಾಯದ ಚಿಂತೆ
ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಕಳೆದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಎಡಗೈ ಗಾಯಕ್ಕೊಳಗಾಗಿದ್ದು, ಸನ್ರೈಸರ್ಸ್ ವಿರುದ್ಧದ ಪಂದ್ಯಕ್ಕೆ ಪೂರ್ಣ ಫಿಟ್ ಆಗುವರೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಅವರು ಎಡಗೈ ಸ್ಪಿನ್ ಬೌಲರ್ ಆಗಿರುವುದರಿಂದ ಪೂರ್ಣ ಫಿಟ್ ಆದರಷ್ಟೇ ಆಡುವ ಸಾಧ್ಯತೆ ಇದೆ. ಅಕ್ಷರ್ ಗೈರಾದರೆ ಉಪನಾಯಕ ಫಾಫ್ ಡು ಪ್ಲೆಸಿಸ್ ತಂಡವನ್ನು ಮುನ್ನಡೆಸಬಹುದು.
*43: ಕೆಎಲ್ ರಾಹುಲ್ ಇನ್ನು 43 ರನ್ ಗಳಿಸಿದರೆ ಟಿ20 ಕ್ರಿಕೆಟ್ನಲ್ಲಿ 8 ಸಾವಿರ ರನ್ ಪೂರೈಸಲಿದ್ದಾರೆ.
*1: ಕುಲದೀಪ್ ಯಾದವ್ ಇನ್ನು 1 ವಿಕೆಟ್ ಗಳಿಸಿದರೆ ಐಪಿಎಲ್ನಲ್ಲಿ 100 ವಿಕೆಟ್ ಪೂರೈಸಲಿದ್ದಾರೆ. ಇದು ಕುಲದೀಪ್ಗೆ ಡೆಲ್ಲಿ ಪರ 50ನೇ ಪಂದ್ಯವಾಗಿದೆ.