

ನವದೆಹಲಿ: 18ನೇ ಆವೃತ್ತಿಯ ಐಪಿಎಲ್ ಶುರುವಾಗುವುದಕ್ಕೆ ಇನ್ನೂ ಬಹಳ ಸಮಯವಿದ್ದು, ಇದಕ್ಕೆ ಮುಂಚಿವತಾಗಿ ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಕೋಚ್ ಹುದ್ದೆಯಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ರನ್ನು ವಜಾಗೊಳಿಸಲಾಗಿದೆ.
ರಿಕಿ ಪಾಂಟಿಂಗ್ ಕಳೆದ 7 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 17ನೇ ಆವೃತ್ತಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ ಆರನೇ ಸ್ಥಾನದಲ್ಲಿತ್ತು. ರಿಷಭ್ ಪಂತ್ ಕಮ್ಬ್ಯಾಕ್ ಬಳಿಕ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನೀರಸ ಪ್ರದರ್ಶನದಿಂದ ಹೊರಬಿದ್ದಿತ್ತು. ಈ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಕೋಚ್ ಸ್ಥಾನವನ್ನು ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ತುಂಬಲಿದ್ದಾರೆ ಎಂದು ತಿಳಿದು ಬಂದಿದ್ದು, ನಾಯಕನಾಗಿ ರಿಷಭ್ ಪಂತ್ ಮುಂದುವರೆಯಲಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ತಂಡದ ಮ್ಯಾನೇಜ್ಮೆಂಟ್ ಅಧಿಕೃತವಾಗಿ ಪ್ರಕಟಣೆ ಹೊರಡಿಸಬೇಕಿದೆ.
ಪಾಂಟಿಂಗ್ ತರಬೇತಿಯಲ್ಲಿ ತಂಡವು 2019 (ಪ್ಲೇಆಫ್), 2020 (ಫೈನಲ್), 2021 (ಪ್ಲೇಆಫ್) ಪ್ರವೇಶಿಸಿತ್ತು. ನೂತನ ಕೋಚ್ ಹುಡುಕಾಟದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮ್ಯಾನೇಜ್ಮೆಂಟ್ ಯಾರನ್ನು ನೇಮಿಸಲಿದೆ ಎಂದು ಕಾದು ನೋಡಬೇಕಿದೆ.