

ನವದೆಹಲಿ: ಟ್ರಾವಿಡ್ ಹೆಡ್ ಮತ್ತು ಅಭಿಷೇಕ್ ಶರ್ಮ ಜೋಡಿ ಪವರ್ಪ್ಲೇನಲ್ಲೇ 125 ರನ್ ಪೇರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿತು. ಇದರಿಂದಾಗಿ ಸನ್ರೈಸರ್ಸ್ ತಂಡ ಪವರ್ಪ್ಲೇನಲ್ಲೇ ಪಂದ್ಯವನ್ನು ನಮ್ಮಿಂದ ಕಸಿದುಕೊಂಡಿತು ಎಂದು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ 67 ರನ್ಗಳಿಂದ ಸೋಲುಂಡ ಬಳಿಕ ಬೇಸರಿಸಿದ್ದಾರೆ.
ಟೂರ್ನಿಯಲ್ಲಿ 3ನೇ ಬಾರಿಗೆ 250ರ ಗಡಿ ದಾಟಿದ ಸನ್ರೈಸರ್ಸ್ 267 ರನ್ ಸವಾಲು ನೀಡಿತು. ಪ್ರತಿಯಾಗಿ ಡೆಲ್ಲಿ ಆರಂಭಿಕರಾದ ಡೇವಿಡ್ ವಾರ್ನರ್ (1) ಮತ್ತು ಪೃಥ್ವಿ ಷಾ (16) ವಿಕೆಟ್ ಬೇಗನೆ ಕಳೆದುಕೊಂಡರೆ, ಜೇಕ್ ಫ್ರೇಸರ್ ಮೆಕ್ಗುರ್ಕ್ (65) ಮತ್ತು ಅಭಿಷೇಕ್ ಪೊರೆಲ್ (42) 3ನೇ ವಿಕೆಟ್ಗೆ 30 ಎಸೆತಗಳಲ್ಲಿ 84 ರನ್ ಸೇರಿಸಿ ಡೆಲ್ಲಿ ಹೋರಾಟ ಜೀವಂತವಿಟ್ಟರು. ಈ ಜೋಡಿಯನ್ನು ಸ್ಪಿನ್ನರ್ ಮಯಾಂಕ್ ಮಾರ್ಕಂಡೆ (26ಕ್ಕೆ 2) ಡಗೌಟ್ಗೆ ಅಟ್ಟಿದರು. ಬಳಿಕ ವೇಗಿ ಟಿ. ನಟರಾಜನ್ (19ಕ್ಕೆ 4) ಡೆಲ್ಲಿ ಮಧ್ಯಮ ಕ್ರಮಾಂಕಕ್ಕೆ ಕಡಿವಾಣ ಹೇರಿದರು. ನಾಯಕ ರಿಷಭ್ ಪಂತ್ (44) ಹೋರಾಟ ಸೋಲಿನ ಅಂತರವನ್ನಷ್ಟೇ ತಗ್ಗಿಸಿತು.
"ಪವರ್ಪ್ಲೇ ಉಭಯ ತಂಡಗಳ ನಡುವೆ ವ್ಯತ್ಯಾಸ ತಂದಿತು. ಇಬ್ಬನಿ ಸಮಸ್ಯೆಯಿಂದಾಗಿ ಬೌಲಿಂಗ್ ಆಯ್ದುಕೊಂಡೆ ಮತ್ತು 220&230 ರನ್ಗಳಿಗೆ ನಿಯಂತ್ರಿಸಿದರೆ ಗೆಲ್ಲುವ ವಿಶ್ವಾಸವಿತ್ತು' ಎಂದು ರಿಷಭ್ ಪಂತ್ ವಿವರಿಸಿದ್ದಾರೆ.
ಬ್ಯಾಟಿಂಗ್ನಿಂದ ಪ್ರಾಯೋಜಕರನ್ನು ಗೆಲ್ಲಬಹುದು. ಆದರೆ ಬೌಲಿಂಗ್ನಿಂದ ಚಾಂಪಿಯನ್ಷಿಪ್ ಗೆಲ್ಲಬಹುದು ಎಂದು ಯಾರೋ ಹೇಳಿದ್ದ ನೆನಪು. ಸ್ಕೋರ್ಕಾರ್ಡ್ನಲ್ಲಿ ನಮ್ಮ ಬೌಲಿಂಗ್ ಅಂಕಿ&ಅಂಶ ಕೆಟ್ಟದಾಗಿ ಕಾಣಿಸಬಹುದು. ಆದರೆ ನಾವು ಪಂದ್ಯ ಗೆಲ್ಲಿಸುತ್ತಿದ್ದೇವೆ ಎಂದು ಸನ್ರೈಸರ್ಸ್ ವೇಗಿ ಭುವನೇಶ್ವರ್ ಹೇಳಿದ್ದಾರೆ.