ಮಹಿಳೆಯರ ಟೆಸ್ಟ್​ನಲ್ಲಿ 2ನೇ ದಿನ ಒಟ್ಟು 19 ವಿಕೆಟ್​ ಪತನ! ಭಾರತಕ್ಕೆ ಭಾರಿ ಮುನ್ನಡೆ

womens test web
Published on

ಮುಂಬೈ: ಆಲ್ರೌಂಡರ್​ ದೀಪ್ತಿ ಶರ್ಮ (7ಕ್ಕೆ 5) ಮಾರಕ ಸ್ಪಿನ್​ ದಾಳಿಯ ನೆರವಿನಿಂದ ಭಾರತ ತಂಡ ಮಹಿಳೆಯರ ಏಕೈಕ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್​ ಎದುರು ಭರ್ಜರಿ ಮೇಲುಗೈ ಸಾಧಿಸಿದೆ. ಭಾರತ ತಂಡ 2ನೇ ಇನಿಂಗ್ಸ್​ನಲ್ಲಿ ಕುಸಿತ ಕಾಣುವುದರೊಂದಿಗೆ 2ನೇ ದಿನದಾಟದಲ್ಲಿ ಒಟ್ಟು 19 ವಿಕೆಟ್​ ಉರುಳಿದೆ. ಇದರ ನಡುವೆಯೂ ಹರ್ಮಾನ್​ಪ್ರೀತ್​ ಕೌರ್​ ಬಳಗ ಭಾರಿ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ.

ಡಿವೈ ಪಾಟೀಲ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ 7 ವಿಕೆಟ್​ಗೆ 410 ರನ್​ಗಳಿಂದ ಮೊದಲ ಇನಿಂಗ್ಸ್​ ಮುಂದುವರಿಸಿದ ಭಾರತ ತಂಡ, 428 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಇಂಗ್ಲೆಂಡ್​, ಚಹಾ ವಿರಾಮಕ್ಕೆ ಮುನ್ನ 35.3 ಓವರ್​ಗಳಲ್ಲಿ 136 ರನ್​ಗಳಿಗೆ ಸರ್ವಪತನ ಕಂಡಿತು. ಮೊದಲ ಇನಿಂಗ್ಸ್​ನಲ್ಲಿ 292 ರನ್​ ಮುನ್ನಡೆ ಸಾಧಿಸಿದ ಭಾರತಕ್ಕೆ ಫಾಲೋಆನ್​ ಹೇರುವ ಅವಕಾಶವಿತ್ತು. ಬದಲಾಗಿ 2ನೇ ಸರದಿ ಆರಂಭಿಸಿದ ಭಾರತ, ದಿನದಂತ್ಯಕ್ಕೆ 6 ವಿಕೆಟ್​ಗೆ 186 ರನ್​ ಗಳಿಸಿದೆ. ಭಾರತ ಈಗ ಒಟ್ಟಾರೆ 478 ರನ್​ ಮುನ್ನಡೆ ಸಾಧಿಸಿದೆ. ಪಂದ್ಯದಲ್ಲಿ ಇನ್ನೂ 2 ದಿನದಾಟ ಬಾಕಿ ಉಳಿದಿದ್ದು, ಭಾರತಕ್ಕೆ ಗೆಲುವು ಬಹುತೇಕ ಖಚಿತವೆನಿಸಿದೆ. 2ನೇ ದಿನದಾಟದಲ್ಲಿ ಉರುಳಿದ ಒಟ್ಟು 19 ವಿಕೆಟ್​ಗಳಲ್ಲಿ 15 ಸ್ಪಿನ್ನರ್​ಗಳ ಪಾಲಾದವು.

ಭಾರತ: 104.3 ಓವರ್​ಗಳಲ್ಲಿ 428 (ದೀಪ್ತಿ 67, ಸ್ನೇಹಾ 30, ಎಕ್ಲೆಸ್ಟೋನ್​ 91ಕ್ಕೆ 3, ಲೌರೆನ್​ ಬೆಲ್​ 67ಕ್ಕೆ 3) ಮತ್ತು 42 ಓವರ್​ಗಳಲ್ಲಿ 6 ವಿಕೆಟ್​ಗೆ 186 (ಶೆಫಾಲಿ 33, ಸ್ಮೃತಿ 26, ಯಸ್ತಿಕಾ 9, ಜೆಮೀಮಾ 27, ಹರ್ಮಾನ್​ಪ್ರೀತ್​ 44*, ದೀಪ್ತಿ 20, ಪೂಜಾ 17*, ಚಾರ್ಲಿ ಡೀನ್​ 68ಕ್ಕೆ 4, ಎಕ್ಲೆಸ್ಟೋನ್​ 76ಕ್ಕೆ 2); ಇಂಗ್ಲೆಂಡ್​: 35.3 ಓವರ್​ಗಳಲ್ಲಿ 136 (ಬೆಯುಮೌಂಟ್​ 10, ಹೀದರ್​ ನೈಟ್​ 11, ಸೀವರ್​ 59, ವ್ಯಾಟ್​ 19, ದೀಪ್ತಿ 7ಕ್ಕೆ 5, ಸ್ನೇಹಾ 25ಕ್ಕೆ 2, ರೇಣುಕಾ 32ಕ್ಕೆ 1).

ಕನ್ನಡತಿ ಶುಭಾಗೆ ಗಾಯ

ಪದಾರ್ಪಣೆ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಕನ್ನಡತಿ ಶುಭಾ ಸತೀಶ್​ ಎಡಗೈ ಬೆರಳಿನ ಮೂಳೆಯಲ್ಲಿ ಕೂದಲೆಳೆಯಷ್ಟು ಬಿರುಕು ಮೂಡಿರುವ ಕಾರಣ 2ನೇ ದಿನದಾಟದಲ್ಲಿ ಫೀಲ್ಡಿಂಗ್​ಗೆ ಇಳಿಯಲಿಲ್ಲ. ಬಳಿಕ ಭಾರತದ 2ನೇ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ಗೂ ಬರಲಿಲ್ಲ. 3ನೇ ದಿನವೂ ಅವರು ಬ್ಯಾಟಿಂಗ್​ ಮಾಡುವುದು ಅನುಮಾನವೆನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net