ರಜೆ ಘೋಷಣೆ ಮಾಡ್ಬಿಡಿ... ಹಾಂಗ್​​ ಕಾಂಗ್​ ಸಿಕ್ಸಸ್‌ನಲ್ಲಿ ಭಾರತದ ಸೋಲನ್ನು ಸಂಭ್ರಮಿಸಿದ ಪಾಕ್​ ಪ್ರಧಾನಿ ಟ್ರೋಲ್!​ Hong Kong Sixes

Hong Kong Sixes
ಹಾಂಗ್​​ ಕಾಂಗ್​ ಸಿಕ್ಸಸ್‌ನಲ್ಲಿ ಭಾರತದ ಸೋಲನ್ನು ಸಂಭ್ರಮಿಸಿದ ಪಾಕ್​ ಪ್ರಧಾನಿ ಟ್ರೋಲ್!​
Published on: 

ಇಸ್ಲಮಾಬಾದ್​: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಸಾಕು, ಅದು ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆದರೂ ಕ್ರೀಡಾಭಿಮಾನಿಗಳು ಅಪಾರ ಕುತೂಹಲ ಇರುತ್ತದೆ. ಇತ್ತೀಚೆಗೆ ನಡೆದ ಹಾಂಗ್ ಕಾಂಗ್ ಸಿಕ್ಸಸ್ 2026ರ ( Hong Kong Sixes ) ಆರಂಭಿಕ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡವು 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಕ್ರಿಕೆಟ್ ಹಾಂಗ್ ಕಾಂಗ್ ಆಯೋಜಿಸುವ ಹಾಗೂ ಐಸಿಸಿ (ICC) ಮಾನ್ಯತೆ ಪಡೆದ ಈ ಚುಟುಕು ಟೂರ್ನಿಯಲ್ಲಿ ಪಾಕ್ ಪಡೆ ಗೆಲುವು ಸಾಧಿಸಿದ ಬೆನ್ನಲ್ಲೇ, ಆ ದೇಶದ ಪ್ರಧಾನಿ ಶಹಬಾಜ್ ಷರೀಫ್ ಮಾಡಿರುವ ಎಕ್ಸ್​ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್‌ಗೆ ಕಾರಣವಾಗಿದೆ.

ಸಾಮಾನ್ಯವಾಗಿ ಏಷ್ಯಾ ಕಪ್ ಹಾಗೂ ಐಸಿಸಿ ವಿಶ್ವಕಪ್‌ಗಳಂತಹ ಪ್ರಮುಖ ಜಾಗತಿಕ ಟೂರ್ನಿಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸತತವಾಗಿ ಸೋಲನುಭವಿಸುತ್ತಲೇ ಬಂದಿದೆ. ಆದರೆ, ಹಾಂಗ್ ಕಾಂಗ್ ಸಿಕ್ಸಸ್‌ನಂತಹ ಪ್ರದರ್ಶನ ಪಂದ್ಯದ ಗೆಲುವನ್ನೇ ಪ್ರಧಾನಿ ಶಹಬಾಜ್ ಷರೀಫ್ ವಿಶ್ವಕಪ್ ಗೆದ್ದಂತೆ ಸಂಭ್ರಮಿಸಿ ಅಭಿನಂದನಾ ಪೋಸ್ಟ್ ಹಾಕಿದ್ದಾರೆ. ಇದನ್ನು ನೋಡಿ ನೆಟ್ಟಿಗರು "ಇದಕ್ಕೆ ದೇಶದಲ್ಲಿ ರಾಷ್ಟ್ರೀಯ ರಜೆ ಘೋಷಣೆ ಮಾಡಿಬಿಡಿ ಪ್ರಧಾನಿಯವರೇ" ಎಂದು ತೀವ್ರವಾಗಿ ಕಾಲೆಳೆಯುತ್ತಿದ್ದಾರೆ. ರಾಜಕಾರಣಿಯೊಬ್ಬರು ಸಣ್ಣ ಮಟ್ಟದ ಟೂರ್ನಿಯ ಗೆಲುವಿಗೆ ಇಷ್ಟೊಂದು ಹೈಪ್ ನೀಡಿದ್ದನ್ನು ಕಂಡು ಕ್ರಿಕೆಟ್ ಪ್ರಿಯರು ತಮಾಷೆ ಮಾಡುತ್ತಿದ್ದಾರೆ.

Also Read
ವೈಭವ್​, ಅಭಿಷೇಕ್​ ಪ್ರತಿಭೆಗೆ... ಬಿಸಿಸಿಐ ಆಯ್ಕೆಗಾರರಿಗೆ ಈ ತಪ್ಪು ಮಾಡದಂತೆ 'ವಿಶ್ವ​ಕಪ್​ ಹೀರೋ' ಯುವಿ ಕಿವಿಮಾತು | Yuvraj Singh
Hong Kong Sixes

ಶಹಬಾಜ್ ಷರೀಫ್ ತಮ್ಮ ಎಕ್ಸ್ (X) ಖಾತೆಯಲ್ಲಿ, "ಹಾಂಗ್ ಕಾಂಗ್ ಸಿಕ್ಸಸ್ 2026ರ ಆರಂಭಿಕ ಪಂದ್ಯದಲ್ಲಿ ಭಾರತದ ವಿರುದ್ಧ ಭರ್ಜರಿ 4 ವಿಕೆಟ್‌ಗಳ ಗೆಲುವು ಸಾಧಿಸಿದ ನಮ್ಮ ಹುಡುಗರಿಗೆ ಅಭಿನಂದನೆಗಳು! ಇದೊಂದು ಅತ್ಯುತ್ತಮ ಪಂದ್ಯವಾಗಿತ್ತು. ಆಟಗಾರರನ್ನು ತಯಾರು ಮಾಡುವಲ್ಲಿ ಮತ್ತು ಬೆಂಬಲಿಸುವಲ್ಲಿ ಶ್ರಮಿಸಿದ ಪಿಸಿಬಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಹಾಗೂ ಅವರ ತಂಡದ ಶ್ರಮವನ್ನು ನಾನು ಶ್ಲಾಘಿಸುತ್ತೇನೆ," ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರಧಾನಿಯವರನ್ನು ತೀವ್ರವಾಗಿ ಟ್ರೋಲ್​ ಮಾಡುತ್ತಿದ್ದಾರೆ.

ಇನ್ನು ಈ ಪಂದ್ಯದ ವಿಚಾರಕ್ಕೆ ಬರುವುದಾದರೆ, ಟಾಸ್ ಗೆದ್ದ ಪಾಕಿಸ್ತಾನ ನಾಯಕ ಅಬ್ಬಾಸ್ ಅಫ್ರಿದಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ರಾಹುಲ್ ತ್ರಿಪಾಠಿ ಮತ್ತು ನಿತೀಶ್ ರಾಣಾ ಮೊದಲ ಓವರ್‌ನಲ್ಲಿ 11 ರನ್‌ಗಳ ಸಾಧಾರಣ ಆರಂಭ ನೀಡಿದರು. ಆದರೆ ಎರಡನೇ ಓವರ್‌ನಲ್ಲಿ ಮುಹಮ್ಮದ್ ಶಹಜಾದ್, ತ್ರಿಪಾಠಿ (9) ವಿಕೆಟ್ ಕಬಳಿಸಿ ಭಾರತಕ್ಕೆ ಮೊದಲ ಆಘಾತ ನೀಡಿದರು. ಈ ಹಂತದಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಶಶಾಂಕ್ ಸಿಂಗ್ ಕೇವಲ 3 ಎಸೆತಗಳಲ್ಲಿ 16 ರನ್ ಸಿಡಿಸಿ ಭಾರತದ ರನ್ ವೇಗಕ್ಕೆ ಚುರುಕು ಮುಟ್ಟಿಸಿದರು.

ಮೂರನೇ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿದ ಪಾಕ್ ನಾಯಕ ಅಬ್ಬಾಸ್ ಅಫ್ರಿದಿ ಚಾಣಾಕ್ಷ ಬೌಲಿಂಗ್ ಮೂಲಕ ನಿತೀಶ್ ರಾಣಾರನ್ನು ಕಟ್ಟಿಹಾಕಿ ಕೇವಲ 11 ರನ್ ನೀಡಿದರು. ಇದರಿಂದ ಭಾರತ 3 ಓವರ್‌ಗಳಲ್ಲಿ 44/1 ರನ್ ಗಳಿಸಿತ್ತು. ನಾಲ್ಕನೇ ಓವರ್‌ನಲ್ಲಿ ಅಬ್ಬರಿಸಿದ ಶಶಾಂಕ್ ಸಿಂಗ್ 3 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ 24 ರನ್ ದೋಚಿದರು. ಆದರೆ 14 ಎಸೆತಗಳಲ್ಲಿ 19 ರನ್ ಗಳಿಸಿ ರನ್ ಗಳಿಸಲು ಪರದಾಡುತ್ತಿದ್ದ ನಿತೀಶ್ ರಾಣಾ ಅವರ ಬದಲಿಗೆ 5ನೇ ಓವರ್‌ನಲ್ಲಿ ರಾಹುಲ್ ತೇವಾಟಿಯಾ ಕ್ರೀಸ್‌ಗೆ ಬಂದರು.

ಆದರೆ, ಐದನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಅಬ್ದುಲ್ ಸಮದ್ ಭಾರತೀಯ ಬ್ಯಾಟರ್‌ಗಳಿಗೆ ಚುರುಕು ಮುಟ್ಟಿಸಿದರು. ತೇವಾಟಿಯಾ ಮತ್ತು ಭಾರತ ತಂಡದ ನಾಯಕ ಕೃಣಾಲ್ ಪಾಂಡ್ಯ ಇಬ್ಬರನ್ನೂ ಸತತ ಎಸೆತಗಳಲ್ಲಿ 'ಗೋಲ್ಡನ್ ಡಕ್' (ಸೊನ್ನೆ) ಮಾಡುವ ಮೂಲಕ ಭಾರತಕ್ಕೆ ಬಿಗ್ ಶಾಕ್ ನೀಡಿದರು. ಕೊನೆಯ ಓವರ್‌ನ ಮೊದಲ ಎಸೆತದಲ್ಲೇ ಭರ್ಜರಿಯಾಗಿ ಆಡುತ್ತಿದ್ದ ಶಶಾಂಕ್ ಸಿಂಗ್ (11 ಎಸೆತಗಳಲ್ಲಿ 40 ರನ್) ಕೂಡ ಅಹಮದ್ ದಾನಿಯಾಲ್‌ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಟಿ. ನಟರಾಜನ್ ಅವರ ನೆರವಿನಿಂದ ಭಾರತ ನಿಗದಿತ 6 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 88 ರನ್ ಕಲೆಹಾಕಿತು.

Also Read
ಏನಾಯ್ತು ಭುವಿಗೆ? ಸ್ಟಾರ್​ ಬೌಲರ್​ ವಿರುದ್ಧ ‘1983ರ ವಿಶ್ವಕಪ್ ಹೀರೋ’ ಅಸಮಾಧಾನ..! Bhuvneshwar Kumar
Hong Kong Sixes

89 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡದ ಆರಂಭಿಕರಾದ ಖವಾಜಾ ನಾಫೆ ಮತ್ತು ನಾಯಕ ಅಬ್ಬಾಸ್ ಅಫ್ರಿದಿ ಮೊದಲ ಎಸೆತದಿಂದಲೇ ಅಬ್ಬರಿಸಲು ತೊಡಗಿದರು. ಭಾರತದ ನಾಯಕ ಕೃಣಾಲ್ ಪಾಂಡ್ಯ ಎಸೆದ ಮೊದಲ ಓವರ್‌ನಲ್ಲೇ ಅಬ್ಬಾಸ್ ಅಫ್ರಿದಿ ಸತತ 5 ಸಿಕ್ಸರ್‌ಗಳನ್ನು ಸಿಡಿಸಿ ಬರೋಬ್ಬರಿ 31 ರನ್ ದೋಚಿದರು. ನಂತರದ ಓವರ್‌ನಲ್ಲಿ ಟಿ. ನಟರಾಜನ್ ಬೌಲಿಂಗ್‌ನಲ್ಲೂ 28 ರನ್ ಹರಿದುಬಂದಿದ್ದರಿಂದ ಪಾಕಿಸ್ತಾನದ ಗೆಲುವು ಅತ್ಯಂತ ಸುಲಭವಾಯಿತು.

ಕೇವಲ 3 ಓವರ್‌ಗಳಲ್ಲಿ 73 ರನ್ ಗಳಿಸಿ ಮುನ್ನುಗ್ಗುತ್ತಿದ್ದ ಪಾಕಿಸ್ತಾನಕ್ಕೆ ಶಶಾಂಕ್ ಸಿಂಗ್, ಅಬ್ಬಾಸ್ ಅಫ್ರಿದಿ (8 ಎಸೆತಗಳಲ್ಲಿ 35 ರನ್) ವಿಕೆಟ್ ಪಡೆಯುವ ಮೂಲಕ ಸಣ್ಣ ಸಮಾಧಾನ ತಂದಿತ್ತರು. ಆದರೆ ಮತ್ತೊಂದೆಡೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದ ಖವಾಜಾ ನಾಫೆ ಕೇವಲ 12 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ ಅಜೇಯ 41 ರನ್ ಚಚ್ಚಿದರು. ಅಂತಿಮವಾಗಿ ಇರ್ಫಾನ್ ಖಾನ್ ವಿನ್ನಿಂಗ್ ರನ್ ಬಾರಿಸುವುದರೊಂದಿಗೆ ಪಾಕಿಸ್ತಾನ ಕೇವಲ 3.5 ಓವರ್‌ಗಳಲ್ಲಿ 89 ರನ್ ಗಳಿಸಿ 4 ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಮೂಲಕ ಡಿಫೆಂಡಿಂಗ್ ಚಾಂಪಿಯನ್ ಪಾಕಿಸ್ತಾನ ಹಾಂಗ್ ಕಾಂಗ್ ಸಿಕ್ಸಸ್ 2026ರಲ್ಲಿ ಶುಭಾರಂಭ ಮಾಡಿತು, (ಏಜೆನ್ಸೀಸ್​).

Related Stories