

ನವದೆಹಲಿ: ವರ್ಷಗಳ ಬಳಿಕ ಭಾರತೀಯ ಕ್ರಿಕೆಟ್ ತಂಡಕ್ಕೆ ಪುನರಾಗಮನ ಮಾಡಿದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ( Bhuvneshwar Kumar ), ಮತ್ತೆ ನೀರಸ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ಅದ್ಭುತವಾಗಿ ಬೌಲಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದ ಭುವಿ, ಟೀಮ್ ಇಂಡಿಯಾ ಪರ ಮೈದಾನಕ್ಕಿಳಿಯುತ್ತಿದ್ದಂತೆಯೇ ತಮ್ಮ ಹಳೆಯ ನಿಯಂತ್ರಣ ಮತ್ತು ತೀಕ್ಷ್ಣತೆಯನ್ನು ಕಳೆದುಕೊಂಡಂತೆ ಕಾಣುತ್ತಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಅವರು ನೀಡಿದ ಕಳಪೆ ಪ್ರದರ್ಶನವು ಪ್ರಸ್ತುತ ಮಾಜಿ ಕ್ರಿಕೆಟಿಗರ ತೀವ್ರ ವಿಮರ್ಶೆಗೆ ಗುರಿಯಾಗಿದೆ. ಭುವಿ ಅವರ ಬೌಲಿಂಗ್ನಲ್ಲಿ ಯಾವುದೇ ಶಕ್ತಿ ಉಳಿದಿಲ್ಲ ಎಂಬ ಮಾತುಗಳು ಈಗ ಕ್ರಿಕೆಟ್ ವಲಯದಲ್ಲಿ ಜೋರಾಗಿ ಕೇಳಿಬರುತ್ತಿವೆ.
ಸುಮಾರು ನಾಲ್ಕು ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿರುವ ಭುವನೇಶ್ವರ್ ಕುಮಾರ್ ಮೇಲೆ ಬಿಸಿಸಿಐ ಹಾಗೂ ಅಭಿಮಾನಿಗಳು ಅಪಾರ ಭರವಸೆ ಇಟ್ಟುಕೊಂಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಸರಣಿಯ ಜತೆಗೆ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಟಿ20 ಪಂದ್ಯಕ್ಕೂ ಅವರನ್ನು ಆಯ್ಕೆ ಮಾಡಲಾಗಿತ್ತು. ಇದು ಮುಂಬರುವ ದಿನಗಳಲ್ಲಿ ಇತರ ಮಾದರಿಯ ಕ್ರಿಕೆಟ್ಗೂ ಅವರನ್ನು ಪರಿಗಣಿಸಲು ಬಾಗಿಲು ತೆರೆಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಸರಣಿಯ ಮೊದಲ ಪಂದ್ಯದಲ್ಲೇ 49 ರನ್ ಬಿಟ್ಟುಕೊಟ್ಟು ವಿಕೆಟ್ ಪಡೆಯಲು ವಿಫಲರಾದ ಭುವಿ, ಎರಡನೇ ಪಂದ್ಯದಲ್ಲಿ 50 ರನ್ ನೀಡಿ ಕೇವಲ 1 ವಿಕೆಟ್ ಪಡೆದರು. ಮೂರನೇ ಪಂದ್ಯದಲ್ಲೂ 40 ರನ್ ನೀಡಿ ವಿಕೆಟ್ ಪಡೆಯಲಿಲ್ಲ. ಈ ಮೂಲಕ ಒಟ್ಟು ಮೂರು ಪಂದ್ಯಗಳಿಂದ ಕೇವಲ ಒಂದು ವಿಕೆಟ್ ಪಡೆಯಲಷ್ಟೇ ಶಕ್ತರಾದರು.
ಈ ಕಳಪೆ ಪ್ರದರ್ಶನವನ್ನು ಕಂಡು ಭಾರತದ 1983ರ ವಿಶ್ವಕಪ್ ವಿಜೇತ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಭುವನೇಶ್ವರ್ ಕುಮಾರ್ ಅವರಿಗೆ ಏನಾಗಿದೆ ಎಂದು ನನಗಂತೂ ಅರ್ಥವಾಗುತ್ತಿಲ್ಲ. ಅವರ ಹಳೆಯ ಚುರುಕುತನ, ಸ್ವಿಂಗ್ ಮತ್ತು ವೇಗ ಸಂಪೂರ್ಣವಾಗಿ ಕಡಿಮೆಯಾಗಿದೆ. ಬ್ಯಾಟರ್ಗಳ ಕಡೆಗೆ ಬರುವ ಎಸೆತಗಳಲ್ಲಿ ಯಾವುದೇ ಶಕ್ತಿ ಅಥವಾ ತೀಕ್ಷ್ಣತೆ ಕಾಣಿಸುತ್ತಿಲ್ಲ, ಜಡವಾಗಿ ಬಾಲ್ ಬರುತ್ತಿದೆ. ಆದರೆ, ಐಪಿಎಲ್ ಪಂದ್ಯಗಳಲ್ಲಿ ಅವರು ಉತ್ತಮ ವೇಗದಲ್ಲೇ ಬೌಲಿಂಗ್ ಮಾಡುತ್ತಿದ್ದರು, ಈಗೇಕೆ ಹೀಗಾಗುತ್ತಿದೆ?" ಎಂದು ಶ್ರೀಕಾಂತ್ ಖಾರವಾಗಿ ಪ್ರಶ್ನಿಸಿದ್ದಾರೆ.
ವಾಸ್ತವವಾಗಿ, 2026ರ ಐಪಿಎಲ್ ಆವೃತ್ತಿಯಲ್ಲಿ ಭುವನೇಶ್ವರ್ ತೋರಿಸಿದ ಬೆಂಕಿ ಬೌಲಿಂಗ್ ಪ್ರದರ್ಶನವೇ ಅವರನ್ನು ಮತ್ತೆ ಟೀಮ್ ಇಂಡಿಯಾ ಬಾಗಿಲು ತಟ್ಟುವಂತೆ ಮಾಡಿದೆ. ಆ ಋತುವಿನಲ್ಲಿ 16 ಪಂದ್ಯಗಳಿಂದ ಬರೋಬ್ಬರಿ 28 ವಿಕೆಟ್ಗಳನ್ನು ಕಬಳಿಸಿದ ಭುವಿ, ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ, ಐಪಿಎಲ್ನ ಈ ಫಾರ್ಮ್ ಅಂತಾರಾಷ್ಟ್ರೀಯ ಪಂದ್ಯಕ್ಕೆ ಬಂದಾಗ ಮಾಯವಾಗಿರುವುದು ಎಲ್ಲರನ್ನೂ ಆಶ್ಚರ್ಯಕ್ಕೀಡುಮಾಡಿದೆ. ಕಂಬ್ಯಾಕ್ ಕುರಿತು ಮಾತನಾಡಿದ್ದ ಭವಿ, "ಕಳೆದ ನಾಲ್ಕು ವರ್ಷಗಳಲ್ಲಿ ನಾನು ವಿಶೇಷವಾಗಿ ಏನನ್ನೂ ಮಾಡಿಲ್ಲ, ಕುಟುಂಬ ನೀಡಿದ ಬೆಂಬಲವೇ ನನ್ನನ್ನು ಮತ್ತೆ ಇಲ್ಲಿಯವರೆಗೆ ನಡೆಸಿಕೊಂಡು ಬಂದಿದೆ" ಎಂದು ಹಂಚಿಕೊಂಡಿದ್ದರು.
ಪ್ರಸ್ತುತ ಆರಂಭಿಕ ಪಂದ್ಯಗಳಲ್ಲಿ ಭವಿ ನಿರೀಕ್ಷಿತ ಮಟ್ಟದಲ್ಲಿ ಮಿಂಚಲು ವಿಫಲರಾಗಿದ್ದರೂ, ಅವರಿಗೆ ಮತ್ತಷ್ಟು ಅವಕಾಶಗಳನ್ನು ನೀಡಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಕೇವಲ ಮೂರ್ನಾಲ್ಕು ಪಂದ್ಯಗಳ ಪ್ರದರ್ಶನದಿಂದ ಅವರ ಸಾಮರ್ಥ್ಯವನ್ನು ಅಳೆಯಬಾರದು, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಹೊಂದಿಕೊಳ್ಳಲು ಅವರಿಗೆ ತಕ್ಕಷ್ಟು ಸಮಯ ನೀಡಬೇಕು ಎಂದು ಕೆಲವು ಮಾಜಿ ಆಟಗಾರರು ಬೆಂಬಲಕ್ಕೆ ನಿಂತಿದ್ದಾರೆ. ಐಪಿಎಲ್ನಲ್ಲಿ ತೋರಿದ ಅದ್ಭುತ ಬೌಲಿಂಗ್ ಶೈಲಿಯನ್ನು ಭುವಿ ಶೀಘ್ರದಲ್ಲೇ ಕಂಡುಕೊಳ್ಳಲಿದ್ದಾರೆ ಮತ್ತು ತಮ್ಮ ಹಳೆಯ ರಿದಮ್ನೊಂದಿಗೆ ಭಾರತೀಯ ವೇಗದ ಪಡೆಗೆ ಬಲ ತುಂಬಲಿದ್ದಾರೆ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ, (ಏಜೆನ್ಸೀಸ್).