ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್‌ನಲ್ಲಿ ಸಾಹಸಿಕ ಡ್ರಾ ಸಾಧಿಸಿದ ಭಾರತದ ಮಹಿಳೆಯರು

womens web
Published on

ಬ್ರಿಸ್ಟಲ್: ಸ್ನೇಹಾ ರಾಣಾ (80*ರನ್, 154 ಎಸೆತ, 13 ಬೌಂಡರಿ) ಮತ್ತು ತಾನಿಯಾ ಭಾಟಿಯಾ (44*ರನ್, 88 ಎಸೆತ, 6 ಬೌಂಡರಿ) ಪ್ರದರ್ಶಿಸಿದ ದಿಟ್ಟ ಬ್ಯಾಟಿಂಗ್ ನೆರವಿನಿಂದ ಭಾರತದ ಮಹಿಳೆಯರ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಸೋಲಿನ ಅಪಾಯವನ್ನು ಹಿಮ್ಮೆಟ್ಟಿಸಿ ವೀರೋಚಿತ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಫಾಲೋಆನ್‌ಗೆ ಸಿಲುಕಿದ ಬಳಿಕ 4ನೇ ಹಾಗೂ ಅಂತಿಮ ದಿನವಾದ ಶನಿವಾರ 1 ವಿಕೆಟ್‌ಗೆ 81 ರನ್‌ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ, 8 ವಿಕೆಟ್‌ಗೆ 344 ರನ್ ಗಳಿಸಿ ಸಾಹಸಿಕ ಡ್ರಾ ಸಾಧಿಸಿತು. ಸ್ನೇಹಾ ಜತೆಗೆ ವಿಕೆಟ್ ಕೀಪರ್-ಬ್ಯಾಟುಗಾರ್ತಿ ತಾನಿಯಾ ಭಾಟಿಯಾ ಮುರಿಯದ 9ನೇ ವಿಕೆಟ್‌ಗೆ 30.4 ಓವರ್‌ಗಳಲ್ಲಿ 104 ರನ್ ಜತೆಯಾಟವಾಡಿ ಅಜೇಯವಾಗಿ ಉಳಿದರು.

55 ರನ್‌ನಿಂದ ದಿನದಾಟ ಆರಂಭಿಸಿದ ಯುವ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮ 63 ರನ್‌ಗೆ ಔಟಾದರು. ಬಳಿಕ ದೀಪ್ತಿ ಶರ್ಮ ಮತ್ತು ಪೂನಂ ರಾವತ್ (39) 3ನೇ ವಿಕೆಟ್‌ಗೆ 72 ರನ್ ಸೇರಿಸಿ ಭಾರತವನ್ನು ಇನಿಂಗ್ಸ್ ಸೋಲಿನ ಭೀತಿಯಿಂದ ಪಾರು ಮಾಡಿದರು. ಬಳಿಕ ಸ್ನೇಹಾ ಮತ್ತು ಶಿಖಾ ಪಾಂಡೆ (18) ಜೋಡಿ 8ನೇ ವಿಕೆಟ್‌ಗೆ 41 ರನ್ ಸೇರಿಸಿ ಡ್ರಾ ಸಾಧಿಸುವ ಆಸೆಗೆ ಬಲ ತುಂಬಿತು.

ಇಂಗ್ಲೆಂಡ್: 9 ವಿಕೆಟ್‌ಗೆ 396 ಡಿಕ್ಲೇರ್; ಭಾರತ: 231 ಮತ್ತು 121 ಓವರ್‌ಗಳಲ್ಲಿ 8 ವಿಕೆಟ್‌ಗೆ 344 (ಶೆಫಾಲಿ 63, ದೀಪ್ತಿ ಶರ್ಮ 54, ಪೂನಂ 39, ಮಿಥಾಲಿ 4, ಹರ್ಮಾನ್‌ಪ್ರೀತ್ 8, ಪೂಜಾ 12, ಸ್ನೇಹಾ 80*, ಶಿಖಾ 18, ತಾನಿಯಾ 44, ಎಕ್ಲೆಸ್ಟೋನ್ 118ಕ್ಕೆ 4, ಸ್ಕೀವರ್ 21ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net