

ನ್ಯೂಯಾರ್ಕ್: ದಕ್ಷಿಣ ಆಫ್ರಿಕಾ ವಿರುದ್ಧದ ಲೋ-ಸ್ಕೋರಿಂಗ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಕೇವಲ 4 ರನ್ಗಳಿಂದ ಸೋಲು ಅನುಭವಿಸಿತು. ಡೆಡ್ಬಾಲ್ ನಿಯಮಾವಳಿಯಲ್ಲಿನ ಲೋಪ ಬಾಂಗ್ಲಾ ಸೋಲಿಗೆ ಪ್ರಮುಖ ಕಾರಣವೆನಿಸಿದ್ದು, ಇದು ಹೊಸ ವಿವಾದವನ್ನು ಸೃಷ್ಟಿಸಿದೆ.
ನಡೆದಿದ್ದೇನು?: ದಕ್ಷಿಣ ಆಫ್ರಿಕಾದ 114 ರನ್ ಸವಾಲಿಗೆ ಪ್ರತಿಯಾಗಿ ಬಾಂಗ್ಲಾದೇಶ 16.1 ಓವರ್ಗಳಲ್ಲಿ 4 ವಿಕೆಟ್ಗೆ 87 ರನ್ ಗಳಿಸಿ ಜಯದ ನಿರೀೆಯಲ್ಲಿತ್ತು. ಆಗ ವೇಗಿ ಬಾರ್ಟ್ಮನ್ ಎಸೆತದಲ್ಲಿ ಮಹಮುದುಲ್ಲಾ ಎದುರಿಸಿದ ಚೆಂಡು ಪ್ಯಾಡ್ಗೆ ಬಡಿದು ಫೈನ್ ಲೆಗ್ನಲ್ಲಿ ಬೌಂಡರಿ ಗೆರೆಯನ್ನು ದಾಟಿತು. ಆದರೆ ಈ ನಡುವೆ ಬೌಲರ್ ಮಾಡಿದ ಮನವಿ ಪುರಸ್ಕರಿಸಿದ ಅಂಪೈರ್ ಔಟ್ ತೀರ್ಪು ನೀಡಿದರು. ಆಗ ಮಹಮುದುಲ್ಲಾ ಡಿಆರ್ಎಸ್ ಮೊರೆ ಹೋದರು ಮತ್ತು ತೃತೀಯ ಅಂಪೈರ್ ನಾಟೌಟ್ ತೀರ್ಪು ನೀಡಿದರು. ಇದರಿಂದ ಮಹಮುದುಲ್ಲಾ ಬ್ಯಾಟಿಂಗ್ ಮುಂದುವರಿಸಿದರೂ, ಲೆಗ್ಬೈ ರೂಪದಲ್ಲಿ ಬರಬೇಕಿದ್ದ ಆ 4 ರನ್ಗಳು ಲಭಿಸಲಿಲ್ಲ. ಯಾಕೆಂದರೆ, ಅಂಪೈರ್ ಔಟ್ ತೀರ್ಪು ನೀಡಿದಾಗಲೇ ಚೆಂಡು ಡೆಡ್ ಆಗಿತ್ತು ಮತ್ತು ಅದು ನಂತರ ಬೌಂಡರಿ ಗೆರೆ ದಾಟಿದ್ದು ಲೆಕ್ಕಕ್ಕೆ ಬರಲಿಲ್ಲ.
ಐಸಿಸಿ ನಿಯಮಾವಳಿ ಪ್ರಕಾರ, ಬ್ಯಾಟರ್ ವಿರುದ್ಧ ಎಲ್ಬಿಡಬ್ಲ್ಯು ತೀರ್ಪು ನೀಡಿದ (ಅದು ನಂತರ ಬದಲಾದರೂ) ನಂತರ ಇತರೆ ರನ್ಗಳನ್ನು (ಲೆಗ್ಬೈ, ಬೈಸ್) ನೀಡಬಾರದು. ಡಿಆರ್ಎಸ್ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ವಿಕೆಟ್ ನಷ್ಟವಾದರೂ, 4 ರನ್ ಲಾಭವಾಯಿತು. ಅಂತಿಮವಾಗಿ ಇಷ್ಟೇ ರನ್ ಅಂತರದಿಂದ ಬಾಂಗ್ಲಾ ಸೋಲು ಕಂಡಿದ್ದು ವಿಪರ್ಯಾಸ.
ಈ ಘಟನೆ ಬೆನ್ನಲ್ಲೇ ಬಾಂಗ್ಲಾ ಅಭಿಮಾನಿಗಳು ಮಾತ್ರವಲ್ಲದೆ, ಭಾರತದ ಮಾಜಿ ಬ್ಯಾಟರ್ ವಾಸಿಂ ಜಾಫರ್ ಕೂಡ ಡೆಡ್ಬಾಲ್ ನಿಯಮಾವಳಿಯನ್ನು ಪ್ರಶ್ನಿಸಿದ್ದಾರೆ. ಔಟ್ ತೀರ್ಪು ಬದಲಾವಣೆ ಆಗಿರುವುದರಿಂದ, ಚೆಂಡು ಕೂಡ ಅಂಪೈರ್ ತೀರ್ಪು ನೀಡಿದಾಗಲೇ ಡೆಡ್ ಆಗಿದೆ ಎಂದು ಪರಿಗಣಿಸುವುದು ಸರಿಯಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಐಸಿಸಿ ನಿಯಮಾವಳಿ ಪ್ರಕಾರ, ಮೈದಾನದ ಅಂಪೈರ್ ನಾಟೌಟ್ ತೀರ್ಪು ನೀಡಿದಾಗ ಎದುರಾಳಿ ತಂಡ ಡಿಆರ್ಎಸ್ ಮೊರೆ ಹೋದರೆ ಮತ್ತು ಅದು ತಿರಸ್ಕೃತಗೊಂಡರೆ ಆಗ ಲೆಗ್ಬೈ ರನ್ಗಳಿದ್ದರೆ ಅದನ್ನು ನೀಡಬಹುದಾಗಿದೆ.