ಇಂದು ಡೆಲ್ಲಿ-ಕೆಕೆಆರ್ ಮರುಮುಖಾಮುಖಿ, ಸೇಡು ತೀರಿಸಿಕೊಳ್ಳುವ ತವಕದಲ್ಲಿ ಶ್ರೇಯಸ್ ಪಡೆ

dc vs kkr web
Published on

ಮುಂಬೈ: ಸತತ 4 ಸೋಲುಗಳಿಂದ ಕಂಗೆಟ್ಟಿರುವ ಕೋಲ್ಕತ ನೈಟ್‌ರೈಡರ್ಸ್‌ ಮತ್ತು ಅಸ್ಥಿರ ನಿರ್ವಹಣೆಯಿಂದ ಪರದಾಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್-15ರಲ್ಲಿ ಗುರುವಾರ ಸೆಣಸಲಿವೆ. ಇದು ಟೂರ್ನಿಯಲ್ಲಿ ಉಭಯ ತಂಡಗಳ ನಡುವಿನ 2ನೇ ಮುಖಾಮುಖಿ ಆಗಿದೆ. ಮೊದಲ ಸೆಣಸಾಟದಲ್ಲಿ ಗೆದ್ದಿರುವ ಡೆಲ್ಲಿ ಅದೇ ಲಿತಾಂಶ ಪುನರಾವರ್ತಿಸುವ ತವಕದಲ್ಲಿದ್ದರೆ, ಕೆಕೆಆರ್ ತಂಡ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ.

ರಾಜಸ್ಥಾನ ವಿರುದ್ಧದ ಹಿಂದಿನ ಪಂದ್ಯದಲ್ಲಿ ಸೋತಿದ್ದಲ್ಲದೆ, ನೋಬಾಲ್‌ಗಾಗಿ ಅಂಪೈರ್ ಜತೆ ವಾದಿಸಿದ ನಾಯಕ ರಿಷಭ್ ಪಂತ್, ವೇಗಿ ಶಾರ್ದೂಲ್ ಠಾಕೂರ್ ದಂಡ ಶಿಕ್ಷೆಗೆ ಗುರಿಯಾಗಿದ್ದರೆ, ಸಹಾಯಕ ಕೋಚ್ ಪ್ರವೀಣ್ ಆಮ್ರೆ ದಂಡ-ನಿಷೇಧ ಎರಡನ್ನೂ ಎದುರಿಸಿದ್ದರು. ಈ ವಿವಾದವನ್ನು ಬದಿಗಿಟ್ಟು ಮತ್ತೆ ಗೆಲುವಿನ ಹಾದಿಗೆ ಮರಳುವತ್ತ ಡೆಲ್ಲಿ ತಂಡ ಗಮನಹರಿಸಬೇಕಾಗಿದೆ. ಕುಟುಂಬ ಸದಸ್ಯರ ಕರೊನಾ ಪ್ರಕರಣದಿಂದಾಗಿ ಕ್ವಾರಂಟೈನ್‌ನಲ್ಲಿದ್ದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಈಗ ತಂಡ ಕೂಡಿಕೊಂಡಿಕೊಂಡಿರುವುದು ಡೆಲ್ಲಿಗೆ ಸಮಧಾನಕರ ಅಂಶವಾಗಿದೆ. ಡೆಲ್ಲಿ ಇದುವರೆಗೆ ಆಡಿದ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 4ರಲ್ಲಿ ಸೋತಿದ್ದು, ಗೆಲುವಿನ ಲಯ ಕಾಯ್ದುಕೊಳ್ಳಲು ಪರದಾಡುತ್ತ ಬಂದಿದೆ.

ಆಡಿದ ಮೊದಲ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಬೀಗಿದ್ದ ಶ್ರೇಯಸ್ ಅಯ್ಯರ್ ಪಡೆ, ನಂತರದ ನಾಲ್ಕೂ ಪಂದ್ಯಗಳಲ್ಲಿ ಸೋತಿರುವುದು ಪ್ಲೇಆ್ ರೇಸ್‌ನಲ್ಲಿ ದೊಡ್ಡ ಹಿನ್ನಡೆ ತಂದಿದೆ. ಈ ಪಂದ್ಯದಲ್ಲೂ ಸೋತರೆ ಕೆಕೆಆರ್ ಪ್ಲೇಆ್ ಆಸೆಯನ್ನು ಬಹುತೇಕ ಕೈಬಿಡಬೇಕಾಗುತ್ತದೆ. ಕಳೆದ ವರ್ಷ ಕೆಕೆಆರ್ ತಂಡ ೈನಲ್‌ಗೇರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಆಲ್ರೌಂಡರ್ ವೆಂಕಟೇಶ್ ಅಯ್ಯರ್, ಸ್ಪಿನ್ನರ್ ವರುಣ್ ಚಕ್ರವರ್ತಿ ಈ ಬಾರಿ ನಿರೀಕ್ಷಿತ ನಿರ್ವಹಣೆ ತೋರದಿರುವುದು ಹಿನ್ನಡೆ ತಂದಿದೆ. ಕೆಕೆಆರ್ ಬೌಲಿಂಗ್ ವಿಭಾಗದಲ್ಲಿ ಉಮೇಶ್ ಯಾದವ್, ಟಿಮ್ ಸೌಥಿ ಉತ್ತಮ ನಿರ್ವಹಣೆ ತೋರುತ್ತಿದ್ದು, ಉತ್ತಮ ಸಾಥ್ ಸಿಗುತ್ತಿಲ್ಲ. ನಾಯಕ ಶ್ರೇಯಸ್ ಅಯ್ಯರ್ ಸಹಿತ ಬ್ಯಾಟರ್‌ಗಳೂ ಸ್ಥಿರ ನಿರ್ವಹಣೆ ತೋರುತ್ತಿಲ್ಲ.

ಕೆಕೆಆರ್ ತಂಡದ ಮಾಜಿ ಆಟಗಾರ ಕುಲದೀಪ್ ಯಾದವ್ ಕಳೆದ ಮುಖಾಮುಖಿಯ ಸೋಲಿಗೆ ಪ್ರಮುಖ ಕಾರಣರಾಗಿದ್ದರು. ಈ ಬಾರಿ ಕೆಕೆಆರ್ ಬ್ಯಾಟರ್‌ಗಳು ಅವರನ್ನು ಎಚ್ಚರಿಕೆಯಿಂದ ಎದುರಿಸಬೇಕಾಗಿದೆ.

ಟೀಮ್ ನ್ಯೂಸ್:

ಡೆಲ್ಲಿ ಕ್ಯಾಪಿಟಲ್ಸ್: ಮಧ್ಯಮ ಕ್ರಮಾಂಕವನ್ನು ಬಲಪಡಿಸಲು ತಂಡದಲ್ಲಿ ಬದಲಾವಣೆ ಅನಿವಾರ‌್ಯವೆನಿಸಿದೆ. ಆಲ್ರೌಂಡರ್ ಲಲಿತ್ ಯಾದವ್ ಆ್ ಸ್ಪಿನ್ನರ್ ಆಗಿ ಮಿಂಚಿದ್ದರೂ, ಬ್ಯಾಟಿಂಗ್‌ನಲ್ಲಿ ಕಾಣಿಕೆ ನೀಡುತ್ತಿಲ್ಲ. ಹೀಗಾಗಿ ಸ್ಟ್ರೈಕರ್ ರಿಪಲ್ ಪಟೇಲ್‌ಗೆ ಅವಕಾಶದ ನಿರೀಕ್ಷೆ ಇದೆ. ರ್ಸ್ರಾಜ್ ಖಾನ್ ಬದಲಿಗೆ ಯಶ್ ಧುಲ್ ಅಥವಾ ಕೆಎಸ್ ಭರತ್ ಸ್ಥಾನ ಪಡೆಯಬಹುದು.

ಕೆಕೆಆರ್: ಗೆಲುವಿನ ಹಾದಿಗೆ ಮರಳು ತುಡಿತದಲ್ಲಿರುವ ಕಾರಣ ಬದಲಾವಣೆ ನಿರೀಕ್ಷಿತ. ಆಡಿದ 8 ಪಂದ್ಯಗಳಲ್ಲಿ 4 ವಿಕೆಟ್ ಮಾತ್ರ ಕಬಳಿಸಿರುವ ಸ್ಪಿನ್ನರ್ ವರುಣ್ ಚಕ್ರವರ್ತಿ ಬದಲಿಗೆ ಅನುಕೂಲ್ ರಾಯ್ ಅಥವಾ ಅಮನ್ ಖಾನ್ ಕಣಕ್ಕಿಳಿಯಬಹುದು.

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಮುಖಾಮುಖಿ: 29

ಡೆಲ್ಲಿ: 13

ಕೆಕೆಆರ್: 16

ಹಿಂದಿನ ಮುಖಾಮುಖಿ: ಡೆಲ್ಲಿ ಕ್ಯಾಪಿಟಲ್ಸ್‌ಗೆ 44 ರನ್ ಜಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net