ಇಂದು ರಾಹುಲ್-ಪಂತ್ ಮರುಮುಖಾಮುಖಿ; ಗೆಲುವಿನ ಲಯ ಕಾಯ್ದುಕೊಳ್ಳಲು ಲಖನೌ-ಡೆಲ್ಲಿ ಹೋರಾಟ

pant vs rahul web
Published on

ಮುಂಬೈ: ಟೀಮ್ ಇಂಡಿಯಾದ ಭವಿಷ್ಯದ ನಾಯಕರಾಗುವ ರೇಸ್‌ನಲ್ಲಿರುವ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಸಾರಥ್ಯದ ಲಖನೌ ಸೂಪರ್‌ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಐಪಿಎಲ್-15ರಲ್ಲಿ ಭಾನುವಾರದ ಮೊದಲ ಪಂದ್ಯದಲ್ಲಿ ಮರು ಮುಖಾಮುಖಿ ಆಗಲಿವೆ. ಪ್ಲೇಆಫ್​ ಅವಕಾಶ ವೃದ್ಧಿಸಿಕೊಳ್ಳುವ ದೃಷ್ಟಿಯಿಂದ ಗೆಲುವಿನ ಲಯ ಕಾಯ್ದುಕೊಳ್ಳಲು ಉಭಯ ತಂಡಗಳೂ ಹೋರಾಡಲಿವೆ.

ಕಳೆದ ಕೆಲ ವಾರಗಳಿಂದ ಡೆಲ್ಲಿ ತಂಡ ಕೆಲ ಸವಾಲುಗಳನ್ನು ಎದುರಿಸಿದೆ. ತಂಡದೊಳಗೆ ಕೆಲ ಕರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದಲ್ಲದೆ, ನೋಬಾಲ್ ವಿವಾದದಲ್ಲಿ ಆಟಗಾರರು ದಂಡ ಶಿಕ್ಷೆಗೂ ಗುರಿಯಾದರು. ಇದರ ನಡುವೆಯೂ ಕಳೆದ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿರುವ ಡೆಲ್ಲಿ, ಒಟ್ಟಾರೆ 8 ಪಂದ್ಯಗಳಲ್ಲಿ ತಲಾ 4 ಜಯ-ಸೋಲು ಅನುಭವಿಸಿದೆ. ಚೇಸಿಂಗ್‌ನಲ್ಲಿ ಎಡವಿರುವುದು ಡೆಲ್ಲಿಗೆ ಹಿನ್ನಡೆ ತಂದಿದೆ. ಆಲ್ರೌಂಡರ್ ಮಿಚೆಲ್ ಮಾರ್ಷ್ ನಿರೀಕ್ಷಿತ ನಿರ್ವಹಣೆ ತೋರದಿರುವುದು ಕೂಡ ಪಂತ್ ಪಡೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸ್ಪಿನ್ನರ್ ಕುಲದೀಪ್ ಯಾದವ್ ಡೆಲ್ಲಿ ಇದುವರೆಗೆ ಗೆದ್ದ 4 ಪಂದ್ಯಗಳಲ್ಲೂ ಪಂದ್ಯಶ್ರೇಷ್ಠರಾಗಿದ್ದು, 5ನೇ ಗೆಲುವಿಗೂ ನೆರವಾಗುವರೇ ಎಂಬ ಕುತೂಹಲವಿದೆ.

ಪ್ಲೇಆ್ ಸನಿಹ ಲಖನೌ
ಇದುವರೆಗೆ ಆಡಿದ 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 3ರಲ್ಲಿ ಸೋತಿರುವ ಲಖನೌ, ಇನ್ನೊಂದು ಪಂದ್ಯ ಗೆದ್ದರೆ ಪ್ಲೇಆಫ್​ ಸನಿಹ ತಲುಪಲಿದೆ. ಆದರೆ ಇದಕ್ಕಾಗಿ ಬ್ಯಾಟಿಂಗ್‌ನಲ್ಲಿ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿಕಾಕ್ ಮೇಲಿನ ಅತಿಯಾದ ಅವಲಂಬನೆಯಿಂದ ಹೊರಬರಬೇಕಿದೆ. ಮಧ್ಯಮ ಕ್ರಮಾಂಕದ ಅಸ್ಥಿರ ನಿರ್ವಹಣೆ ಲಖನೌಗೆ ಚಿಂತೆ ತಂದಿದೆ. ಬೌಲಿಂಗ್ ವಿಭಾಗದ ನಿರ್ವಹಣೆ ತೃಪ್ತಿದಾಯಕವಾಗಿದೆ.

ಟೀಮ್ ನ್ಯೂಸ್:
ಲಖನೌ ಸೂಪರ್‌ಜೈಂಟ್ಸ್: ಪಂಜಾಬ್ ವಿರುದ್ಧದ ಗೆಲುವಿನ ಬಳಿಕ ತಂಡದಲ್ಲಿ ಬದಲಾವಣೆಯ ನಿರೀಕ್ಷೆ ಇಲ್ಲ. ಆದರೂ ಬ್ಯಾಟಿಂಗ್ ನಿರ್ವಹಣೆ ಸುಧಾರಣೆ ದೃಷ್ಟಿಯಿಂದ ಬ್ಯಾಟರ್‌ಗಳ ಕ್ರಮಾಂಕ ಬದಲಾವಣೆ ಕಂಡರೆ ಅಚ್ಚರಿ ಇಲ್ಲ.

ಡೆಲ್ಲಿ ಕ್ಯಾಪಿಟಲ್ಸ್: ಕೆಕೆಆರ್ ಎದುರು ಗೆದ್ದ ಹೊರತಾಗಿಯೂ ಕೆಲ ಬದಲಾವಣೆ ನಿರೀಕ್ಷೆ ಇದೆ. ಬ್ಯಾಟಿಂಗ್‌ನಲ್ಲಿ ಉಪಯುಕ್ತ ಕೊಡುಗೆ ನೀಡದಿರುವ ಲಲಿತ್ ಯಾದವ್ ಬದಲು ಸ್ಥಾನ ಪಡೆಯಲು ರಿಪಲ್ ಪಟೇಲ್, ಕೆಎಸ್ ಭರತ್ ಮತ್ತು ಅಶ್ವಿನ್ ಹೆಬ್ಬಾರ್ ರೇಸ್‌ನಲ್ಲಿದ್ದಾರೆ.

ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಹಿಂದಿನ ಮುಖಾಮುಖಿ: ಲಖನೌಗೆ 6 ವಿಕೆಟ್‌ಗೆ ಜಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net