

ಅಡಿಲೇಡ್: ತವರಿನಲ್ಲಿ ನ್ಯೂಜಿಲೆಂಡ್ ಎದುರು ವೈಟ್ವಾಷ್ ಎದುರಿಸಿದ ಹಿನ್ನಡೆಯ ನಡುವೆ ಕಾಂಗರೂ ನೆಲಕ್ಕೆ ಕಾಲಿಟ್ಟಿದ್ದ ಭಾರತ ತಂಡ ಪರ್ತ್ನಲ್ಲಿ ಅಮೋಘ ನಿರ್ವಹಣೆ ತೋರುವ ಮೂಲಕ ಆತಿಥೇಯರನ್ನು ಬಗ್ಗುಬಡಿದು ಬೀಗಿದೆ. ಬಾರ್ಡರ್-ಗಾವಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯಕ್ಕೂ ಟೀಮ್ ಇಂಡಿಯಾ ಇದೇ ವಿಶ್ವಾಸದಲ್ಲಿ ಸಜ್ಜಾಗಿದ್ದು, ನಾಯಕ ರೋಹಿತ್ ಶರ್ಮ ಸೇರ್ಪಡೆ ಮತ್ತಷ್ಟು ಬಲ ತುಂಬಿದೆ. ಆಸ್ಟ್ರೆಲಿಯಾ ಎದುರು ಅಡಿಲೇಡ್ ಓವಲ್ ಅಂಗಣದ ಹೊನಲು ಬೆಳಕಿನಲ್ಲಿ ನಸುಗೆಂಪು ಬಣ್ಣದ ಚೆಂಡಿನಲ್ಲಿ ನಡೆಯಲಿರುವ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವುದು ಭಾರತ ತಂಡದ ಹಂಬಲವಾಗಿದೆ.
ಹಂಗಾಮಿ ನಾಯಕರಾಗಿ ಜಸ್ಪ್ರೀತ್ ಬುಮ್ರಾ ಪರ್ತ್ನಲ್ಲಿ ಉತ್ತಮ ನಿರ್ವಹಣೆ ತೋರಿಸಿದ್ದು, ರೋಹಿತ್ ಶರ್ಮ ಮೇಲೂ ಈಗ ನಿರೀಕ್ಷೆಗಳು ಹೆಚ್ಚಿವೆ. 4 ವರ್ಷಗಳ ಹಿಂದೆ ಅಡಿಲೇಡ್ನಲ್ಲೇ ಆಡಿದ ಕೊನೇ ಪಿಂಕ್ಬಾಲ್ ಟೆಸ್ಟ್ನಲ್ಲಿ ಭಾರತ ಕೇವಲ 36 ರನ್ಗಳಿಗೆ ಆಲೌಟ್ ಆಗಿ ಮುಗ್ಗರಿಸಿತ್ತು. ಆ ಕಹಿ ನೆನಪು ಮರೆಸಲು ಭಾರತಕ್ಕೆ ಇದು ಉತ್ತಮ ಅವಕಾಶವೆನಿಸಿದೆ. ಜತೆಗೆ ಪಿಂಕ್ಬಾಲ್ನಲ್ಲಿ ಬಲಿಷ್ಠ ದಾಖಲೆ ಹೊಂದಿರುವ ಆಸ್ಟ್ರೆಲಿಯಾ ಈ ಬಾರಿ ಮತ್ತಷ್ಟು ಸವಾಲೆನಿಸಲಿದೆ. ರೋಹಿತ್ ಜತೆಗೆ ಕೈ ಹೆಬ್ಬೆರಳು ಗಾಯದಿಂದ ಚೇತರಿಸಿಕೊಂಡಿರುವ ಶುಭಮಾನ್ ಗಿಲ್ ಕೂಡ ಈ ಬಾರಿ ಭಾರತದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಪರ್ತ್ನಲ್ಲಿ ಶತಕ ಸಿಡಿಸಿ ಲಯಕ್ಕೆ ಮರಳಿರುವ ವಿರಾಟ್ ಕೊಹ್ಲಿ ಈಗಾಗಲೆ ಆಸೀಸ್ ತಲೆನೋವು ಹೆಚ್ಚಿಸಿದ್ದಾರೆ.
ಒತ್ತಡದಲ್ಲಿ ಆಸ್ಟ್ರೆಲಿಯಾ: ಸರಣಿಗೆ ಮುನ್ನ ಭಾರತ ತಂಡ ತವರಿನ ಸೋಲಿನಿಂದಾಗಿ ಒತ್ತಡದಲ್ಲಿದ್ದರೆ, ಇದೀಗ 2ನೇ ಟೆಸ್ಟ್ಗೆ ಮುನ್ನ ಆತಿಥೇಯ ಆಸೀಸ್ ಹೆಚ್ಚಿನ ಒತ್ತಡದಲ್ಲಿದೆ. ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್ ಸಹಿತ ಬ್ಯಾಟರ್ಗಳ ನೀರಸ ನಿರ್ವಹಣೆ ನಡುವೆ ಪ್ರಮುಖ ವೇಗಿ ಹ್ಯಾಸಲ್ವುಡ್ ಗಾಯದಿಂದ ಅಲಭ್ಯರಾಗಿದ್ದಾರೆ. ಇದರ ನಡುವೆ ಸರಣಿಯಲ್ಲಿ ಸಮಬಲ ಸಾಧಿಸಲು ಆಸೀಸ್ ತನ್ನ ನೆಚ್ಚಿನ ಪಿಂಕ್ಬಾಲ್ ಅನ್ನು ನೆಚ್ಚಿಕೊಂಡಿದೆ.
ರಾಹುಲ್ ಆರಂಭಿಕನಾಗಿ ಮುಂದುವರಿಕೆ ಖಚಿತ
ಮೊದಲ ಟೆಸ್ಟ್ನಲ್ಲಿ ಸದೃಢ ಮತ್ತು ತಾಂತ್ರಿಕತೆಯ ಬ್ಯಾಟಿಂಗ್ ಪ್ರದರ್ಶಿಸಿ ಗಮನಸೆಳೆದ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಅಡಿಲೇಡ್ನಲ್ಲೂ ಆರಂಭಿಕರಾಗಿ ಮುಂದುವರಿಸಲಾಗುವುದು ಎಂದು ನಾಯಕ ರೋಹಿತ್ ಶರ್ಮ ಗುರುವಾರ ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ. ಈ ಮೂಲಕ ತಾನು ಮಧ್ಯಮ ಕ್ರಮಾಂಕದಲ್ಲಿ ಆಡುವುದಾಗಿಯೂ ತಿಳಿಸಿದ್ದಾರೆ. 2ನೇ ಮಗುವಿನ ಆಗಮನದಿಂದಾಗಿ ರೋಹಿತ್ ತವರಿನಲ್ಲೇ ಉಳಿದಾಗ ರಾಹುಲ್ ಬದಲಿ ವ್ಯವಸ್ಥೆಯಾಗಿ ಪರ್ತ್ನಲ್ಲಿ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದುಕೊಂಡಿದ್ದರು. 26 ಮತ್ತು 77 ರನ್ ಗಳಿಸುವ ಮೂಲಕ ಅವರು ಪರ್ತ್ ಗೆಲುವಿಗೆ ಉತ್ತಮ ಕೊಡುಗೆ ನೀಡಿದ್ದರು. "ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ನಾನು ಮಧ್ಯಮ ಕ್ರಮಾಂಕದಲ್ಲಿ ಎಲ್ಲಾದರೂ ಆಡಲಿದ್ದೇನೆ. ಮೊದಲ ಟೆಸ್ಟ್ನಲ್ಲಿ ರಾಹುಲ್ ಆಡಿದ ಆಟವನ್ನು ನಾನು ತವರಿನಲ್ಲಿ ನನ್ನ ನವಜಾತ ಶಿಶುವನ್ನು ತೋಳಿನಲ್ಲಿ ಹಿಡಿದುಕೊಂಡು ವೀಕ್ಷಿಸಿದೆ. ರಾಹುಲ್ ಅಮೋಘ ಆಟವಾಡಿದರು. ಹೀಗಾಗಿ ಸದ್ಯ ಅವರ ಕ್ರಮಾಂಕದಲ್ಲಿ ಬದಲಾವಣೆ ಬೇಡ. ಭವಿಷ್ಯದಲ್ಲಿ ಬದಲಾದ ಸಂದರ್ಭ ಎದುರಾದರೆ ನೋಡೋಣ' ಎಂದು ರೋಹಿತ್ ವಿವರಿಸಿದರು.
*ಅಹರ್ನಿಶಿ ಟೆಸ್ಟ್ನಲ್ಲಿ ಬಳಸುವ ಪಿಂಕ್ಬಾಲ್, ಸಾಂಪ್ರದಾಯಿಕ ಕೆಂಪು ಚೆಂಡಿಗಿಂತ ಭಿನ್ನವಾಗಿ ವರ್ತಿಸುತ್ತದೆ. ಹೆಚ್ಚಿನ ಸ್ವಿಂಗ್, ವೇಗ, ಬೌನ್ಸ್ನಿಂದ ಕೂಡಿದೆ. ಕಳೆದ 3 ದಿನಗಳಿಂದ ಪಿಂಕ್ಬಾಲ್ನಲ್ಲೇ ಅಭ್ಯಾಸ ನಡೆಸಿದ್ದೇನೆ. ಅದರಲ್ಲಿ ಹೆಚ್ಚು ಆಡಿದಷ್ಟು ಸುಲಭವೂ ಎನಿಸುತ್ತಿದೆ.
| ರೋಹಿತ್ ಶರ್ಮ, ಟೀಮ್ ಇಂಡಿಯಾ ನಾಯಕ
*ನಮ್ಮ ತಂಡದ ಹೆಚ್ಚಿನ ಆಟಗಾರರು ಬಹುತೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ ತಂಡದ ಅರ್ಧದಷ್ಟು ಆಟಗಾರರು ಬಾರ್ಡರ್&ಗಾವಸ್ಕರ್ ಟ್ರೋಫಿ ಗೆದ್ದಿಲ್ಲ. ಇದೊಂದೇ ನಮ್ಮಲ್ಲಿ ಹೆಚ್ಚಿನವರನ್ನು ಕಾಡುತ್ತಿರುವ ಕೊರತೆಯಾಗಿದೆ. ಇದೊಂದು ಸುದೀರ್ಘ ಸರಣಿಯಾಗಿದ್ದು, ಪುಟಿದೇಳುವ ವಿಶ್ವಾಸವಿದೆ.
| ಪ್ಯಾಟ್ ಕಮ್ಮಿನ್ಸ್, ಆಸೀಸ್ ನಾಯಕ
ಡಬ್ಲ್ಯುಟಿಸಿ ಫೈನಲ್ ಚಾನ್ಸ್
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ (ಡಬ್ಲ್ಯುಟಿಸಿ) ನೇರ ಫೈನಲ್ ಪ್ರವೇಶಕ್ಕೆ ಭಾರತ ತಂಡ ಸರಣಿಗೆ ಮುನ್ನ 4-0 ಅಥವಾ 5-0ಯಿಂದ ಗೆಲ್ಲಬೇಕಾದ ಒತ್ತಡವಿತ್ತು. ಆದರೆ ಸರಣಿ ಶುರುವಾದ ಬಳಿಕ ಕಿವೀಸ್ ತಂಡ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಸೋತಿರುವುದರಿಂದ ಭಾರತ ಈಗ 4-1 ಅಥವಾ 3-0ಯಿಂದ ಸರಣಿ ಗೆದ್ದರೂ ನೇರವಾಗಿ ಡಬ್ಲ್ಯುಟಿಸಿ ಫೈನಲ್ಗೇರುವ ಅವಕಾಶ ಹೊಂದಿದೆ. ಇದಲ್ಲದೆ 3-2 ಅಥವಾ 3-1ರಿಂದ ಗೆದ್ದರೂ ಭಾರತ ಫೈನಲ್ಗೇರುವ ಅವಕಾಶ ಹೆಚ್ಚಲಿದೆ. ಅಂದರೆ ಡಬ್ಲ್ಯುಟಿಸಿ ಫೈನಲ್ಗೇರಲು ಭಾರತ ಸರಣಿಯಲ್ಲಿ ಇನ್ನೂ 2 ಪಂದ್ಯ ಗೆಲ್ಲುವ ಅಗತ್ಯವಿದೆ.
ಟೀಮ್ ನ್ಯೂಸ್:
ಭಾರತ: ಜೈಸ್ವಾಲ್ ಜತೆ ರಾಹುಲ್ ಆರಂಭಿಕರಾಗಿ ಮುಂದುವರಿಯುವುದರೊಂದಿಗೆ ರೋಹಿತ್ ಶರ್ಮ ಮಧ್ಯಮ ಕ್ರಮಾಂಕದಲ್ಲಿ ಆಡುವುದು ಕೂಡ ಖಚಿತಗೊಂಡಿದೆ. ಆದರೆ ಎಷ್ಟನೇ ಕ್ರಮಾಂಕ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ಶುಭಮಾನ್ ಗಿಲ್ ಫಿಟ್ ಆಗಿ 3ನೇ ಕ್ರಮಾಂಕಕ್ಕೆ ಮರಳಿದರೆ, ಕೊಹ್ಲಿ 4ನೇ ಕ್ರಮಾಂಕದಲ್ಲಿ ಮುಂದುವರಿಯಲಿದ್ದಾರೆ. ಹೀಗಾಗಿ ರೋಹಿತ್ 5ನೇ ಕ್ರಮಾಂಕದಲ್ಲಿ ಆಡಬಹುದು ಮತ್ತು ಪಂತ್ 6ನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆಯಬಹುದು. ಆರ್. ಅಶ್ವಿನ್ ಅಡಿಲೇಡ್ನಲ್ಲಿ ಉತ್ತಮ ಬೌಲಿಂಗ್ ದಾಖಲೆ ಹೊಂದಿದ್ದರೂ, ವಾಷಿಂಗ್ಟನ್ ಬ್ಯಾಟಿಂಗ್ನಲ್ಲೂ ಉಪಯುಕ್ತ ಆಗುವ ಕಾರಣ ಸ್ಥಾನ ಉಳಿಸಿಕೊಳ್ಳಬಹುದು.
ಆಸ್ಟ್ರೆಲಿಯಾ: ಪರ್ತ್ ಟೆಸ್ಟ್ ಸೋಲಿನ ನಡುವೆ ಆಸೀಸ್ ತನ್ನ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡುತ್ತಿಲ್ಲ. ಪಂದ್ಯಕ್ಕೆ ಮುನ್ನಾದಿನವೇ ಆಸೀಸ್ ತನ್ನ ಆಡುವ 11ರ ಬಳಗವನ್ನು ಪ್ರಕಟಿಸಿದ್ದು, ಅನಿವಾರ್ಯ ಕಾರಣಗಳಿಂದಾಗಿ ಏಕೈಕ ಬದಲಾವಣೆ ಮಾಡಿದೆ. ವೇಗಿ ಹ್ಯಾಸಲ್ವುಡ್ ಗಾಯದಿಂದಾಗಿ ಪಂದ್ಯಕ್ಕೆ ಅಲಭ್ಯರಾಗಿರುವುದರಿಂದ ಮತ್ತೋರ್ವ ವೇಗಿ ಸ್ಕಾಟ್ ಬೋಲ್ಯಾಂಡ್ ಕಣಕ್ಕಿಳಿಯಲಿದ್ದಾರೆ. ಬೋಲ್ಯಾಂಡ್ 2 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಆಡಲಿದ್ದಾರೆ. ಆಲ್ರೌಂಡರ್ ಮಿಚೆಲ್ ಮಾರ್ಷ್ ಫಿಟ್ ಆಗಿದ್ದು, ಬೌಲಿಂಗ್ ಕೂಡ ಮಾಡಲಿದ್ದಾರೆ ಎಂದು ನಾಯಕ ಕಮ್ಮಿನ್ಸ್ ಸ್ಪಷ್ಟಪಡಿಸಿದ್ದಾರೆ.
*ಆರಂಭ: ಬೆಳಗ್ಗೆ 9.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
*ಪ್ರತಿ ದಿನದಾಟ ಹೀಗಿರಲಿದೆ:
ಮೊದಲ ಅವಧಿ: ಬೆಳಗ್ಗೆ 9.30-11.30
2ನೇ ಅವಧಿ: ಮಧ್ಯಾಹ್ನ 12.10-2.10
3ನೇ ಅವಧಿ: ಮಧ್ಯಾಹ್ನ 2.30-4.30
ಅಡಿಲೇಡ್ ಪಿಂಕ್ ಟೆಸ್ಟ್ನಲ್ಲಿ ಆಸೀಸ್ ಅಜೇಯ
ಅಡಿಲೇಡ್ ಟೆಸ್ಟ್ನಲ್ಲೂ ಭಾರತ ಗೆದ್ದರೆ ಹೊಸ ದಾಖಲೆ ನಿರ್ಮಾಣವಾಗಲಿದೆ. ಯಾಕೆಂದರೆ 2015ರಿಂದ ಆಸೀಸ್ ಅಡಿಲೇಡ್ನಲ್ಲಿ ಆಡಿರುವ ಎಲ್ಲ 7 ಅಹರ್ನಿಶಿ ಟೆಸ್ಟ್ಗಳಲ್ಲಿ ಗೆದ್ದ ಅಜೇಯ ದಾಖಲೆ ಹೊಂದಿದೆ. 2015ರಲ್ಲಿ ಕಿವೀಸ್ ವಿರುದ್ಧ 3 ವಿಕೆಟ್ಗಳಿಂದ ಗೆದ್ದಿದ್ದೇ ಇಲ್ಲಿ ಆಸೀಸ್ ಎದುರಿಸಿದ ಅತ್ಯಂತ ನಿಕಟ ಪ್ರತಿರೋಧವಾಗಿದೆ. ಆಸೀಸ್ ಆಡಿರುವ ಒಟ್ಟಾರೆ 12 ಅಹರ್ನಿಶಿ ಟೆಸ್ಟ್ಗಳಲ್ಲಿ 11ರಲ್ಲಿ ಗೆದ್ದು, 1ರಲ್ಲಷ್ಟೇ ಸೋತಿದೆ. ಭಾರತ ಇದುವರೆಗೆ 4 ಅಹರ್ನಿಶಿ ಟೆಸ್ಟ್ ಆಡಿದ್ದು, 3ರಲ್ಲಿ ಗೆದ್ದು, 1ರಲ್ಲಿ ಸೋತಿದೆ.
*1: ಬುಮ್ರಾ ಇನ್ನೊಂದು ವಿಕೆಟ್ ಪಡೆದರೆ, ಹಾಲಿ ವರ್ಷ ಟೆಸ್ಟ್ನಲ್ಲಿ 50 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನಿಸಲಿದ್ದಾರೆ.
ಪಿಚ್ ರಿಪೋರ್ಟ್
ಅಡಿಲೇಡ್ ಓವಲ್ ಪಿಚ್ ಮೇಲೆ 6 ಎಂಎಂ ಹುಲ್ಲು ಉಳಿಸಲಾಗಿದ್ದು, ಇದು ಆಸೀಸ್ ನೆಲದ ಟಿಪಿಕಲ್ ಟೆಸ್ಟ್ ಕ್ರಿಕೆಟ್ ಪಿಚ್ನಂತೆಯೇ ವರ್ತಿಸಲಿದೆ. ಅಂದರೆ ಎಂದಿನಂತೆ ವೇಗಿಗಳಿಗೆ ಹೆಚ್ಚಿನ ನೆರವು ಲಭಿಸಲಿದೆ. ಇನ್ನು ಪಂದ್ಯ ಹೊನಲು ಬೆಳಕಿನಲ್ಲಿ ಪಿಂಕ್ಬಾಲ್ನಲ್ಲಿ ನಡೆಯಲಿರುವುದರಿಂದ ಸಂಜೆ ಸೂರ್ಯಾಸ್ತದ ನಂತರ ಹೊಸ ಚೆಂಡು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಅಡಚಣೆಯ ಭೀತಿಯೂ ಇದೆ. ನಂತರ 2ನೇ ದಿನವೂ ಮಳೆ ಸ್ವಲ್ಪ ಕಾಡಬಹುದು. ಆದರೆ ಕೊನೇ 3 ದಿನ ಮಳೆ ಭೀತಿ ಇಲ್ಲದಿರುವುದರಿಂದ ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶಕ್ಕೆ ಅಡ್ಡಿಯಾಗದು.