ಡೇವಿಸ್​ ಕಪ್​ನಲ್ಲಿ ಭಾರತಕ್ಕೆ 4-0 ಜಯ; 60 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಅರಳಿದ ತ್ರಿವರ್ಣ

davis web
Published on

ಇಸ್ಲಾಮಾಬಾದ್​: ಪಾಕಿಸ್ತಾನ ನೆಲದಲ್ಲಿ ಬರೋಬ್ಬರಿ 60 ವರ್ಷಗಳ ಬಳಿಕ ಆಡಿದ ಡೇವಿಸ್​ ಕಪ್​ ಪಂದ್ಯದಲ್ಲಿ ಭಾರತೀಯ ಟೆನಿಸ್​ ತಂಡ 4-0 ಅಂತರದಿಂದ ಐತಿಹಾಸಿಕ ಗೆಲುವು ದಾಖಲಿಸಿದೆ. ಡಬಲ್ಸ್​ ಪಂದ್ಯದಲ್ಲಿ ಯೂಕಿ ಭಾಂಬ್ರಿ ಮತ್ತು ಸಾಕೇತ್​ ಮೈನೇನಿ ಜೋಡಿ ಗೆಲುವು ದಾಖಲಿಸುವ ಮೂಲಕ ಭಾರತ ತಂಡ ವಿಶ್ವ ಗುಂಪು-1ಕ್ಕೆ ಮರಳುವುದನ್ನು ಖಚಿತಪಡಿಸಿದರು. ನಂತರ ಮೊದಲ ರಿವರ್ಸ್​ ಸಿಂಗಲ್ಸ್​ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ನಿಕಿ ಪೂಣಚ ಭಾರತದ ಗೆಲುವಿನ ಅಂತರ ಹಿಗ್ಗಿಸಿದರು. ಈ ಮೂಲಕ ಭಾರತ ತಂಡ ಪಾಕಿಸ್ತಾನ ಎದುರು ಸತತ 8ನೇ ಡೇವಿಸ್​ ಕಪ್​ ಮುಖಾಮುಖಿಯಲ್ಲೂ ಗೆದ್ದು ಅಜೇಯ ದಾಖಲೆ ಕಾಯ್ದುಕೊಂಡಿತು.

ವಿಶ್ವ ಗುಂಪು-1ರ ಪ್ಲೇಆಫ್​​ ಹಣಾಹಣಿಯ ಮೊದಲ ದಿನ 2-0 ಮುನ್ನಡೆ ಸಾಧಿಸಿದ್ದ ಭಾರತ ತಂಡ ಭಾನುವಾರ ನಡೆದ 2ನೇ ಹಾಗೂ ಅಂತಿಮ ದಿನದ ಕಾದಾಟದಲ್ಲೂ ಪ್ರಾಬಲ್ಯ ಉಳಿಸಿಕೊಂಡಿತು. ಯೂಕಿ ಭಾಂಬ್ರಿ-ಸಾಕೇತ್​ ಮೈನೇನಿ ಜೋಡಿ ಡಬಲ್ಸ್​ ಕಾದಾಟದಲ್ಲಿ ಆತಿಥೇಯ ಮುಜಮ್ಮಿಲ್​ ಮುರ್ತಜ&ಅಕೀಲ್​ ಖಾನ್​ ಜೋಡಿಯನ್ನು 6-2, 7-6 (5) ನೇರಸೆಟ್​ಗಳಿಂದ ಪರಾಭವಗೊಳಿಸಿತು. ಡಬಲ್ಸ್​ ಜೋಡಿಯಲ್ಲಿ ಕೊನೇಕ್ಷಣದಲ್ಲಿ ಬದಲಾವಣೆ ಮಾಡಿದ ಪಾಕ್​ ರ್ಬಕತ್​ಉಲ್ಲಾ ಬದಲಿಗೆ ಅಕೀಲ್​ರನ್ನು ಆಡಿಸಿತು. ಆದರೆ ಈ ಪ್ರಯೋಗದ ನಡುವೆಯೂ ಪಾಕಿಸ್ತಾನಕ್ಕೆ ತನ್ನ ಪಾಲಿನ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.

ವಿಶ್ವ ಗುಂಪು-1ರ ಪ್ರವೇಶ ಖಚಿತಗೊಂಡ ಬಳಿಕ ಭಾರತವೂ ತನ್ನ ಮೊದಲ ರಿವರ್ಸ್​ ಸಿಂಗಲ್ಸ್​ ಪಂದ್ಯದಲ್ಲಿ ರಾಮ್​ಕುಮಾರ್​ ರಾಮನಾಥನ್​ ಬದಲಿಗೆ 28 ವರ್ಷದ ನಿಕಿ ಪೂಣಚಗೆ ಡೇವಿಸ್​ ಕಪ್​ ಪದಾರ್ಪಣೆಯ ಅವಕಾಶ ಕಲ್ಪಿಸಿತು. ನಿಕಿ ಪೂಣಚ ಪಾಕಿಸ್ತಾನದ ಯುವ ಆಟಗಾರ ಮುಹಮದ್​ ಶೋಯಿಬ್​ ಎದುರು 6-3, 6-4 ನೇರಸೆಟ್​ಗಳಿಂದ ಗೆದ್ದರು. ಔಪಚಾರಿಕವಾಗಿದ್ದ ಅಂತಿಮ ಸಿಂಗಲ್ಸ್​ ಪಂದ್ಯವನ್ನು ಆಡಲಿಲ್ಲ. ಇದರಿಂದ ಭಾರತಕ್ಕೆ ಕ್ಲೀನ್​ಸ್ವೀಪ್​ ಸಾಧಿಸುವ ಅವಕಾಶ ತಪ್ಪಿತು.

21 ವರ್ಷದ ಶೋಯಿಬ್​ ಕೆಟ್ಟ ಸರ್ವ್​ ಮತ್ತು ಬ್ಯಾಕ್​ಹ್ಯಾಂಡ್​ ಹೊಡೆತಗಳಿಂದ ನಿಕಿ ಪೂಣಚಗೆ ಸುಲಭವಾಗಿ ಶರಣಾದರು. ಮೊದಲ ಸಿಂಗಲ್ಸ್​ನಲ್ಲಿ ಆಡಿದ್ದ ಅಕೀಲ್​ ಖಾನ್​ ಬದಲಿಗೆ ಶೋಯಿಬ್​ ಆಡಿದರು. ಭದ್ರತಾ ಕಳವಳದ ನಡುವೆ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಭಾರತ ತಂಡ, ಪ್ರಮುಖ ಸಿಂಗಲ್ಸ್​ ಆಟಗಾರರ ಗೈರು, ಬಿಗಿ ಭದ್ರತಾ ಕಟ್ಟುಪಾಡುಗಳು ಮತ್ತು ಆತಿಥೇಯ ತಂಡಕ್ಕೆ ಅನುಕೂಲಕರವಾದ ಹುಲ್ಲು ಹಾಸಿನ ಮೈದಾನದ ಸವಾಲಿನ ನಡುವೆ ಗೆಲುವು ಒಲಿಸಿಕೊಂಡಿರುವುದು ವಿಶೇಷವೆನಿಸಿದೆ.

ಮುಂದೇನು?

2022ರಲ್ಲಿ ವಿಶ್ವ ಗುಂಪು&1ರಿಂದ ಹೊರಬಿದ್ದಿದ್ದ ಭಾರತ 2023ರಲ್ಲಿ ವಿಶ್ವ ಗುಂಪು-2ರಲ್ಲಿ ಆಡಿತ್ತು. ಇದೀಗ ವಿಶ್ವ ಗುಂಪು&1ಕ್ಕೆ ಮರುಪ್ರವೇಶ ಪಡೆದಿರುವ ಭಾರತ ತಂಡ ಇನ್ನು ಸೆಪ್ಟೆಂಬರ್​ನಲ್ಲಿ ವಿಶ್ವ ಗುಂಪು-1ರ ಮೊದಲ ಸುತ್ತಿನಲ್ಲಿ ಆಡಲಿದೆ. ಇದರ ಡ್ರಾ ತಡವಾಗಿ ಪ್ರಕಟಗೊಳ್ಳಲಿದೆ. ಪಾಕಿಸ್ತಾನ ವಿಶ್ವ ಗುಂಪು&2ರಲ್ಲೇ ಉಳಿದುಕೊಂಡಿದೆ.

ತಂದೆಯ ಸಾಧನೆಯನ್ನು ಮರುಕಳಿಸಿದ ಜೀಶನ್​ ಅಲಿ

ಪಾಕಿಸ್ತಾನ ನೆಲದಲ್ಲಿ 60 ವರ್ಷಗಳ ಹಿಂದೆ 1964ರಲ್ಲಿ ಕೊನೆಯದಾಗಿ ಆಡಿದಾಗ ಭಾರತ ತಂಡ 4-0 ಅಂತರದಿಂದ ಗೆದ್ದಿತ್ತು. ಆಗ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಅಖ್ತರ್​ ಅಲಿ ಅವರ ಪುತ್ರ ಜೀಶನ್​ ಅಲಿ ಈಗಿನ ತಂಡಕ್ಕೆ ಕೋಚ್​ ಜತೆಗೆ ಆಡದ ನಾಯಕರೂ ಆಗಿದ್ದರು. 54 ವರ್ಷದ ಕನ್ನಡಿಗ ಜೀಶನ್​ ಅಲಿ ಈಗ ತಂದೆಯ ಸಾಧನೆಯನ್ನು ಪುನರಾವರ್ತಿಸಿ ಬೀಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net