ಗಣೇಶ ಹಬ್ಬಕ್ಕೆ ಶುಭಾಶಯ ತಿಳಿಸಿದ ಡೇವಿಡ್​ ವಾರ್ನರ್​; ವ್ಯಾಪಕ ಪ್ರಶಂಸೆಗೆ ಪಾತ್ರವಾಗುತ್ತಿದೆ ಪೋಸ್ಟ್​

David Ganesha
Published on

ನವದೆಹಲಿ: ಕ್ರಿಕೆಟ್​ ವಿಚಾರಕ್ಕೆ ಬರುವುದಾದರೆ ನಮ್ಮ ಭಾರತದ ಅಭಿಮಾನಿಗಳು ಸ್ವದೇಶ ಮಾತ್ರವಲ್ಲದೇ ವಿದೇಶಿ ಆಟಗಾರರ ಮೇಲೂ ಹೆಚ್ಚಿನ ಒಲುವು ಹೊಂದಿದ್ದಾರೆ. ಅದರಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರೆಂದರೆ ಡೇವಿಡ್​ ವಾರ್ನರ್​ ಅವರದ್ದು ಎಂದರೆ ತಪ್ಪಾಗಲಾರದು. ಅದರಲ್ಲಿ ಪ್ರಮುಖವಾಗಿ ಎಬಿ ಡಿವಿಲಿಯರ್ಸ್​, ಕ್ರಿಸ್​ ಗೇಲ್​, ಡೇವಿಡ್​ ವಾರ್ನರ್​ ಸೇರಿದಂತೆ ಅನೇಕರ ಹೆಸರು ಮೊದಲಿಗೆ ಕೇಳಿ ಬರುತ್ತದೆ. ಆದರೆ, ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್​ ಕಂಡರೆ ಭಾರತೀಯರಿಗೆ ವಿಶೇಷ ಅಭಿಮಾನವಿದೆ.

ಬರೀ ಕ್ರಿಕೆಟ್​ ಮಾತ್ರವಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಹೆಚ್ಚು ಸಕ್ರಿಯರಾಗಿರುವ ಡೇವಿಡ್​ ವಾರ್ನರ್​ ಆಗಿಂದಾಗೆ ರೀಲ್ಸ್​ ಹಾಗೂ ತಮ್ಮ ಪೋಸ್ಟ್​ಗಳ ಮೂಲಕ ಜನರನ್ನು ರಂಜಿಸುವಲ್ಲಿ ಮಾತ್ರ ವಿಫಲರಾಗಿಲ್ಲ ಎಂದು ಹೇಳಬಹುದಾಗಿದೆ. ಇದೀಗ ಡೇವಿಡ್​ ವಾರ್ನರ್​ ಗಣೇಶ ಹಬ್ಬದ ಪ್ರಯುಕ್ತ ಶುಭ ಕೋರಿದ್ದು, ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

David Warner

ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಘ್ನನಿವಾರಕ ಗಣಪನ ಫೋಟೋವನ್ನು ಹಂಚಿಕೊಂಡಿರುವ ಡೇವಿಡ್ ವಾರ್ನರ್, ಹ್ಯಾಪಿ ಗಣೇಶ ಚತುರ್ಥಿ ಎಂದು ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ. ಇದೀಗ ವಾರ್ನರ್ ಹಂಚಿಕೊಂಡಿರುವ ಶುಭಾಶಯದ ಫೋಟೋ ವೈರಲ್ ಆಗಿದ್ದು, ಭಾರತೀಯ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂದಹಾಗೆ ಡೇವಿಡ್ ವಾರ್ನರ್ ಹೀಗೆ ಶುಭಾಶಯ ತಿಳಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಸಂದರ್ಭದಲ್ಲಿ ಭಗವಾನ್ ಶ್ರೀರಾಮನ ಅವತಾರದ ಫೋಟೋವೊಂದನ್ನು ಹಂಚಿಕೊಂಡು ಅಭಿನಂದನಾ ಸಂದೇಶವನ್ನು ತಿಳಿಸಿದ್ದರು.

ಹಾಗೆಯೇ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಗಳಲ್ಲೂ ಶುಭಾಶಯ ತಿಳಿಸುವ ಪರಿಪಾಠ ರೂಢಿಸಿಕೊಂಡಿದ್ದಾರೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿರುವ ವಾರ್ನರ್ ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿರುವ ಅವರು ವಿಶ್ವದ ಹಲವು ಲೀಗ್​ನಲ್ಲಿ​ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net