ವೃತ್ತಿಜೀವನದ 100ನೇ ಟಿ20 ಪಂದ್ಯದಲ್ಲಿ ಡೇವಿಡ್​ ವಾರ್ನರ್​ ಹಲವು ವಿಶೇಷ ದಾಖಲೆ!

warner web
Published on

ಹೋಬರ್ಟ್​: ಆಸೀಸ್​ ಎಡಗೈ ಆರಂಭಿಕ ಡೇವಿಡ್​ ವಾರ್ನರ್​ ಶುಕ್ರವಾರ ವೆಸ್ಟ್​ ಇಂಡೀಸ್​ ವಿರುದ್ಧ ತನ್ನ ವೃತ್ತಿಜೀವನದ 100ನೇ ಟಿ20 ಪಂದ್ಯ ಆಡಿದರು. ಈ ವೇಳೆ ಅವರು ಹಲವು ವಿಶೇಷ ದಾಖಲೆಗಳನ್ನು ಬರೆದರು.

ವಾರ್ನರ್​ ಎಲ್ಲ 3 ಪ್ರಕಾರದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಪಂದ್ಯವಾಡಿದ 3ನೇ ಆಟಗಾರ ಎನಿಸಿದರು. ರಾಸ್​ ಟೇಲರ್​ ಮತ್ತು ವಿರಾಟ್​ ಕೊಹ್ಲಿ ಮೊದಲಿಬ್ಬರು. ಇನ್ನು ವಾರ್ನರ್​ ಎಲ್ಲ 3 ಪ್ರಕಾರದ 100ನೇ ಪಂದ್ಯದಲ್ಲಿ 50 ಪ್ಲಸ್​ ರನ್​ ಗಳಿಸಿದ ಮೊದಲ ಸಾಧಕರೆನಿಸಿದರು. 100ನೇ ಟೆಸ್ಟ್​ನಲ್ಲಿ ದ್ವಿಶತಕ, 100ನೇ ಏಕದಿನದಲ್ಲಿ ಶತಕ ಮತ್ತು 100ನೇ ಟಿ20ಯಲ್ಲಿ ಅರ್ಧಶತಕ ಬಾರಿಸಿದ್ದು ಅವರ ವಿಶೇಷತೆ. ಎಲ್ಲ 3 ಪ್ರಕಾರದ 100ನೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ವಿಶಿಷ್ಠ ಸಾಧನೆಯೂ ಅವರದಾಗಿದೆ.

100ನೇ ಪಂದ್ಯದಲ್ಲಿ ವಾರ್ನರ್​ ಗೆಲುವಿನಾಟ: ಡೇವಿಡ್​ ವಾರ್ನರ್​ (70ರನ್​, 36 ಎಸೆತ, 12 ಬೌಂಡರಿ, 1 ಸಿಕ್ಸರ್​) ತನ್ನ 100ನೇ ಟಿ20 ಪಂದ್ಯದಲ್ಲಿ ಆಡಿದ ಸ್ಮರಣೀಯ ಇನಿಂಗ್ಸ್​ ಬಲದಿಂದ ಆಸ್ಟ್ರೆಲಿಯಾ ತಂಡ ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧದ ಚುಟುಕು ಕ್ರಿಕೆಟ್​ ಸರಣಿಯಲ್ಲಿ ಶುಭಾರಂಭ ಕಂಡಿದೆ. ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ 11 ರನ್​ಗಳಿಂದ ಗೆದ್ದ ಆಸೀಸ್​, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಆಸೀಸ್​ 7 ವಿಕೆಟ್​ಗೆ 213 ರನ್​ ಪೇರಿಸಿದರೆ, ವಿಂಡೀಸ್​ 8 ವಿಕೆಟ್​ಗೆ 202 ರನ್​ ಗಳಿಸಲಷ್ಟೇ ಶಕ್ತವಾಯಿತು. ಉತ್ತಮ ಆರಂಭದ ಬಳಿಕ ಕುಸಿತ ಕಂಡರೂ ವಿಂಡೀಸ್​ ಕೊನೆಯವರೆಗೂ ಹೋರಾಟ ತೋರಿತು. ಸೀನ್​ ಅಬೋಟ್​ ಎಸೆತದ ಕೊನೇ ಓವರ್​ನಲ್ಲಿ 27 ರನ್​ ಬೇಕಿದ್ದಾಗ ವಿಂಡೀಸ್​, 15 ರನ್​ ಕಸಿಯಲಷ್ಟೇ ಶಕ್ತವಾಯಿತು. ಭಾನುವಾರ ಅಡಿಲೇಡ್​ನಲ್ಲಿ 2ನೇ ಪಂದ್ಯ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net