

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಸಂಪೂರ್ಣ ಇನ್‌ಸ್ಟಾಗ್ರಾಂನಲ್ಲಿ ತೊಡಗಿಸಿಕೊಂಡಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ವಿವಿಧ ಹಾಡುಗಳಿಗೆ ವಿಡಿಯೋ ಮಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಈಗಾಗಲೇ ತೆಲುಗು ಚಿತ್ರದ ಹಾಡುಗಳಿಗೆ ಮಾಡಿರುವ ವಿಡಿಯೋ ವೈರಲ್ ಆಗಿರುವ ವಾರ್ನರ್, ತಮ್ಮ ಚಿತ್ರ ಬಿಡಿಸಿದ ಕನ್ನಡಿಗನ ಕಲೆಗೆ ಮನ ಸೋತಿದ್ದಾರೆ. ಕಲಾವಿದನೊಬ್ಬ ವಾರ್ನರ್ ಚಿತ್ರ ಬಿಡಿಸುತ್ತಿದ್ದರೆ, ಇದಕ್ಕೆ ಪ್ರತಿಯಾಗಿ ಕೇಸ್ ನಂ.18/9 ಚಿತ್ರದ ಹಾಡನ್ನು ಸಂಯೋಜಿಸಲಾಗಿದೆ.
ಕ್ರಿಕೆಟ್ ಚಟುವಟಿಕೆಯಿಂದ ದೂರವಿರುವ ವಾರ್ನರ್ ಪತ್ನಿ ಕ್ಯಾಂಡೈಸ್ ಹಾಗೂ ತಮ್ಮಮಕ್ಕಳೊಂದಿಗೆ ವಿವಿಧ ಹಾಡುಗಳಿಗೆ ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಕಲಾವಿದನೊಬ್ಬ ಕೇವಲ ಬೆರಳುಗಳಿಂದಲೇ ಬಿಡಿಸಿರುವ ತಮ್ಮ ಚಿತ್ರಕ್ಕೆ ವಾರ್ನರ್ ಮನಸೋತಿದ್ದಾರೆ. ಸಿಂಧು ಲೋಕನಾಥ್ ಹಾಗೂ ಪ್ರವೀಣ್ ಕುಮಾರ್ ಶೆಟ್ಟಿ ಅಭಿನಯದ ಕೇಸ್ ನಂ. 18/9 ಚಿತ್ರದ ‘ಕುಂತಲ್ಲೆ ಕುಣಿಯುತ್ತಾಳೆ...ಹಾಡಿನ... ಹೇಳಲು ಆಗದ..ಸುಂದರ ಅನುಭವ ಸ್ವರ್ಗನೇ ಕಣ್ಣಮುಂದೆ..ಎಂಬ ಸಾಲುಗಳನ್ನು ಆಯ್ದುಕೊಳ್ಳಲಾಗಿದೆ.
‘ಅತ್ಯದ್ಭುತವಾದ ಕಲೆ, ಹಲವು ಮಂದಿ ನನಗೆ ಈ ರೀತಿ ಕಳುಹಿಸುತ್ತಿದ್ದಾರೆ. ಇಂಥ ಕಲೆ ಭಾರಿ ಇಷ್ಟವಾಯಿತು. ಗ್ರೇಟ್ ಮಹಿ’ ಎಂದು ಕಲಾವಿದನಿಗೆ ಶಹಬ್ಬಾಸ್ ಗಿರಿ ನೀಡಿದ್ದಾರೆ. ಈ ವಿಡಿಯೋಗೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಪ್ರತಿಕ್ರಿಯಿಸಿದ್ದಾರೆ. ಸೂಪರ್ ವಾರ್ನರ್, ನಮ್ಮ ಕನ್ನಡ. ಕನ್ನಡ ಹಾಡು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.
ಇದನ್ನೂ ಓದಿ: ಸ್ಟಾರ್ ಕ್ರಿಕೆಟಿಗರಿಗೂ ಹರಡಿದ ಕರೊನಾ ವೈರಸ್!
ಕರೊನಾ ವೈರಸ್ ಭೀತಿಯಿಂದ ಮೂರು ತಿಂಗಳ ಕಾಲ ಲಾಕ್ ಆಗಿದ್ದ ವಾರ್ನರ್, ಕಳೆದ ವಾರ ಆಸ್ಟ್ರೇಲಿಯಾ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಆಭ್ಯಾಸ ಆರಂಭಿಸಿದ್ದರು. ಇವರಿಗೆ ಸ್ಟೀವನ್ ಸ್ಮಿತ್ ಸೇರಿದಂತೆ ಇನ್ನಿತರ ಆಟಗಾರರು ಸಾಥ್ ನೀಡಿದ್ದಾರೆ.