2 ದಿನಗಳ ಹಿಂದೆ… ವಿಶ್ವಕಪ್​ ಸೋಲಿನ ಬೆನ್ನಲ್ಲೇ ಡೇವಿಡ್ ಮಿಲ್ಲರ್ ಭಾವುಕ ಪೋಸ್ಟ್ ವೈರಲ್!​

Untitled design - 2024-07-02T143424.418
Published on

ನ್ಯೂಯಾರ್ಕ್​: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನ ಮೈದಾನದಲ್ಲಿ ಟೀಮ್ ಇಂಡಿಯಾ ವಿರುದ್ಧ 7 ರನ್​ಗಳ ಅಂತರದಿಂದ ಹೀನಾಯ ಸೋಲು ಕಂಡ ದಕ್ಷಿಣ ಆಫ್ರಿಕಾ ಸದ್ಯ ಭಾರೀ ಆಘಾತಕ್ಕೊಳಗಾಗಿದೆ. ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಿಂದಲೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಸತತ ಗೆಲುವುಗಳನ್ನು ಕಂಡಿದ್ದ ಸೌತ್ ಆಫ್ರಿಕಾ, ಈ ರೀತಿಯಲ್ಲಿ ಪಂದ್ಯವನ್ನು ಕೈಚೆಲ್ಲಿದ್ದು ಅನೇಕರಿಗೆ ಅಚ್ಚರಿ ಮೂಡಿಸಿದೆ.

17 ವರ್ಷಗಳ ಬಳಿಕ ಐಸಿಸಿ ಟಿ20 ವಿಶ್ವಕಪ್​ ಗೆದ್ದ ಭಾರತ, ಚಾಂಪಿಯನ್​ ಆಗಿ ಹೊರಹೊಮ್ಮಿದರೆ, ಇತ್ತ ಸೋಲಿನಿಂದ ಉಂಟಾದ ನೋವನ್ನು ಮರೆಯಲು ದಕ್ಷಿಣ ಆಫ್ರಿಕಾ ಆಟಗಾರರಿಗೆ ಬಹಳ ಕಷ್ಟಕರವಾಗುತ್ತಿದೆ ಎಂಬುದು ಇತ್ತೀಚಿನ ದಿನಗಳಲ್ಲಿ ತಿಳಿದುಬಂದಿದೆ. ಟಿ20 ವಿಶ್ವಕಪ್ ಮುಗಿದು ಇಂದಿಗೆ ಎರಡು ದಿನಗಳು ಕಳೆದರೂ ಸಹ ದಕ್ಷಿಣ ಆಫ್ರಿಕಾ ಆಟಗಾರರು ಹಾಗೂ ಅಭಿಮಾನಿಗಳ ಬೇಸರ ಮಾಸಿಲ್ಲ. ಇದಕ್ಕೆ ಪುಷ್ಠಿ ನೀಡಿದ್ದು, ಡೇವಿಡ್ ಮಿಲ್ಲರ್​ ಭಾವುಕ ಪೋಸ್ಟ್.​

ತಮ್ಮ ತಂಡ ಸೋಲುತ್ತಿದ್ದಂತೆ ಮೈದಾನದಲ್ಲಿ ಮೌನಕ್ಕೆ ಶರಣಾದ ಡೇವಿಡ್ ಮಿಲ್ಲರ್​, ಸುತ್ತಮುತ್ತ ಯಾರೊಂದಿಗೂ ಹೆಚ್ಚು ಮಾತನಾಡದೆ, ಪೆವಿಲಿಯನ್​ನ​ತ್ತ ಹೊರಟು ಹೋದರು. ಆದ್ರೆ, ಇಂದು ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್​ ಹಂಚಿಕೊಂಡಿರುವ ಮಿಲ್ಲರ್​, "ನನಗೆ ತುಂಬ ನೋವಾಗಿದೆ. ಕಳೆದ ಎರಡು ದಿನಗಳ ಹಿಂದೆ ಕಂಡ ಸೋಲು ನುಂಗಲಾರದ ತುತ್ತಾಗಿದೆ. ನಾನು ಅನುಭವಿಸುತ್ತಿರುವ ಸಂಕಟವನ್ನು ಪದಗಳು ವಿವರಿಸಲು ಸಾಧ್ಯವಿಲ್ಲ" ಎಂದಿದ್ದಾರೆ.

"ಆದ್ರೆ, ಒಂದಂತು ಸತ್ಯ. ನನ್ನ ತಂಡದ ಬಗ್ಗೆ ನನಗೆ ಹೆಮ್ಮೆಯಿದೆ. ಟೂರ್ನಿ ಪೂರ ನಮ್ಮ ಪಯಣ ನಿಜಕ್ಕೂ ಅದ್ಭುತವಾಗಿತ್ತು. ನೋವು-ನಲಿವು ಎರಡನ್ನೂ ಅನುಭವಿಸಿದ್ದೇವೆ. ಮೌನದಿಂದ ಇದ್ದು, ಮುಂದಿನ ದಿನಗಳಲ್ಲಿ ಗೆಲುವನ್ನು ನೋಡುವತ್ತ ಸಾಗುತ್ತೇವೆ. ಅದರಲ್ಲಿ ಅನುಮಾನವಿಲ್ಲ" ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net