

ಹನೂರು: ಅಗ್ನಿಶಾಮಕ ದಳದ ಅಧಿಕಾರಿಯಾಗಿ ಬಡ್ತಿ ಹೊಂದಿ ವರ್ಗಾವಣೆಯಾದ ಪಟ್ಟಣದ ಆರ್.ಎಸ್.ದೊಡ್ಡಿ ಬಳಿಯ ಅಗ್ನಿಶಾಮಕ ಠಾಣೆಯ ಐವರು ಸಿಬ್ಬಂದಿಯನ್ನು ಭಾನುವಾರ ಸನ್ಮಾನಿಸಿ ಬೀಳ್ಕೊಡಲಾಯಿತು.
ಪ್ರವೀಣ್‌ಕುಮಾರ್, ಮುನಿಶಾಂತ, ಕಾರ್ತಿಕ್, ನವೀನ್ ಹಾಗೂ ನಾಗೇಂದ್ರ ಬಡ್ತಿ ಹೊಂದಿದ ಸಿಬ್ಬಂದಿ. ಠಾಣಾಧಿಕಾರಿ ಪ್ರಶಾಂತ್ ನಾಯಕ್ ಮಾತನಾಡಿ, ಅಗ್ನಿಶಾಮಕ ದಳದ ಅಧಿಕಾರಿಗಳಾಗಿ ಬಡ್ತಿ ಹೊಂದಿದ ಸಿಬ್ಬಂದಿ ಅಗ್ನಿ, ನೀರು ಅವಘಡ, ಬಾವಿಗೆ ಬಿದ್ದಿದ್ದ ಪ್ರಾಣಿಗಳ ರಕ್ಷಣೆ ಹಾಗೂ ಇತರ ಕಾರ್ಯಾಚರಣೆಯಲ್ಲಿ ಪರಿಣಿತಿ ಹೊಂದಿದ್ದು, ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಜತೆಗೆ ಸಹದ್ಯೋಗಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಹಾಗಾಗಿ ಇವರ ಕಾರ್ಯ ದಕ್ಷತೆ ವರ್ಗಾವಣೆಗೊಂಡಿರುವ ಠಾಣೆಯಲ್ಲೂ ಮುಂದುವರಿಯಲಿ ಎಂದು ಆಶಿಸಿದರು.