ಶ್ರೀಲಂಕಾಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ವಾಟ್ಮೋರ್ ಈಗ ಬರೋಡ ಕೋಚ್

Baroda
Published on

ವಡೋದರ: ಶ್ರೀಲಂಕಾಕ್ಕೆ 1996ರಲ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟು ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದ ಮಾಜಿ ಕೋಚ್ ಡ್ಯಾವ್ ವಾಟ್ಮೋರ್ ಮುಂಬರುವ ಕ್ರಿಕೆಟ್ ಋತುವಿಗೆ ಬರೋಡ ರಣಜಿ ತಂಡಕ್ಕೆ ನೂತನ ಕೋಚ್ ಮತ್ತು ಕ್ರಿಕೆಟ್ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ಬರೋಡ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅಜಿತ್ ಲೆಲೆ, ಲಾಕ್​ಡೌನ್ ನಡುವೆ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಕ್ರಿಕೆಟ್ ನಿರ್ದೇಶಕರಾಗಿ ಅವರು ಬರೋಡದ 23, 19, 16 ಸಹಿತ ಎಲ್ಲ ವಯೋಮಿತಿ ತಂಡಕ್ಕೂ ಮಾರ್ಗದರ್ಶನ ನೀಡಲಿದ್ದಾರೆ. 2018-19ರ ರಣಜಿ ಟ್ರೋಫಿಯಲ್ಲಿ ಚೊಚ್ಚಲ ಬಾರಿ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ್ದ ಕೇರಳ ತಂಡಕ್ಕೂ ಅವರು ಕೋಚ್ ಆಗಿದ್ದರು. ಕೇರಳ ತಂಡದ ಜತೆಗಿನ ಅವರ 3 ವರ್ಷಗಳ ಒಪ್ಪಂದ ಇತ್ತೀಚೆಗೆ ಕೊನೆಗೊಂಡಿತ್ತು.

ಆಸ್ಟ್ರೇಲಿಯಾದ ಮಾಜಿ ಆಟಗಾರ ವಾಟ್ಮೋರ್ 2008ರಲ್ಲಿ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ 19 ವಯೋಮಿತಿ ವಿಶ್ವಕಪ್ ಗೆದ್ದ ಭಾರತ ತಂಡಕ್ಕೂ ಕೋಚ್ ಆಗಿದ್ದರು. 66 ವರ್ಷದ ವಾಟ್ಮೋರ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 4 ತಂಡಗಳಿಗೆ (ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಜಿಂಬಾಬ್ವೆ) ಕೋಚ್ ಆಗಿದ್ದರು. ಐಪಿಎಲ್​ನಲ್ಲಿ ಕೆಕೆಆರ್ ತಂಡಕ್ಕೂ ತರಬೇತುದಾರ ಆಗಿದ್ದರು. -ಪಿಟಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net