

ಬೆಂಗಳೂರು: ಐಪಿಎಲ್ ಟೂರ್ನಿಯ ವೇಳೆ ಯಾವಾಗಲೂ ಅಶೋಕ್ ದಿಂಡಾ ಅಕಾಡೆಮಿ ತೆರೆದಿರುತ್ತದೆ. ಐಪಿಎಲ್ ಪಂದ್ಯಗಳಲ್ಲಿ ದುಬಾರಿ ಎನಿಸುವ ಬೌಲರ್ಗಳನ್ನೆಲ್ಲ ದಿಂಡಾ ಅಕಾಡೆಮಿಗೆ ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತದೆ. 15.5 ಕೋಟಿ ರೂ. ಮೊತ್ತಕ್ಕೆ ಕೆಕೆಆರ್ ತಂಡಕ್ಕೆ ಸೇರ್ಪಡೆಗೊಂಡು ಮೊದಲ ಪಂದ್ಯದಲ್ಲೇ ದುಬಾರಿಯಾದ ಆಸೀಸ್ ವೇಗಿ ಪ್ಯಾಟ್ ಕಮ್ಮಿನ್ಸ್, ದಿಂಡಾ ಅಕಾಡೆಮಿಗೆ ಈ ಬಾರಿ ಮೊದಲ ಸೇರ್ಪಡೆಯಾಗಿದ್ದರು. ಇದೀಗ ಪಂಜಾಬ್ ವಿರುದ್ಧದ ಪಂದ್ಯದ ಬಳಿಕ ಆರ್ಸಿಬಿ ತಂಡದಲ್ಲಿರುವ ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೈಲ್ ಅವರನ್ನೂ ದಿಂಡಾ ಅಕಾಡೆಮಿಗೆ ಸೇರಿಸಿ ಟ್ರೋಲರ್ಗಳು ಸಂಭ್ರಮಿಸಿದ್ದಾರೆ.
ಏನಿದು ದಿಂಡಾ ಅಕಾಡೆಮಿ?
ಬಂಗಾಳದ ವೇಗಿ ಅಶೋಕ್ ದಿಂಡಾ ಅವರು ಈ ಹಿಂದೆ ಐಪಿಎಲ್ ಪಂದ್ಯಗಳಲ್ಲಿ ಹಲವು ಬಾರಿ ಬ್ಯಾಟ್ಸ್ಮನ್ಗಳಿಂದ ಭಾರಿ ದಂಡನೆಗೆ ಒಳಗಾಗಿದ್ದರು. ಹೀಗಾಗಿ ಐಪಿಎಲ್ನಲ್ಲಿ ಭಾರಿ ದಂಡನೆಗೆ ಒಳಗಾಗುವ ಬೌಲರ್ಗಳನ್ನೆಲ್ಲ ಈಗ ಅಶೋಕ್ ದಿಂಡಾ ಅವರಿಗೆ ಹೋಲಿಸಲಾಗುತ್ತದೆ. ಇದಕ್ಕೆ ತಮಾಷೆಯಾಗಿ ಅಶೋಕ್ ದಿಂಡಾ ಅಕಾಡೆಮಿ ಎಂದೂ ಟ್ರೋಲರ್ಗಳು ಹೆಸರಿಟ್ಟಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ಮೊದಲ ಓವರ್ನಲ್ಲೇ 15 ರನ್ ಬಿಟ್ಟುಕೊಟ್ಟಿದ್ದಲ್ಲದೆ, ಒಟ್ಟಾರೆ 3 ಓವರ್ಗಳ ದಾಳಿಯಲ್ಲಿ 49 ರನ್ ಬಿಟ್ಟುಕೊಟ್ಟು ನಿರಾಸೆ ಮೂಡಿಸಿದ್ದರು. ಐಪಿಎಲ್ನ ದುಬಾರಿ ಬೌಲರ್ ಮೊದಲ ಪಂದ್ಯದಲ್ಲೇ ದುಬಾರಿಯಾದರು ಎಂದೂ ಅವರ ಕಾಲೆಳೆಯಲಾಗಿತ್ತು. ಅದರ ಬೆನ್ನಲ್ಲೇ ಟ್ರೋಲರ್ಗಳು, ಅಶೋಕ್ ದಿಂಡಾ ಅಕಾಡೆಮಿಗೆ ನಿಮಗೆ ಸ್ವಾಗತ ಎಂದು ಮೀಮ್ಸ್ಗಳನ್ನು ಹರಿದಾಡಿದ್ದರು.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ 4 ಓವರ್ಗಳಲ್ಲಿ 57 ರನ್ ಬಿಟ್ಟುಕೊಟ್ಟ ಬಳಿಕ ಡೇಲ್ ಸ್ಟೈನ್ ಕೂಡ ಇಂಥದ್ದೇ ಟ್ರೋಲ್ಗಳಿಗೆ ಆಹಾರವಾಗಿದ್ದು, ಅಶೋಕ್ ದಿಂಡಾ ಅಕಾಡೆಮಿಗೆ ಹೊಸ ಸೇರ್ಪಡೆ ಎಂದು ಅವರ ಕಾಲೆಳೆಯಲಾಗಿದೆ. ಅನುಭವಿ ವೇಗಿ ಸ್ಟೈನ್ ಶತಕವೀರ ಕೆಎಲ್ ರಾಹುಲ್ ಅವರಿಂದ ಹೆಚ್ಚು ದಂಡನೆಗೆ ಒಳಗಾದರು. ಆದರೆ ಅವರ ಎಸೆತದಲ್ಲಿ ವಿರಾಟ್ ಕೊಹ್ಲಿ, ರಾಹುಲ್ರ ಕ್ಯಾಚ್ ಕೈಚೆಲ್ಲಿದ್ದು ಕೂಡ ಅವರಿಗೆ ದುಬಾರಿಯಾಯಿತು.
ಆರ್ಸಿಬಿ ತಂಡದ ಮತ್ತೋರ್ವ ವೇಗಿ ಉಮೇಶ್ ಯಾದವ್ ಅವರನ್ನು ಕಳೆದ ವರ್ಷವೇ ಟ್ರೋಲರ್ಗಳು ಅಶೋಕ್ ದಿಂಡಾ ಅಕಾಡೆಮಿಗೆ ಸೇರ್ಪಡೆಗೊಳಿಸಿದ್ದರು. ದಿಂಡಾ ಅಕಾಡೆಮಿಯ ಬಗ್ಗೆ ಆರ್ಸಿಬಿ ತಂಡ ಟ್ವಿಟರ್ ಖಾತೆಯಲ್ಲೂ ಉಲ್ಲೇಖವಾದಾಗ ಸ್ವತಃ ಅಶೋಕ್ ದಿಂಡಾ ಅವರೇ ಟ್ರೋಲ್ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆರ್ಸಿಬಿ ತಂಡದ ಮಾಜಿ ಬೌಲರ್ ಕೂಡ ಆಗಿರುವ ಅಶೋಕ್ ದಿಂಡಾ, ಟ್ರೋಲರ್ಗಳ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಹಲವು ಬಾರಿ ಮಾಡಿದ್ದರೂ ಅದು ಫಲ ನೀಡಿಲ್ಲ.