

IPL 2025: ಐಪಿಎಲ್ 18ನೇ ಆವೃತ್ತಿ ಶುರುವಾದಗಿನಿಂದಲೂ ಮೈದಾನದಲ್ಲಿ ಒಂದಲ್ಲ ಒಂದು ರೋಮಾಂಚಕ ಕ್ಷಣಗಳು ನಡೆಯುತ್ತಿವೆ. ಬೃಹತ್ ರನ್ ದಾಖಲೆ, ಅದ್ಭುತ ಚೇಸಿಂಗ್, ಅಮೋಘ ಕ್ಯಾಚ್, ಸ್ಫೋಟಕ ಇನ್ನಿಂಗ್ಸ್, ಕಣ್ಮಿಂಚಿನ ಸ್ಟಂಪಿಂಗ್ಸ್, ಶತಕಗಳ ದಾಖಲೆ ಸೇರಿದಂತೆ ಹಲವು ವಿಷಯಗಳು ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯುತ್ತಿವೆ. ಈ ಮಧ್ಯೆ ದಿಗ್ಗಜ ಬ್ಯಾಟರ್ಗಳು ಮತ್ತು ದಾಖಲೆಗಳಿಗೆ ಸಾಕ್ಷಿಯಾದ ತಂಡಗಳು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವುದು ಫ್ಯಾನ್ಸ್ಗಳ ಬೇಸರ ಹಾಗೂ ಗೊಂದಲಕ್ಕೆ ಕಾರಣವಾಗಿದೆ.
ಕಳೆದ ಒಂದಷ್ಟು ಪಂದ್ಯಗಳಿಂದ ಸತತ ಸೋಲು ಅನುಭವಿಸುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಒಂದೆಡೆಯಾದರೆ, ಸೋಲು-ಗೆಲುವಿನ ಮಿಶ್ರ ಫಲವನ್ನು ನೋಡುತ್ತಿರುವ ಮುಂಬೈ ಇಂಡಿಯನ್ಸ್ ಮತ್ತೊಂದೆಡೆ. ಇದು ತಂಡಗಳ ವಿಷಯವಾದರೆ. ಆ ತಂಡಗಳ ದಿಗ್ಗಜ ಬ್ಯಾಟರ್ಗಳಾದ ರೋಹಿತ್ ಶರ್ಮ ಮತ್ತು ಮಹೇಂದ್ರ ಸಿಂಗ್ ಧೋನಿ, ಈ ಆವೃತ್ತಿಯಲ್ಲಿ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಈ ಪೈಕಿ ರೋಹಿತ್ ಶರ್ಮ ಮುಂಚೂಣಿಯಲ್ಲಿದ್ದು, ಆಡಿದ ಅಷ್ಟು ಪಂದ್ಯಗಳಲ್ಲಿ ಕೇವಲ ಒಂದಂಕಿ ಸಂಖ್ಯೆಯ ರನ್ಗಳನ್ನು ದಾಖಲಿಸಿರುವುದು ಟೀಕಾಕಾರರಿಗೆ ಅಸ್ತ್ರವಾಗಿದೆ.
ಐಪಿಎಲ್ನ ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿ, ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿರುವ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್, "ನಿಜವಾಗಿಯೂ ಈ ಲೀಗ್‌ನಲ್ಲಿ ಕೆಲವು ವ್ಯಕ್ತಿಗಳು ಇರಬಾರದಿತ್ತು" ಎಂದು ಬರೆದಿದ್ದಾರೆ. ಇಲ್ಲಿ ಯಾರ ಹೆಸರನ್ನೂ ಪರಿಗಣಿಸದೆ ಪರೋಕ್ಷವಾಗಿ ಟಾಂಗ್ ಕೊಟ್ಟಿರುವ ಸ್ಟೇನ್, ಅಸಲಿಗೆ ಯಾರಿಗೆ ಹೇಳಿದರು? ಯಾವ ಆಟಗಾರನನ್ನು ಇಲ್ಲಿ ಉಲ್ಲೇಖಿಸಿದ್ದಾರೆ ಎಂಬ ಪ್ರಶ್ನೆಗಳು ನೆಟ್ಟಿಗರನ್ನು ಕಾಡಿದೆ. ಆದ್ರೆ, ಇದಕ್ಕೆ ಸೂಕ್ತ ಉತ್ತರ ಸಿಕ್ಕಿಲ್ಲ. ಕಾರಣ, ಇದರ ನಂತರದಲ್ಲಿ ಸ್ಟೇನ್ ಯಾವ ರೀತಿಯಲ್ಲೂ ಸ್ಪಷ್ಟನೆ ನೀಡಿಲ್ಲ.
ಕೆಲವರು ಇದು ಖಂಡಿತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಿಗ್ಗಜ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರಿಗೆ ಹೇಳಿರುವುದು ಎಂದರೆ, ಇನ್ನೂ ಕೆಲವರು ಇಲ್ಲ, ಇದು ಮುಂಬೈ ಇಂಡಿಯನ್ಸ್ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮ ಅವರಿಗೆ ಸೂಚಿಸಿರುವುದು. ಏಕೆಂದರೆ, ಕಳೆದ ಪಂದ್ಯಗಳಲ್ಲಿ ರೋಹಿತ್ ತಮ್ಮ ಅಬ್ಬರದ ಬ್ಯಾಟಿಂಗ್ ನಡೆಸಿಲ್ಲ, ತಂಡಕ್ಕೆ ಉತ್ತಮ ರನ್ ಕೊಡುಗೆ ನೀಡಿಲ್ಲ ಎಂದು ಅಭಿಪ್ರಾಯಿಸಿದ್ದಾರೆ. ಇದನ್ನೂ ಮೀರಿ ಒಂದಷ್ಟು ಮಂದಿ, "ಇಲ್ಲಿ ಸ್ಟೇನ್, ರಿಷಭ್ ಪಂತ್, ಧ್ರುವ್ ಜುರೆಲ್, ಲಿವಿಂಗ್‌ಸ್ಟೋನ್, ದೇವದತ್ತ ಪಡಿಕ್ಕಲ್, ಧೋನಿ, ರೋಹಿತ್ ಶರ್ಮಾ ಬಗ್ಗೆ ಮಾತನಾಡುತ್ತಿದ್ದಾರೆ" ಎಂದು ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).