

Abhishek Sharma: ನಿನ್ನೆ (ಏಪ್ರಿಲ್ 12) ರಾತ್ರಿ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮ, ತಮ್ಮ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದರು. ಕೇವಲ 40 ಎಸೆತಗಳಲ್ಲಿ ಶತಕ ಗಳಿಸಿದ ಅಭಿಶೇಕ್, ಒಟ್ಟು 55 ಎಸೆತಗಳನ್ನು ಎದುರಿಸಿ 14 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಾಯದಿಂದ 141 ರನ್ ಗಳಿಸಿ ಐಪಿಎಲ್ನಲ್ಲಿ ತಮ್ಮ ಹೆಸರಿಗೆ ದಾಖಲೆಯನ್ನು ಸೇರ್ಪಡೆಗೊಳಿಸಿದರು.
ಅತ್ಯಧಿಕ ರನ್ ಗಳಿಸಿದ ಅಭಿಷೇಕ್, ತಮ್ಮ ಗುರುಗಳಾದ ಯುವರಾಜ್ ಸಿಂಗ್ ಹಾಕಿಕೊಟ್ಟ ದಾರಿಯಲ್ಲೇ ಸಾಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ. ಐಪಿಎಲ್ ಇತಿಹಾಸದಲ್ಲಿ ಐದನೇ ಅತಿ ವೇಗದ ಶತಕ ದಾಖಲಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅಭಿಷೇಕ್, ತಮ್ಮ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಇನ್ನು ಅಭಿಷೇಕ್ ಶತಕ ಬಾರಿಸಿದ್ದೇ ತಡ ಸ್ಟ್ಯಾಂಡ್ಸ್ನಲ್ಲಿ ಕುಳಿತು ತಮ್ಮ ತಂಡವನ್ನು ಪ್ರೋತ್ಸಾಹಿಸುತ್ತಿದ್ದ ಸನ್‌ರೈಸರ್ಸ್ ಹೈದರಾಬಾದ್ ಓನರ್ ಕಾವ್ಯಾ ಮಾರನ್, ಅಭಿಷೇಕ್ ಶತಕಕ್ಕೆ ಎದ್ದು ಕುಣಿದು ಕುಪ್ಪಳಿಸಿದರು. ಇದೇ ಖುಷಿಯಲ್ಲಿ ಅಲ್ಲೇ ಕುಳಿತಿದ್ದ ಶರ್ಮ ಅವರ ಪೋಷಕರಿಗೆ ಪ್ರೀತಿಯ ಅಪ್ಪುಗೆ ನೀಡಿದರು. ಇದು ಫ್ರಾಂಚೈಸಿಯ ಅಭಿಮಾನಿಗಳ ಗಮನ ಸೆಳೆಯಿತು. ಈ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿವೆ.
ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 245 ರನ್ ಗಳಿಸಿತು. ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ (82 ರನ್ 36 ಎಸೆತ, 6 ಬೌಂಡರಿ, 6 ಸಿಕ್ಸರ್), ಪ್ರಿಯಾಂಶ್ ಆರ್ಯ (36 ರನ್, 13 ಎಸೆತ, 2 ಬೌಂಡರಿ, 4 ಸಿಕ್ಸರ್) ಪ್ರಭ್ ಸಿಮ್ರಾನ್ ಸಿಂಗ್ (42 ರನ್ 23 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಮಾರ್ಕ್ ಸ್ಟೊಯಿನಿಸ್ (ಔಟಾಗದೆ 34 ರನ್, 11 ಎಸೆತ, 1 ಬೌಂಡರಿ, 4 ಸಿಕ್ಸರ್) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ತಂಡವು ಬೃಹತ್ ಮೊತ್ತವನ್ನು ಕಲೆಹಾಕಿತು. ಎಸ್‌ಆರ್‌ಎಚ್ ಬೌಲರ್‌ಗಳಲ್ಲಿ ಹರ್ಷಲ್ ಪಟೇಲ್ ನಾಲ್ಕು ವಿಕೆಟ್ ಪಡೆದರೆ, ಇಶಾನ್ ಮಾಲಿಂಗ ಎರಡು ವಿಕೆಟ್ ಪಡೆದರು.
ಬಳಿಕ ಪಂಜಾಬ್ ನೀಡಿದ ಗುರಿ ಬೆನ್ನತ್ತಿದ ಎಸ್‌ಆರ್‌ಎಚ್ ಪರ ಅಭಿಷೇಕ್ ಶರ್ಮಾ (141 ರನ್, 55 ಎಸೆತ, 14 ಬೌಂಡರಿ, 10 ಸಿಕ್ಸರ್) ವಿಧ್ವಂಸಕ ಶತಕ ಗಳಿಸಿದರು. ಟ್ರಾವಿಸ್ ಹೆಡ್ (66 ರನ್, 37 ಎಸೆತ, 9 ಬೌಂಡರಿ, 3 ಸಿಕ್ಸರ್) ನೆರವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ 18.3 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಸತತ ಸೋಲುಗಳಿಂದ ಕಂಗೆಟ್ಟಿದ ಎಸ್‌ಆರ್‌ಎಚ್ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. (ಏಜೆನ್ಸೀಸ್)