ಪಾಕಿಸ್ತಾನದಲ್ಲಿ ಚಾಂಪಿಯನ್ಸ್​ ಟ್ರೋಫಿ ಆಡಲು ಭಾರತದ ಮೇಲೆ ಒತ್ತಡವಿಲ್ಲ; ಕೇಂದ್ರ ಸರ್ಕಾರದ ವಿರುದ್ಧ ಹೋಗಲ್ಲ ಎಂದ ಐಸಿಸಿ

ct pak web
Published on

ನವದೆಹಲಿ: ಪಾಕಿಸ್ತಾನದಲ್ಲಿ 2025ರ ಫೆಬ್ರವರಿ-ಮಾರ್ಚ್​ನಲ್ಲಿ ನಿಗದಿಯಾಗಿರುವ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾಗವಹಿಸಲು, ಭಾರತ ಸರ್ಕಾರದ ನಿಲುವಿಗೆ ವಿರುದ್ಧವಾಗಿ ಬಿಸಿಸಿಐ ಮೇಲೆ ಒತ್ತಡ ಹೇರುವುದಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಕೇಂದ್ರ ಸರ್ಕಾರ ಅನುಮತಿ ನೀಡದಿದ್ದರೆ, ಅದನ್ನು ಉಲ್ಲಂಘಿಸಿ ತಂಡವನ್ನು ಕಳುಹಿಸುವಂತೆ ತಾನು ಕೇಳಿಕೊಳ್ಳಲಾಗುವುದಿಲ್ಲ ಎಂದು ಐಸಿಸಿ ದುಬೈನಲ್ಲಿ ನಡೆಯುತ್ತಿರುವ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸ್ಪಷ್ಟಪಡಿಸಿದೆ.

ಇದರಿಂದ ಚಾಂಪಿಯನ್ಸ್​ ಟ್ರೋಫಿ ಹೈಬ್ರಿಡ್​ ಮಾದರಿಯಲ್ಲಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಇದರನ್ವಯ ಭಾರತ ತಂಡ ಮಾತ್ರ ಟೂರ್ನಿಯ ತನ್ನ ಪಂದ್ಯಗಳನ್ನು ಪಾಕಿಸ್ತಾನದಿಂದ ಹೊರಗೆ ಆಡಲಿದೆ. ಚಾಂಪಿಯನ್ಸ್​ ಟ್ರೋಫಿ ಐಸಿಸಿ ಸಭೆಯ ಅಜೆಂಡಾದಲ್ಲಿ ಇರದಿದ್ದರೂ, ಪಿಸಿಬಿಯ ಹೊಸ ಚೇರ್ಮನ್​ ಮೊಹ್ಸಿನ್​ ನಕ್ವಿ ಟೂರ್ನಿಯಲ್ಲಿ ಆಡುವ ಸಂಬಂಧ ಭಾರತ ಖಚಿತ ಭರವಸೆ ನೀಡಬೇಕೆಂಬ ಹೇಳಿಕೆಯ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.

ಇದೇ ವೇಳೆ ಬಿಸಿಸಿಐ, ಟೂರ್ನಿಯ ಸನಿಹದಲ್ಲಿರುವಾಗ ಇದರ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದೆ. ಇತ್ತೀಚೆಗೆ ಭಾರತದ ಡೇವಿಸ್​ ಕಪ್​ ತಂಡ ಪಾಕಿಸ್ತಾನಕ್ಕೆ ಹೋಗಿ ಆಡಿತ್ತು. ಆದರೆ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಜಸ್​ಪ್ರೀತ್​ ಬುಮ್ರಾರಂಥ ಸ್ಟಾರ್​ ಕ್ರಿಕೆಟಿಗರನ್ನು ಒಳಗೊಂಡ ತಂಡವನ್ನು, ಭದ್ರತಾ ಕಳವಳ ಹೊಂದಿರುವ ದೇಶಕ್ಕೆ ಕಳುಹಿಸುವುದು ಅತ್ಯಂತ ಅಪಾಯಕಾರಿ ಎನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net