ಗಂಭೀರ್​ಗೆ ಆತನನ್ನು ಕಂಡರೆ ತುಂಬಾ ಇಷ್ಟ ಖಂಡಿತ ಆಡುವ 11ರಲ್ಲಿ ಸ್ಥಾನ ಸಿಕ್ಕೇ ಸಿಗುತ್ತೆ: ಅಶ್ವಿನ್​ ಅಚ್ಚರಿ ಹೇಳಿಕೆ! Ravichandran Ashwin

Ravichandran Ashwin
Published on

Ravichandran Ashwin : ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಿನ್ನೆಲೆಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ. ಈ ಐಸಿಸಿ ಟೂರ್ನಮೆಂಟ್‌ನಲ್ಲಿ ಆಡುವ ಅಂತಿಮ ಭಾರತೀಯ ತಂಡದಲ್ಲಿ ವಾಷಿಂಗ್ಟನ್ ಸುಂದರ್ ಖಂಡಿತವಾಗಿಯೂ ಸ್ಥಾನ ಪಡೆಯುತ್ತಾರೆ ಎಂದು ಅಶ್ವಿನ್​ ನಂಬಿದ್ದಾರೆ. ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ ಆಗಿರುವ ವಾಷಿಂಗ್ಟನ್​ ಸುಂದರ್​ನನ್ನು ಕೆಳ ಕ್ರಮಾಂಕದ ಬದಲಿಗೆ ಟಾಪ್ 5 ರಲ್ಲಿ ಬ್ಯಾಟಿಂಗ್‌ಗೆ ಕಳುಹಿಸಬೇಕೆಂದು ಅಶ್ವಿನ್, ಟೀಮ್​ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಸಲಹೆ ನೀಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಪಾಕಿಸ್ತಾನ ಮತ್ತು ಯುಎಇಯಲ್ಲಿ ಆರಂಭವಾಗಲಿದೆ. ಪಾಕಿಸ್ತಾನ ಆತಿಥ್ಯ ವಹಿಸಿದೆ. ಫೆಬ್ರವರಿ 20 ರಿಂದ ಟೀಮ್ ಇಂಡಿಯಾ ತನ್ನ ಬೇಟೆಯನ್ನು ಪ್ರಾರಂಭಿಸಲಿದೆ. ರೋಹಿತ್ ಪಡೆ ಲೀಗ್ ಹಂತದ ಭಾಗವಾಗಿ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಫೆಬ್ರವರಿ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಆಡಲಿದೆ. ಇದಾದ ನಂತರ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಟೀಮ್ ಇಂಡಿಯಾ ಆಡುವ ಎಲ್ಲ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.

ಚಾಂಪಿಯನ್ಸ್​ ಟ್ರೋಫಿಗೆ ಈಗಾಗಲೇ ಭಾರತ ತಂಡ ಘೋಷಣೆ ಆಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಘೋಷಿಸಿದ ತಂಡದಲ್ಲಿ ಸ್ಪಿನ್ ವಿಭಾಗದಲ್ಲಿ ಮೂವರು ಆಲ್‌ರೌಂಡರ್‌ಗಳು ಮತ್ತು ಒಬ್ಬ ಅನುಭವಿ ಬೌಲರ್ ಅನ್ನು ಹೊಂದಿದೆ. ಆ ನಾಲ್ವರು ಯಾರೆಂದರೆ, ರವೀಂದ್ರ ಜಡೇಜಾ (ಅನುಭವಿ), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್.

ಈ ನಾಲ್ವರಲ್ಲಿ ಕುಲದೀಪ್​ ಅವರು ಎಡಗೈ ಮಣಿಕಟ್ಟಿನ ಸ್ಪಿನ್ನರ್ ಆಗಿದ್ದರೆ, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಕೂಡ ಎಡಗೈ ಬೌಲರ್‌ಗಳು. ಆದಾಗ್ಯೂ, ವಾಷಿಂಗ್ಟನ್ ಸುಂದರ್ ಮಾತ್ರ ಬಲಗೈ ಸ್ಪಿನ್ನರ್. ಅಲ್ಲದೆ, ಅವರು ಆಫ್-ಸ್ಪಿನ್ನರ್. ಈ ವಿಶೇಷತೆಯಿಂದಾಗಿ ಚಾಂಪಿಯನ್ಸ್ ಟ್ರೋಫಿಯ ಅಂತಿಮ ತಂಡದಲ್ಲಿ ಸ್ಥಾನ ಸಿಗುತ್ತದೆ ಎಂದು ಸ್ಪಿನ್ ದಂತಕಥೆ ರವಿಚಂದ್ರನ್ ಅಶ್ವಿನ್ ನಂಬಿದ್ದಾರೆ.

ಇದಲ್ಲದೆ, ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ವಾಷಿಂಗ್ಟನ್​ ಸುಂದರ್​ನನ್ನು ತುಂಬಾ ಇಷ್ಟಪಡುತ್ತಾರೆ. ಇದು ಸುಂದರ್​ಗೆ ಪ್ಲಸ್ ಪಾಯಿಂಟ್ ಕೂಡ ಆಗುತ್ತದೆ ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಶ್ವಿನ್​ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಲ-ಎಡ ಸಂಯೋಜನೆಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿವೆ ಎಂದರು.

ಗಂಭೀರ್ ಅವರು ಸುಂದರ್​ನನ್ನು ತುಂಬಾ ಇಷ್ಟಪಡುತ್ತಾರೆ. ಆದರೆ, ನಮ್ಮಲ್ಲಿ ಹೆಚ್ಚಿನ ಆಫ್-ಸ್ಪಿನ್ನರ್‌ಗಳು ಇಲ್ಲ. ನಮ್ಮಲ್ಲಿ ಹೆಚ್ಚಿನ ಎಡಗೈ ಸ್ಪಿನ್ನರ್‌ಗಳಿದ್ದಾರೆ. ವಾಷಿಂಗ್ಟನ್ ಸುಂದರ್ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಎಂಟನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ. ಅದಕ್ಕೆ ಎರಡು ಕಾರಣಗಳಿವೆ. ನನಗೆ ತಿಳಿದ ಮಟ್ಟಿಗೆ, ಗಂಭೀರ್, ಸುಂದರ್​ನನ್ನು ತುಂಬಾ ಇಷ್ಟಪಡುತ್ತಾರೆ. ಸುಂದರ್​ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸುವುದರ ಜೊತೆಗೆ, ಖಂಡಿತವಾಗಿಯೂ ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಅಲ್ಲದೆ, ಸುಂದರ್​ ಒಬ್ಬ ಆಫ್-ಸ್ಪಿನ್ನರ್ ಎಂಬ ಅಂಶವೂ ಇದರೊಂದಿಗೆ ಬರುತ್ತದೆ. ಆದಾಗ್ಯೂ, ಅವರು ಎಂಟನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದರೆ, ತಂಡದ ಸಮತೋಲನ ತಪ್ಪಬಹುದು. ಹೀಗಾಗಿ ಸುಂದರ್​ ಅವರನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಮುಂದಕ್ಕೆ ಕಳುಹಿಸಬೇಕು. ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬಲ್ಲ ಮತ್ತು ನಾಲ್ಕು ಅಥವಾ ಐದನೇ ಸ್ಥಾನದಲ್ಲಿ ಆಡಬಲ್ಲ ಆಲ್‌ರೌಂಡರ್ ತಂಡಕ್ಕೆ ಇದ್ದರೆ ತುಂಬಾ ಉಪಯುಕ್ತವಾಗಿರುತ್ತದೆ. ಹೀಗಾಗಿ ಸುಂದರ್​ ಅವರು ಟಾಪ್ 5ರಲ್ಲಿದ್ದರೆ ತಂಡಕ್ಕೆ ಇನ್ನೂ ಉತ್ತಮವಾಗಿರುತ್ತದೆ ಎಂದು ಅಶ್ವಿನ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಅಂದಹಾಗೆ ಅಶ್ವಿನ್ ಅವರಂತೆಯೇ ಸುಂದರ್​ ಕೂಡ ತಮಿಳುನಾಡಿನವರು. ಇನ್ನೊಂದು ವಿಶೇಷವೆಂದರೆ ಇಬ್ಬರೂ ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳು. ಅಶ್ವಿನ್ ಮತ್ತು ಸುಂದರ್​ ಇಬ್ಬರೂ ಇತ್ತೀಚೆಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ, ಪರ್ತ್ ಟೆಸ್ಟ್‌ನಲ್ಲಿ ಟೀಮ್​ ಇಂಡಿಯಾ ಮ್ಯಾನೇಜ್‌ಮೆಂಟ್ ಅನುಭವಿ ಅಶ್ವಿನ್ ಬದಲಿಗೆ ಸುಂದರ್​ನನ್ನು ಆಡಿಸಿತು. ಅದಕ್ಕೆ ತಕ್ಕಂತೆ ಸುಂದರ್​ ಉತ್ತಮ ಪ್ರದರ್ಶನ ಸಹ ನೀಡಿದರು. ಮುಂದಿನ ಎರಡು ಟೆಸ್ಟ್‌ಗಳಲ್ಲಿ ಅಶ್ವಿನ್​ಗೆ ಅವಕಾಶ ಸಿಗಲಿಲ್ಲ. ಈ ಸಂದರ್ಭದಲ್ಲಿ, ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಡ್ರಾ ಆದ ನಂತರ, ಅಶ್ವಿನ್​ ಒಂದು ಸಂವೇದನಾಶೀಲ ಘೋಷಣೆ ಮಾಡಿದರು. ಅಂತಾರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು.

ಬಲಗೈ ಆಫ್-ಬ್ರೇಕ್ ಸ್ಪಿನ್ನರ್ ಮತ್ತು ಎಡಗೈ ಬ್ಯಾಟ್ಸ್‌ಮನ್ ಆಗಿರುವ ವಾಷಿಂಗ್ಟನ್ ಸುಂದರ್, ಇದುವರೆಗೆ ಟೀಮ್ ಇಂಡಿಯಾ ಪರ 9 ಟೆಸ್ಟ್, 22 ಏಕದಿನ ಮತ್ತು 52 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಆಯಾ ಸ್ವರೂಪಗಳಲ್ಲಿ 468, 315 ಮತ್ತು 161 ರನ್ ಗಳಿಸಿದ್ದಾರೆ ಮತ್ತು 25, 23 ಮತ್ತು 47 ವಿಕೆಟ್‌ಗಳನ್ನು ಪಡೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net