ಋತುರಾಜ್ ಗಾಯಕ್ವಾಡ್ ಮತ್ತೆ ಪಾಸಿಟಿವ್, ಸೂಪರ್‌ಕಿಂಗ್ಸ್‌ಗೆ ಮುಂದುವರಿದ ತಲೆನೋವು

Ruturaj-Gaikwad
Published on

ದುಬೈ: ಚೆನ್ನೈ ಸೂಪರ್‌ಕಿಂಗ್ಸ್ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಕರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿಯೇ ಮುಂದುವರಿದಿದ್ದು, ಅವರ ಕ್ವಾರಂಟೈನ್ ಅವಧಿಯೂ ವಿಸ್ತರಿಸಿದೆ. ಇದರಿಂದಾಗಿ ಶನಿವಾರ ಅಬುಧಾಬಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ಉದ್ಘಾಟನಾ ಪಂದ್ಯದಿಂದ ಅವರು ಹೊರಗುಳಿಯುವುದು ಬಹುತೇಕ ಖಚಿತವೆನಿಸಿದೆ.

ಕಳೆದ ತಿಂಗಳು ದುಬೈಗೆ ಕಾಲಿಟ್ಟ ಬಳಿಕ ನಡೆದ ಪರೀಕ್ಷೆಗಳಲ್ಲಿ ಪಾಸಿಟಿವ್ ಆಗಿದ್ದ ಋತುರಾಜ್ ಬಳಿಕ ಕ್ವಾರಂಟೈನ್‌ನಲ್ಲಿಯೇ ಇದ್ದಾರೆ. ಋತುರಾಜ್ ಉತ್ತಮವಾಗಿಯೇ ಚೇತರಿಕೆ ಕಂಡಿದ್ದಾರೆ. ಆದರೆ ಟೂರ್ನಿಯ ಬಯೋ-ಬಬಲ್ ಸೇರಿಕೊಳ್ಳಲು ಅವರಿಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಮುಂದಿನ ಕೆಲ ದಿನಗಳಲ್ಲಿ ಅವರು ಬಯೋ-ಬಬಲ್‌ಗೆ ಮರಳಬಹುದು ಎಂದು ಸಿಎಸ್‌ಕೆ ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದಾರೆ.

ದುಬೈಗೆ ಕಾಲಿಟ್ಟ ಬಳಿಕ ಸಿಎಸ್‌ಕೆ ತಂಡದ ಒಟ್ಟು 13 ಮಂದಿಗೆ ಕರೊನಾ ಪಾಸಿಟಿವ್ ಬಂದಿತ್ತು. ಈ ಪೈಕಿ ವೇಗಿ ದೀಪಕ್ ಚಹರ್ ಸಹಿತ 11 ಮಂದಿ ಈಗಾಗಲೆ ನೆಗೆಟಿವ್ ಆಗಿದ್ದು, ಬಯೋ-ಬಬಲ್ ಸೇರಿಕೊಂಡಿದ್ದಾರೆ.

ಸುರೇಶ್ ರೈನಾ ಟೂರ್ನಿಯಿಂದ ಹಿಂದೆ ಸರಿದ ಬಳಿಕ ಆಡುವ ಬಳಗದಲ್ಲಿ ಅವರ ಸ್ಥಾನವನ್ನು ಋತುರಾಜ್ ಗಾಯಕ್ವಾಡ್ ತುಂಬುವ ನಿರೀಕ್ಷೆ ಇಡಲಾಗಿತ್ತು. ಆದರೆ, ಕರೊನಾ ಪಾಸಿಟಿವ್ ಆಗಿದ್ದರಿಂದ ಋತುರಾಜ್ ಟೂರ್ನಿಗೆ ಇನ್ನೂ ಅಭ್ಯಾಸವನ್ನೇ ಆರಂಭಿಸಲು ಸಾಧ್ಯವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net