ಸುರೇಶ್​ ರೈನಾ ಬಳಿಕ ಸಿಎಸ್​ಕೆ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಕೂಡ ಐಪಿಎಲ್​ನಿಂದ ಹಿಂದೆ ಸರಿಯುವ ಸಾಧ್ಯತೆ

harbajan csk
Published on

ನವದೆಹಲಿ: ತಂಡದ ಸದಸ್ಯರಿಗೆ ಕರೊನಾ ಸೋಂಕು ದೃಢಪಟ್ಟಿರುವುದಲ್ಲದೆ, ಉಪನಾಯಕ ಸುರೇಶ್​ ರೈನಾ ಅವರು ಐಪಿಎಲ್​ 13ನೇ ಆವೃತ್ತಿಯಿಂದ ಹಿಂದೆ ಸರಿದ ಕಾರಣ ತೀವ್ರ ಹಿನ್ನಡೆ ಎದುರಿಸಿರುವ ಚೆನ್ನೈ ಸೂಪರ್​ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗುವ ಸಾಧ್ಯತೆ ಇದೆ. ತಂಡದ ಹಿರಿಯ ಸ್ಪಿನ್ನರ್​ ಹರ್ಭಜನ್​ ಸಿಂಗ್​ ಕೂಡ ಐಪಿಎಲ್​ನಿಂದ ಹೊರಗುಳಿಯುವ ಸಾಧ್ಯತೆ ಕಾಣಿಸಿದೆ.

ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ 40 ವರ್ಷದ ಹರ್ಭಜನ್​ ಸಿಂಗ್​ ಈಗಾಗಲೆ ತಡವಾಗಿ ತಂಡವನ್ನು ಕೂಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಅವರೀಗ ಸಂಪೂರ್ಣ ಟೂರ್ನಿಯಿಂದಲೇ ಹೊರಗುಳಿಯುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

'ಈ ಹಿಂದಿನ ಯೋಜನೆಗಳ ಪ್ರಕಾರ ಹರ್ಭಜನ್​ ಸಿಂಗ್​ ಅವರು ಮಂಗಳವಾರ ತಂಡವನ್ನು ಕೂಡಿಕೊಳ್ಳಬೇಕಾಗಿದೆ. ಆದರೆ ಚೆನ್ನೈ ಸೂಪರ್​ಕಿಂಗ್ಸ್​ ತಂಡದ ಹಾಲಿ ಪರಿಸ್ಥಿತಿಯಿಂದಾಗಿ ಅವರು ಮರುಚಿಂತನೆ ನಡೆಸುತ್ತಿದ್ದಾರೆ. ಅಲ್ಲದೆ ಈ ಬಾರಿ ಟೂರ್ನಿಯ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅವರು ಈ ವರ್ಷದ ಟೂರ್ನಿಯನ್ನೇ ತ್ಯಜಿಸಬಹುದು' ಎಂದು ಹರ್ಭಜನ್​ ಸಿಂಗ್​ ಅವರ ಆಪ್ತ ಮೂಲಗಳು ತಿಳಿಸಿವೆ.

ಸಿಎಸ್​ಕೆ ತಂಡದ ಕರೊನಾ ಪ್ರಕರಣಗಳಿಂದಾಗಿ ಈಗಾಗಲೆ ತಂಡದ ವಿದೇಶಿ ಆಟಗಾರರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಆಸ್ಟ್ರೇಲಿಯಾದ ವೇಗಿ ಜೋಶ್​ ಹ್ಯಾಸಲ್​ವುಡ್​ ಕೂಡ ಚೆನ್ನೈ ತಂಡವನ್ನು ಕೂಡಿಕೊಳ್ಳುವ ಬಗ್ಗೆ ಹಿಂದೇಟು ಹಾಕಿದ್ದು, ಸದ್ಯ ಇಂಗ್ಲೆಂಡ್​ ಪ್ರವಾಸದಲ್ಲಿರುವ ಅವರು ಏಕದಿನ, ಟಿ20 ಸರಣಿಯ ಬಗ್ಗೆ ಮಾತ್ರ ಗಮನಹರಿಸಿದ್ದಾರೆ. ಐಪಿಎಲ್​ ಹತ್ತಿರ ಬಂದಾಗ, ಆಡುವುದೇ-ಬೇಡವೇ ಎಂದು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಸಿಎಸ್​ಕೆ ತಂಡದ ಆಟಗಾರರಾದ ದೀಪಕ್​ ಚಹರ್​ ಮತ್ತು ಋತುರಾಜ್​ ಗಾಯಕ್ವಾಡ್​ ಸಹಿತ ತಂಡದ ಒಟ್ಟು 13 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ತಂಡದ ಕ್ವಾರಂಟೈನ್​ ಅವಧಿಯೂ ಮತ್ತೆ 7 ದಿನಗಳಿಗೆ ವಿಸ್ತರಿಸಿದೆ. ಇದರಿಂದಾಗಿ, ಟೂರ್ನಿಯ ಇತರೆಲ್ಲ ತಂಡಗಳು ಈಗಾಗಲೆ ಅಭ್ಯಾಸ ಆರಂಭಿಸಿದ್ದರೂ, ಸಿಎಸ್​ಕೆ ತಂಡ ಮಾತ್ರ ಇನ್ನೂ ಕ್ವಾರಂಟೈನ್​ನಲ್ಲೇ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net