

ನವದೆಹಲಿ: 2025ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಐಪಿಎಲ್ 18ನೇ ಆವೃತ್ತಿಗೆ ಇಂದಿನಿಂದಲೇ ಭರ್ಜರಿ ತಯಾರಿಗಳು ಶುರುವಾಗಿದ್ದು, ಈಗಾಗಲೇ ರಿಟೆನ್ಶನ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಯಾವ ನಾಲ್ಕು ಆಟಗಾರರನ್ನು ತಮ್ಮ ತಂಡದಲ್ಲಿ ಉಳಿಸಿಕೊಳ್ಳಲು ಆಯಾ ಫ್ರಾಂಚೈಸಿ ನಿರ್ಧರಿಸಿದೆ ಎಂಬುದನ್ನು ಅ.31ರಂದು ಐಪಿಎಲ್ ಮಂಡಳಿಗೆ ತಿಳಿಸಬೇಕಿತ್ತು. ಅದರಂತೆಯೇ ಉಳಿಸಿಕೊಳ್ಳುವ ಪ್ರಕ್ರಿಯೆ ಸಂಪೂರ್ಣವಾಗಿ ಅಂತ್ಯಗೊಂಡಿದೆ. ಈ ಪಟ್ಟಿಯಲ್ಲಿ ಶಾಕಿಂಗ್ ಹೆಸರುಗಳು ಕೇಳಿಬಂದಿದ್ದೇ ಆದರೂ ಐದು ತಂಡದ ಐದು ಕ್ಯಾಪ್ಟನ್ಗಳು ಸದ್ಯ ಹರಾಜಿನತ್ತ (IPL Auction) ಮುಖ ಮಾಡಿರುವುದು ಕ್ರಿಕೆಟ್ ಪ್ರಿಯರಲ್ಲಿ ಭಾರೀ ಅಚ್ಚರಿ ತಂದಿದೆ. ಆ ಪಟ್ಟಿಯಲ್ಲಿ ತಮ್ಮ ನೆಚ್ಚಿನ ಆಟಗಾರರೇ ಇರುವುದು ಕೆಲವರ ಬೇಸರಕ್ಕೂ ಕಾರಣವಾಗಿದೆ (Target Process).
ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಬಿದ್ದ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್, ಇದೀಗ ನವೆಂಬರ್ 24-25ರಂದು ನಡೆಯಲಿರುವ ಹರಾಜಿನತ್ತ ಮುಖ ಮಾಡಲಿದ್ದಾರೆ. ಈ ಇಬ್ಬರು ಸ್ಟಾರ್ ಪ್ಲೇಯರ್ಸ್ಗಳ ಬಲವನ್ನು ಅರಿತಿರುವ ಫ್ರಾಂಚೈಸಿಗಳು, ತಮ್ಮ ತಂಡಕ್ಕೆ ಕರೆದುಕೊಂಡರೆ ಏನು ಲಾಭ ಎಂಬ ಲೆಕ್ಕಾಚಾರಗಳನ್ನು ಹಾಕುವಲ್ಲಿ ಸದ್ಯ ಸಖತ್ ಬಿಜಿಯಾಗಿದೆ. ಒಂದೆಡೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಬಲಿಷ್ಠ ತಂಡ ಎಂದು ಗುರುತಿಸಿಕೊಂಡಿರುವ ಐದು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಪಡೆಗೆ ಇದೀಗ ಮಹೇಂದ್ರ ಸಿಂಗ್ ಧೋನಿ ಅವರ ಆಗಮನ ಆನೆಬಲ ನೀಡಿದಂತಾಗಿದೆ. ಇದರ ಜತೆಗೆ ಉತ್ತಮ ಸ್ಟಾರ್ ಆಟಗಾರರನ್ನು ಆಕ್ಷನ್ನಲ್ಲಿ ಖರೀದಿಸುವ ಮುಖೇನ ಆರನೇ ಬಾರಿಗೆ ಚಾಂಪಿಯನ್ಸ್ ಆಗಿ ಮಿಂಚಲು ಫ್ರಾಂಚೈಸಿ ಎದುರುನೋಡುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರುವ ಮೊದಲು ಸಿಎಸ್ಕೆ ಪರ ಆಡಿದ್ದ ಫಾಫ್, ಅತ್ಯುತ್ತಮ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಪ್ರಿಯರ ಗಮನಸೆಳೆದಿದ್ದರು. ಇದು ಚೆನ್ನೈ ಪಡೆಯ ಬ್ಯಾಟಿಂಗ್ ಬಲವನ್ನು ಮತ್ತಷ್ಟು ಹೆಚ್ಚಿಸಿತ್ತು. ಫಾಫ್ ಡು ಪ್ಲೆಸಿಸ್ ಅವರ ಆರಂಭಿಕ ಜೋಡಿ, ಪ್ರತಿ ಪಂದ್ಯದಲ್ಲಿಯೂ ಉತ್ತಮ ಆರಂಭ ಹಾಗೂ ಜತೆಯಾಟ ನೀಡುತ್ತಿತ್ತು. ಇದಕ್ಕೂ ಮೀರಿ, ಫಾಫ್ಗೆ ಸಿಎಸ್ಕೆ ಜತೆಗಿನ ಬಾಂಧವ್ಯ ಇಂದಿಗೂ ಗಟ್ಟಿಯಾಗಿದೆ. ಈ ಎಲ್ಲಾ ವಿಷಯಗಳನ್ನು ಗಮನಿಸಿ ನೋಡುವುದಾದರೆ, ಡು ಪ್ಲೆಸಿಸ್ರನ್ನು ಮತ್ತೊಮ್ಮೆ ತಂಡಕ್ಕೆ ಕರೆದುಕೊಳ್ಳುವ ಪ್ಲ್ಯಾನ್ನಲ್ಲಿ ಸಿಎಸ್ಕೆ ಸಜ್ಜಾಗಿದೆ ಎಂದು ವರದಿಯೊಂದು ಉಲ್ಲೇಖಿಸಿದೆ. ಇದರೊಂದಿಗೆ ಆಟದ ದಿಕ್ಕನ್ನು ಬದಲಾಯಿಸಲು ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ರನ್ನು ಸಹ ಖರೀದಿಸುವ ದೊಡ್ಡ ಗುರಿಯನ್ನು ಫ್ರಾಂಚೈಸಿ ಹೊಂದಿದೆ ಎನ್ನಲಾಗಿದೆ.
ಆಲ್ರೌಂಡರ್ ಹಾಗೂ ಯುವ ಆಟಗಾರರನ್ನೇ ಹೆಚ್ಚು ಟಾರ್ಗೆಟ್ ಮಾಡುವ ಚೆನ್ನೈ ಸೂಪರ್ ಕಿಂಗ್ಸ್, ಅವರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುವುದಕ್ಕಿಂತ, ಅದ್ಭುತ ಆಟವನ್ನು ಹೊರತರುವಂತೆ ಮಾಡುವಲ್ಲಿ ಎತ್ತಿದ ಕೈ. ಹೀಗಿರುವಾಗ ಒಂದೆಡೆ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ರನ್ನು ಖರೀದಿಸುವುದರಿಂದ ಸಿಎಸ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಮತ್ತಷ್ಟು ಗಟ್ಟಿಯಾಗಲಿದೆ. ಅಂದುಕೊಂಡಂತೆ ಈ ಇಬ್ಬರು ಆಟಗಾರರು ಏನಾದರೂ ಹರಾಜಿನಲ್ಲಿ ಸಿಎಸ್ಕೆ ಪಾಲಾದರೆ, ಖಂಡಿತ ಆಟದ ಗತ್ತು, ಗಮ್ಮತ್ತು ಮತ್ತಷ್ಟು ರೋಚಕವಾಗಿರಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ,(ಏಜೆನ್ಸೀಸ್).