

CSK: ಮಾ.22ರಿಂದ ಆರಂಭಗೊಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ಐದು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಸೋಲಿನ ನೆರಳಿನಲ್ಲಿ ಸಾಗುತ್ತಿದೆ. ಆಡಿರುವ 8 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಜಯ ಸಾಧಿಸಿರುವ ಸಿಎಸ್ಕೆ, 6 ಮ್ಯಾಚ್ನಲ್ಲಿ ಹೀನಾಯ ಸೋಲು ಅನುಭವಿಸಿದೆ. ಇದು ತಂಡದಲ್ಲಿ ಗೆಲುವಿನ ವಿಶ್ವಾಸವನ್ನೇ ದೂರ ಸರಿಸಿದೆ.
ಕಳೆದ ವರ್ಷಗಳಲ್ಲಿ ಚಾಂಪಿಯನ್ಸ್ ಆಗಿ ಮಿಂಚಿರುವ ಚೆನ್ನೈ ಪಡೆ, ಹಲವು ಬಾರಿ ಪ್ಲೇಆಫ್ಗೆ ಎಂಟ್ರಿಕೊಟ್ಟಿದೆ. ಐಪಿಎಲ್ ಇತಿಹಾಸದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಿರುವ ತಂಡ ಇದೇ ಮೊದಲ ಬಾರಿಗೆ ಅತ್ಯಂತ ಕಳಪೆ ಪ್ರದರ್ಶನದ ಮೂಲಕ ಅಂಕಪಟ್ಟಿಯಲ್ಲಿ ಕೊನೆ ಸ್ಥಾನವನ್ನು ಅಲಂಕರಿಸಿದೆ. ಈ ಸಂಗತಿ ಫ್ರಾಂಚೈಸಿಯ ಅಭಿಮಾನಿಗಳಲ್ಲಿ ಹಾಗೂ ಕ್ರಿಕೆಟ್ ಪ್ರಿಯರಿಗೆ ಭಾರೀ ಆಶ್ಚರ್ಯವನ್ನೇ ತಂದೊಡ್ಡಿದೆ. ಧೋನಿ ನಾಯಕತ್ವದಲ್ಲಿಯೂ ತಂಡ ಗೆಲುವಿಗಾಗಿ ಹೆಣಗಾಡುತ್ತಿರುವುದು ನೋಡುಗರಲ್ಲಿ ಗೊಂದಲ ಮೂಡಿಸಿದೆ.
ಇನ್ನು ಪ್ಲೇಆಫ್ ಕನಸಿನಿಂದ ದೂರ ಉಳಿದಿರುವ ಸಿಎಸ್ಕೆ ಇಂದಿನ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಭಾರೀ ಅಂತರದ ಗೆಲುವು ಸಾಧಿಸಬೇಕಿದೆ. ಈ ಪಂದ್ಯಕ್ಕೂ ಮುನ್ನ ತಂಡದ ಸತತ ಸೋಲಿನ ಬಗ್ಗೆ ಮುಕ್ತವಾಗಿ ಮಾತನಾಡಿರುವ ಕೋಚ್ ಸ್ಟೀಫನ್ ಫ್ಲೆಮಿಂಗ್, "ಮುಂದಿನ ಆರು ಪಂದ್ಯಗಳನ್ನು ನಾವು ಗೆದ್ದೆ ಗೆಲ್ಲುತ್ತೇವೆ. ನನ್ನ ಈ ಮಾತನ್ನು ಕೇಳಿದ ಬಹುತೇಕರು ಖಂಡಿತ ನಗುತ್ತಾರೆ. ಆದರೆ, ನೆನಪಿರಲಿ ಕಳೆದ ಸೀಸನ್ ಆರ್ಸಿಬಿ ಕೂಡ ಇದೇ ಪರಿಸ್ಥಿತಿಯಲ್ಲಿತ್ತು. ಸತತ ಗೆಲುವಿನ ಮೂಲಕ ಪುಟಿದೆದ್ದರು. ಹೀಗಾಗಿ ನಮಗಿನ್ನೂ ಅವಕಾಶವಿದೆ" ಎಂದರು.
"ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ. ಈ ರೀತಿಯ ಸಂದರ್ಭಗಳು ಈ ಹಿಂದೆಯೂ ನಡೆದಿದೆ. ಸಾಕಷ್ಟು ಬಾರಿ ಕಮ್ಬ್ಯಾಕ್ ಮಾಡಿದ್ದೇವೆ. ಮುಂದೆ ಸಾಗುವ ಹಾದಿ ನಮಗೆ ತಿಳಿದಿದೆ. ಮುಂದಿನ ಯಾವೊಂದು ಪಂದ್ಯವನ್ನು ಲಘುವಾಗಿ ಪರಿಗಣಿಸುವುದಿಲ್ಲ. ನಮ್ಮ ತಂಡ 100ಕ್ಕೆ 100ರಷ್ಟು ಉತ್ತಮ ಪ್ರದರ್ಶನ ನೀಡಲಿದೆ" ಎಂದು ಫ್ಲೆಮಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).