ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ತರಾಟೆ; ಸಾವರ್ಕರ್ ವಿರುದ್ಧದ ಹೇಳಿಕೆಗೆ ಸಮನ್ಸ್ ತಡೆ| Rahul gandhi

Rahul Gandhi
Published on

Supreme court | ಹೋರಾಟಗಾರ ವಿ.ಡಿ. ಸಾವರ್ಕರ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ರಾಹುಲ್‌ ಗಾಂಧಿ ವಿರುದ್ಧ ಸುಪ್ರೀಂ ಕೋರ್ಟ್‌ ಅಸಮಾಧಾನ ಹೊರಹಾಕಿದೆ. ಹಾಗೂ ರಾಹುಲ್‌ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ಮೇಲೆ ತಡೆಯಾಜ್ಞೆ ನೀಡಿದೆ.

ಸ್ವಾತಂತ್ರ್ಯ ಹೋರಾಟಗಾರರಿಗೆ ನೀವು ಕೊಡುವ ಬೆಲೆ ಇದೆನಾ ಎಂದು ಕೋರ್ಟ್‌ ಗರಂ ಆಗಿ ಪ್ರಶ್ನಿಸಿದೆ. ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಎಚ್ಚರಿಸಿದ್ದು, ಅಲ್ಲದೇ ಮುಂದಿನ ದಿನಗಳಲ್ಲಿ ಇಂತಹ ವರ್ತನೆ ಮುಂದುವರೆದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೋರ್ಟ್​ ಎಚ್ಚರಿಕೆ ನೀಡಿದೆ.

ಸಾವರ್ಕರ್ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಲಕ್ನೋ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಭವಿಷ್ಯದಲ್ಲಿ ಅವರು ಅಂತಹ ಯಾವುದೇ ಹೇಳಿಕೆಗಳನ್ನು ನೀಡಿದರೆ, ಅವರ ವಿರುದ್ಧ “ಸ್ವಯಂ ಪ್ರೇರಿತ ಮೊಕದ್ದಮೆ” ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಅವರು ಯಾವುದೇ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರ ಪೀಠವು ರಾಹುಲ್ ಗಾಂಧಿ ಪರ ಹಾಜರಾದ ಹಿರಿಯ ವಕೀಲ ಎ.ಎಂ. ಸಿಂಘ್ವಿ ಅವರಿಗೆ ಸೂಚನೆ ನೀಡಿದೆ.

ಮಹಾರಾಷ್ಟ್ರದಲ್ಲಿ ಸಾವರ್ಕರ್ ಅವರನ್ನು ಪೂಜಿಸಲಾಗುತ್ತದೆ ಹಾಗೂ ರಾಹುಲ್ ಗಾಂಧಿ ಅವರು ಒಂದು ಪಕ್ಷದ ರಾಜಕೀಯ ನಾಯಕರಾಗಿರುವುದರಿಂದ ಅಂತಹ ಹೇಳಿಕೆ ನೀಡಬಾರದು ಎಂದು ನ್ಯಾಯಾಲಯವು ವಕೀಲರಿಗೆ ತಿಳಿಸಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಾವರ್ಕರ್ ಬ್ರಿಟಿಷರ ಸೇವಕ ಮತ್ತು ಅವರು ಬ್ರಿಟಿಷರಿಂದ ಪಿಂಚಣಿ ಪಡೆದಿದ್ದರು ಎಂದು ರಾಹುಲ್ ಗಾಂಧಿ ಮಾಡಿದ ಭಾಷಣಕ್ಕಾಗಿ ಸಮನ್ಸ್​ ಜಾರಿ ಮಾಡಲಾಗಿತ್ತು. ಸಮಾಜದಲ್ಲಿ ದ್ವೇಷವನ್ನು ಹರಡುವ ಉದ್ದೇಶದಿಂದ ರಾಹುಲ್ ಗಾಂಧಿ ಸಾವರ್ಕರ್ ಅವರನ್ನು ಬ್ರಿಟಿಷರ ಸೇವಕ ಎಂದು ಕರೆದಿದ್ದಾರೆ, ಹಾಗೂ ಬ್ರಿಟಿಷರಿಂದ ಪಿಂಚಣಿ ಪಡೆದಿದ್ದಾರೆ ಎಂದು ಹೇಳಿರುವುದಾಗಿ ವಕೀಲ ನೃಪೇಂದ್ರ ಪಾಂಡೆ ದೂರು ದಾಖಲು ಮಾಡಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net