VIDEO: ವೈರಲ್ ಆಗಿದೆ ಪೀಯುಷ್ ಚಾವ್ಲ ಎಸೆತದಲ್ಲಿ ಧೋನಿ ಸಿಡಿಸಿದ ಸಿಕ್ಸರ್...!

ms dhoni
Published on

ದುಬೈ: ಸಹ-ಆಟಗಾರರಿಗೆ ಕರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಡವಾಗಿ ಅಭ್ಯಾಸ ಆರಂಭಿಸಿದೆ. ಹೆಚ್ಚುವರಿ ಒಂದು ವಾರ ಕ್ವಾರಂಟೈನ್ ಅವಧಿ ವಿಸ್ತರಿಸಿಕೊಂಡಿದ್ದ ಸಿಎಸ್‌ಕೆ ಆಟಗಾರರು ಶುಕ್ರವಾರದಿಂದ ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ಕೈಗೊಂಡಿದ್ದಾರೆ. ಆಪ್ತ ಮಿತ್ರ ಸುರೇಶ್ ರೈನಾ, ಅನುಭವಿ ಹರ್ಭಜನ್ ಸಿಂಗ್ ಅನುಪಸ್ಥಿತಿ ನಡುವೆಯೂ ಧೋನಿ ಮಾತ್ರ ಎಂದಿನಂತೆ ಕೂಲ್ ಆಗಿದ್ದಾರೆ. ಆಭ್ಯಾಸ ಆರಂಭಿಸಿದ ಮೊದಲ ದಿನವೇ ಧೋನಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಸ್ಪಿನ್ನರ್ ಪೀಯುಷ್ ಚಾವ್ಲ ಎಸೆತವನ್ನು ಸಿಕ್ಸರ್ ಸಿಡಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ ಧೋನಿ, ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ, ಪೀಯುಷ್ ಚಾವ್ಲ ಸೇರಿದಂತೆ ಇತರ ಸ್ಪಿನ್ನರ್‌ಗಳ ಎಸೆತವನ್ನು ಎದುರಿಸಿದರು. ಮೊದಲ ದಿನವೇ ಸ್ಪಿನ್ ಬೌಲರ್‌ಗಳ ಎಸೆತಗಳನ್ನು ಹೆಚ್ಚಾಗಿ ಎದುರಿಸಿದರು. ಇದಕ್ಕೂ ಮೊದಲು ಶುಕ್ರವಾರ ಬೆಳಗ್ಗೆ ಆಲ್ರೌಂಡರ್ ಶೇನ್ ವ್ಯಾಟ್ಸನ್ ಜತೆಗೂಡಿ ಉಪಹಾರ ಸೇವಿಸಿದ್ದರು. 2019ರ ಏಕದಿನ ವಿಶ್ವಕಪ್ ಬಳಿಕ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದೀಗ 14 ತಿಂಗಳ ಬಳಿಕ ಮೈದಾನಕ್ಕಿಳಿಯಲು ಧೋನಿ ಸಜ್ಜಾಗಿದ್ದಾರೆ.

ತಂಡದ ಉಪ-ನಾಯಕನಾಗಿದ್ದ ಸುರೇಶ್ ರೈನಾ ಅನುಪಸ್ಥಿತಿ ಈ ಬಾರಿ ತಂಡವನ್ನು ಕಾಡುತ್ತಿದೆ. ವೈಯಕ್ತಿಕ ಕಾರಣ ನೀಡಿ ಸುರೇಶ್ ರೈನಾ ಕ್ವಾರಂಟೈನ್ ಅವಧಿಯಲ್ಲಿಯೇ ತವರಿಗೆ ವಾಪಸಾದರೆ, ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ವೈಯಕ್ತಿಕ ಕಾರಣದಿಂದ ದುಬೈಗೆ ಪ್ರಯಾಣ ಬೆಳಸಲಿಲ್ಲ. ಸೆ.19 ರಂದು ನಡೆಯಲಿರುವ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಎದುರಾಗುವ ಸಾಧ್ಯತೆಗಳಿವೆ. ಭಾನುವಾರ 13ನೇ ಐಪಿಎಲ್‌ನ ಪೂರ್ಣ ಪ್ರಮಾಣದ ವೇಳಾಪಟ್ಟಿ ಬಿಡುಗಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net