

ಬೆಂಗಳೂರು: ಕ್ರಿಕೆಟಿಗರು ಟೀಮ್ ಇಂಡಿಯಾ ಮತ್ತು ವಿವಿಧ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡುವಾಗ ಪ್ರತಿ ಪಂದ್ಯಕ್ಕೆ ಇಂತಿಷ್ಟು ಎಂಬಂತೆ ಸಂಭಾವನೆ ಪಡೆಯುವಂತೆ ಇನ್ನು ಮುಂದೆ ಐಪಿಎಲ್ನಲ್ಲೂ ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ. ಆಟಗಾರರು ವಿವಿಧ ತಂಡಗಳ ಪರ ಪಡೆಯುವ ಒಪ್ಪಂದದ ಮೊತ್ತದ ಜತೆಗೆ ಹೆಚ್ಚುವರಿಯಾಗಿ ಈ ಸಂಭಾವನೆ ದೊರೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಶನಿವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ್ದಾರೆ.
ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ.ನಂತೆ ಸಂಭಾವನೆ ಪಡೆಯುವ ಆಟಗಾರ ಐಪಿಎಲ್ ಆವೃತ್ತಿಯ ಎಲ್ಲ 14 ಲೀಗ್ ಪಂದ್ಯಗಳಲ್ಲಿ ಆಡಿದರೆ 1.05 ಕೋಟಿ ರೂ. ಪಡೆಯಲಿದ್ದಾನೆ. ಈ ಪಂದ್ಯ ಸಂಭಾವನೆ ವಿತರಿಸುವುದಕ್ಕಾಗಿ ಎಲ್ಲ 10 ಫ್ರಾಂಚೈಸಿಗಳಿಗೆ ಬಿಸಿಸಿಐ ತಲಾ 12.60 ಕೋಟಿ ರೂ. ಮೀಸಲಿಡಲಿದೆ ಎಂದು ಜಯ್ ಷಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ನಡೆದ ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಈ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇಂಪ್ಯಾಕ್ಟ್ ಪ್ಲೇಯರ್ ಸಹಿತ ತಂಡವೊಂದು ಪ್ರತಿ ಪಂದ್ಯದ ವೇಳೆ 12 ಆಟಗಾರರ ಸಂಭಾವನೆಗಾಗಿ 90 ಲಕ್ಷ ರೂ. ಮೀಸಲಿಡಬೇಕಾಗುತ್ತದೆ.