ಕುಟುಂಬದವರಿಂದ 150 ದಿನ ದೂರ ಉಳಿಯಲಿದ್ದಾರೆ ಕ್ರಿಕೆಟಿಗರು..!

cricketers wife
Published on

ಮುಂಬೈ: ಕರೊನಾ ವೈರಾಣು ಸೋಂಕಿನ ಭೀತಿಯಿಂದಾಗಿ ಕಳೆದ ನಾಲ್ಕು ತಿಂಗಳಿಂದ ಕ್ರಿಕೆಟ್ ಚಟುವಟಿಕೆಯಿಂದ ಆಟಗಾರರು ದೂರ ಉಳಿದಿದ್ದರು. ಇದೀಗ ಎಲ್ಲವೂ ಅಂದುಕೊಂಡಂತೆ ಆದರೆ, ಯುಎಇಯಲ್ಲಿ ಸೆಪ್ಟೆಂಬರ್ 18ರಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಹೀಗೆ ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಂಡರೆ ರಾಷ್ಟ್ರೀಯ ತಂಡದ ಆಟಗಾರರು 150 ದಿನಗಳ ಕಾಲ ಕುಟುಂಬದಿಂದ ದೂರ ಉಳಿಯಲಿದ್ದಾರೆ. ಐಪಿಎಲ್ ಹಾಗೂ ಆಸ್ಟ್ರೇಲಿಯಾ ಪ್ರವಾಸಕ್ಕೆ ಪತ್ನಿ ಹಾಗೂ ಗೆಳತಿಯರನ್ನು (ವ್ಯಾಗ್ಸ್) ಕರೆದೊಯ್ಯಲು ಬಿಸಿಸಿಐ ಅನುಮತಿ ನೀಡಬೇಕಿದೆ. ಜತೆಗೆ ಸ್ಥಳೀಯ ಸರ್ಕಾರಗಳ ಕೋವಿಡ್-19 ಶಿಷ್ಟಾಚಾರ ಕೂಡ ಪಾಲಿಸಬೇಕಾಗುತ್ತದೆ.

ಐಪಿಎಲ್‌ಗೂ ಮುನ್ನ ಅಹಮದಾಬಾದ್‌ನಲ್ಲಿ ಆಗಸ್ಟ್ 18 ರಿಂದ ಸೆಪ್ಟೆಂಬರ್ 4ರವರೆಗೆ ಶಿಬಿರ ನಡೆಯಲಿದೆ ಎಂದು ಹೇಳಲಾಗಿದೆ. ಆದರೆ, ಈ ಶಿಬಿರ ಆಯೋಜನೆ ಕುರಿತು ಅಂತಿಮವಾಗಿಲ್ಲ. ಸೆ-19ರಿಂದ ನ.10ರವರೆಗೆ 53 ದಿನ ಐಪಿಎಲ್‌ನಲ್ಲಿ ಪಾಲ್ಗೊಂಡರೆ, ಬಳಿಕ ರಾಷ್ಟ್ರೀಯ ತಂಡದ ಆಟಗಾರರು ಟೆಸ್ಟ್, ಏಕದಿನ ಸರಣಿಯಲ್ಲಿ ಆಡಲು ಯುಎಇಯಿಂದ ನೇರವಾಗಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದಾರೆ.

ಕ್ವಾರಂಟೈನ್ ಅವಧಿ, 3 ಟೆಸ್ಟ್, 3 ಏಕದಿನ ಸರಣಿ ಆಡಲು 68 ದಿನ ಆಸ್ಟ್ರೇಲಿಯಾದಲ್ಲೇ ಭಾರತ ತಂಡ ಉಳಿಯಬೇಕಾಗುತ್ತದೆ. ಇದೇ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತ ವಿರುದ್ಧ ನಿಗದಿಯಾಗಿದ್ದ 3 ಪಂದ್ಯಗಳ ಟಿ20 ಸರಣಿ ಜನವರಿಯಲ್ಲಿ ಮರುನಿಗದಿಯಾದರೆ 150ಕ್ಕೂ ಹೆಚ್ಚು ದಿನಗಳ ಕಾಲ ಆಟಗಾರರು ಕುಟುಂಬದಿಂದ ದೂರ ಉಳಿಯಬೇಕಾಗುತ್ತದೆ. ಕ್ರಿಕೆಟ್ ಇಲ್ಲದೆ, 4 ತಿಂಗಳಿಂದ ಬಳಲಿದ್ದ ಕ್ರಿಕೆಟಿಗರು 5 ತಿಂಗಳ ಕಾಲ ನಿಬಿಡ ವೇಳಾಪಟ್ಟಿಗೆ ಸಜ್ಜಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net