ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕ್ರಿಕೆಟಿಗ ಪೃಥ್ವಿ ಷಾಗೆ ಬಿಗ್​ ರಿಲೀಫ್​ ನೀಡಿದ ಪೊಲೀಸರು

ps web
Published on

ಮುಂಬೈ: ಭೋಜ್​ಪುರಿ ನಟಿ ಸಪ್ನಾ ಗಿಲ್​ ಮಾಡಿದ್ದ ಲೈಂಗಿಕ ಕಿರುಕುಳ ಆರೋಪದ ಪ್ರಕರಣದಲ್ಲಿ ಕ್ರಿಕೆಟಿಗ ಪೃಥ್ವಿ ಷಾಗೆ ಮುಂಬೈ ಪೊಲೀಸರು ಬಹುದೊಡ್ಡ ರಿಲೀಫ್​ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಪೊಲೀಸರು, ಪೃಥ್ವಿ ಷಾ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದೊಂದು ಸುಳ್ಳು ದೂರು ಆಗಿದೆ ಎಂದು ತಿಳಿಸಿದ್ದಾರೆ.

ವರ್ಷಾರಂಭದಲ್ಲಿ ಪೃಥ್ವಿ ಷಾ ಅಂಧೇರಿಯ ಪಬ್​ ಒಂದಕ್ಕೆ ಸ್ನೇಹಿತರ ಜತೆಗೆ ಹೋಗಿದ್ದ ಸಮಯದಲ್ಲಿ ಸಪ್ನಾ ಗಿಲ್​ ಜತೆಗೆ ಕಿತ್ತಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪೃಥ್ವಿ ಷಾ, ಸ್ನೇಹಿತನ ಕಾರಿಗೆ ಸಪ್ನಾ ಗಿಲ್​ ಹಾನಿ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಸಪ್ನಾ ಗಿಲ್​, ಪೃಥ್ವಿ ಷಾ ವಿರುದ್ಧ ಐಪಿಸಿ ಸೆಕ್ಷನ್​ 354 (ಮಹಿಳೆ ಮೇಲೆ ಹಲ್ಲೆ), 509 (ಮಹಿಳೆ ಜತೆ ಅನುಚಿತ ವರ್ತನೆ) ಮತ್ತು 324 (ಮಾರಾಕಾಸ್ತ್ರಗಳಿಂದ ಹಲ್ಲೆ) ಅಡಿಯಲ್ಲಿ ದೂರು ನೀಡಿದ್ದರು. ಪೃಥ್ವಿ ಷಾ ತನ್ನ ಮೈಮುಟ್ಟಿ ಕಿರುಕುಳ ನೀಡಿದ್ದಾರೆ ಮತ್ತು ಬೇಸ್​ಬಾಲ್​ ಬ್ಯಾಟ್​ನಿಂದ ಹಲ್ಲೆ ನಡೆಸಿದ್ದಾರೆ ಎಂದೂ ಗಿಲ್​ ಆರೋಪಿಸಿದ್ದರು. ಈ ಸಂಬಂಧ ತನಿಖಾಧಿಕಾರಿ ಸೋಮವಾರ ಮ್ಯಾಜಿಸ್ಟ್ರೆಟ್​ ಕೋರ್ಟ್​ಗೆ ಹಾಜರಾಗಿ ವರದಿ ಸಲ್ಲಿಸಿದರು.

ಪಬ್​ನಲ್ಲಿರುವ ಸಿಸಿಟಿವಿಗಳ ಚಿತ್ರಣಗಳನ್ನು ಪರಿಶೀಲಿಸಿದ್ದೇವೆ. ಅದರಲ್ಲಿ ಸಪ್ನಾ ಗಿಲ್​ ಮತ್ತು ಆಕೆಯ ಸ್ನೇಹಿತ ಶೋಬಿತ್​ ಠಾಕೂರ್​ ಕುಡಿದು ನರ್ತಿಸುತ್ತಿರುವುದು ಕಾಣಿಸಿದೆ. ಇದೇ ವೇಳೆ ಅಲ್ಲೇ ಇದ್ದ ಪೃಥ್ವಿ ಷಾ ಜತೆ ಮೊಬೈಲ್​ನಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಲು ಶೋಬಿತ್​ ಪ್ರಯತ್ನಿಸಿದ್ದು, ಅದಕ್ಕೆ ಪೃಥ್ವಿ ಷಾ ನಿರಾಕರಿಸಿದ್ದಾರೆ. ಆದರೆ ಅದರಲ್ಲಿ ಸಪ್ನಾ ಗಿಲ್​ಗೆ ಪೃಥ್ವಿ ಷಾ ಅಥವಾ ಅವರ ಸ್ನೇಹಿತರು ಕಿರುಕುಳ ನೀಡಿರುವ ದೃಶ್ಯಗಳಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಆ ಸಮಯದಲ್ಲಿ ಪಬ್​ನಲ್ಲಿ ಹಾಜರಿದ್ದವರ ಹೇಳಿಕೆಗಳನ್ನೂ ಪಡೆದುಕೊಂಡಿದ್ದೇವೆ. ಆದರೆ ಅವರಲ್ಲಿ ಯಾರೂ, ಸಪ್ನಾ ಗಿಲ್​ ಜತೆ ಅನುಚಿತವಾಗಿ ವರ್ತಿಸಿರುವ ಬಗ್ಗೆ ಹೇಳಿಕೆ ನೀಡಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಸಪ್ನಾ ಗಿಲ್​ ಪರ ವಕೀಲ ಅಲಿ ಕಾಸಿಪ್​ ಖಾನ್​, ಟನೆಯ ವೇಳೆ ಸಪ್ನಾ ಗಿಲ್​ ಸ್ನೇಹಿತ ಮೊಬೈಲ್​ನಲ್ಲಿ ಚಿತ್ರೀಕರಿಸಿರುವ ವಿಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ಕೇಳಿದ್ದಾರೆ. ಅಲ್ಲದೆ ಘಟನೆ ನಡೆದ ಸಮಯದಲ್ಲಿನ ಪಬ್​ ಹೊರಗಿನ ಸಿಸಿಟಿವಿಗಳನ್ನೂ ಪರಿಶೀಲಿಸುವಂತೆ ಕೇಳಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ಸೂಚನೆ ನೀಡಿರುವ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ಜೂನ್​ 28ಕ್ಕೆ ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net