149 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಐತಿಹಾಸಿಕ ದಾಖಲೆ ಬರೆದ ಜಿಂಬಾಬ್ವೆ! ಎರಡೂ ಇನ್ನಿಂಗ್ಸ್‌ಗಳಲ್ಲಿ 500ಕ್ಕೂ ಅಧಿಕ ರನ್ | Zimbabwe

Zimbabwe
149 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಐತಿಹಾಸಿಕ ದಾಖಲೆ ಬರೆದ ಜಿಂಬಾಬ್ವೆ! ಎರಡೂ ಇನ್ನಿಂಗ್ಸ್‌ಗಳಲ್ಲಿ 500ಕ್ಕೂ ಅಧಿಕ ರನ್ | Zimbabwe
Published on: 

Zimbabwe: ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆಗಳು ನಿರ್ಮಾಣ ಆಗುತ್ತವೆ ಮತ್ತು ಬ್ರೇಕ್​ ಆಗುತ್ತಿರುತ್ತವೆ. ಕ್ರಿಕೆಟಿಗರು ಮತ್ತು ಆಯಾ ತಂಡಗಳು ಬರೆಯುವ ಒಂದೊಂದು ಅಪರೂಪದ ರೆಕಾರ್ಡ್​ಗಳು ಮುಂದೊಂದು ದಿನ ಮತ್ತೊಬ್ಬರಿಂದ ಅಥವಾ ಮತ್ತೊಂದು ತಂಡದಿಂದ ಪುಡಿ ಪುಡಿಯಾಗಲಿದೆ. ಆದರೆ, ಯಾವಾಗ, ಯಾವ ನಿರ್ದಿಷ್ಟ ಸಮಯಕ್ಕೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇದೆಲ್ಲವನ್ನೂ ಮೀರಿ ಇದೀಗ ಬರೋಬ್ಬರಿ 149 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಯಾರೂ ಮಾಡದ ಸಾಧನೆಯನ್ನು ಜಿಂಬಾಬ್ವೆ ಟೀಮ್​ ಮಾಡಿ ತೋರಿಸಿದೆ.

ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲೂ 500ಕ್ಕೂ ಅಧಿಕ ರನ್ ಗಳಿಸುವ ಮೂಲಕ ಜಿಂಬಾಬ್ವೆ ಈ ಅಪರೂಪದ ಹಾಗೂ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ. ಶಾರ್ಜಾದಲ್ಲಿ ನಡೆದ ಈ ಪಂದ್ಯದಲ್ಲಿ ಮೂರು ಇನ್ನಿಂಗ್ಸ್‌ಗಳು 500 ರನ್‌ಗಳ ಗಡಿ ದಾಟಿದ್ದು, ಬ್ಯಾಟರ್‌ಗಳ ಅಬ್ಬರಕ್ಕೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 504 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಅನುಭವಿ ಬ್ಯಾಟರ್ ಬ್ರೆಂಡನ್ ಟೇಲರ್ 131 ರನ್ ಗಳಿಸಿದರೆ, ನಾಯಕ ಬ್ರಿಯಾನ್ ಬೆನೆಟ್ 128 ರನ್ ಸಿಡಿಸಿದರು. 40 ವರ್ಷ 272 ದಿನಗಳ ವಯಸ್ಸಿನಲ್ಲಿ ಶತಕ ಗಳಿಸಿದ ಟೇಲರ್, ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಹಿರಿಯ ಜಿಂಬಾಬ್ವೆ ಬ್ಯಾಟರ್ ಎಂಬ ದಾಖಲೆಯನ್ನು ಬರೆದಿದ್ದಾರೆ.

ಇದಕ್ಕೆ ಉತ್ತರವಾಗಿ ಅಫ್ಘಾನಿಸ್ತಾನ ತಂಡವೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಗಮನಾರ್ಹ. ಸೆದಿಕುಲ್ಲಾ ಅಟಲ್ 105 ರನ್​, ರಹಮಾನುಲ್ಲಾ ಗುರ್ಬಾಜ್ 113 ಮತ್ತು ನಾಯಕ ರಹಮತ್ ಶಾ 173 ರನ್ ಗಳಿಸಿ ತಂಡದ ಮೊತ್ತವನ್ನು 514ಕ್ಕೆ ಏರಿಸಿದರು. ಈ ಮೂಲಕ ಅಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 10 ರನ್‌ಗಳ ಮುನ್ನಡೆ ಸಾಧಿಸಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಲೆಕ್ಕಾಚಾರ

ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೆ ಬ್ಯಾಟಿಂಗ್ ಆರಂಭಿಸಿದ ಜಿಂಬಾಬ್ವೆ, ಆರಂಭದಲ್ಲಿ 120 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಅನುಭವಿ ಆಲ್‌ರೌಂಡರ್ ಕ್ರೇಗ್ ಎರವಿನ್ ಅದ್ಭುತ ದ್ವಿಶತಕದ ಮೂಲಕ ತಂಡಕ್ಕೆ ಆಸರೆಯಾದರು. 279 ಎಸೆತಗಳಲ್ಲಿ ಅಜೇಯ 206 ರನ್ ಗಳಿಸಿದ ಅವರು, ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ದ್ವಿಶತಕ ದಾಖಲಿಸಿದರು.

41 ವರ್ಷ 82 ದಿನಗಳ ವಯಸ್ಸಿನಲ್ಲಿ ದ್ವಿಶತಕ ಗಳಿಸಿದ ಎರವಿನ್, ಜಿಂಬಾಬ್ವೆ ಪರ ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡರು. ಅಲ್ಲದೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ದ್ವಿಶತಕ ಬಾರಿಸಿದ ಮೂರನೇ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ದಕ್ಷಿಣ ಆಫ್ರಿಕಾದ ಎರಿಕ್ ರೋವನ್ ಮತ್ತು ಇಂಗ್ಲೆಂಡ್‌ನ ಜಾಕ್ ಹಾಬ್ಸ್ ಮಾತ್ರ ಇವರಿಗಿಂತ ಹೆಚ್ಚಿನ ವಯಸ್ಸಿನಲ್ಲಿ ದ್ವಿಶತಕ ದಾಖಲಿಸಿದ್ದಾರೆ.

Also Read
ತುಟಿ ದೊಡ್ಡದಾದಷ್ಟೂ ವರದಕ್ಷಿಣೆ ಹೆಚ್ಚು! ಈ ಬುಡಕಟ್ಟಿನ ಸಂಪ್ರದಾಯದ ಹಿಂದಿರುವ ವಿಚಿತ್ರ ಕಥೆ ಕೇಳಿದ್ರೆ ನಿಮ್ಮ ಹುಬ್ಬೇರುತ್ತೆ | Lip Plate Tradition
Zimbabwe

ಎರವಿನ್‌ಗೆ ಉತ್ತಮ ಸಾಥ್ ನೀಡಿದ ವೆಸ್ಲಿ ಮಧೆವೆರೆ ಕೂಡ ಅಜೇಯ 100 ರನ್ ಗಳಿಸಿದರು. ಆರನೇ ವಿಕೆಟ್‌ಗೆ ಎರವಿನ್ ಮತ್ತು ಮಧೆವೆರೆ ಜತೆಗೂಡಿ 208 ರನ್‌ಗಳ ಅಜೇಯ ಪ್ರದರ್ಶನ ನೀಡಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಜಿಂಬಾಬ್ವೆ ತಂಡದ ಆರನೇ ವಿಕೆಟ್‌ಗೆ ದಾಖಲಾದ ಅತ್ಯಧಿಕ ಜತೆಯಾಟವಾಯಿತು. ಅಂತಿಮವಾಗಿ ಜಿಂಬಾಬ್ವೆ 523 ರನ್‌ಗೆ 5 ವಿಕೆಟ್ ಕಳೆದುಕೊಂಡು ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಎರಡೂ ಇನ್ನಿಂಗ್ಸ್‌ಗಳಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ ಮೊದಲ ತಂಡ ಎಂಬ ಐತಿಹಾಸಿಕ ಸಾಧನೆ ಮಾಡಿತು.

ಇದೀಗ ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯ ನವೆಂಬರ್ 13ರಿಂದ ಶಾರ್ಜಾದಲ್ಲೇ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಬ್ಯಾಟರ್‌ಗಳ ಅಬ್ಬರಕ್ಕೆ ಸಾಕ್ಷಿಯಾದ ಅಭಿಮಾನಿಗಳು, ಮುಂದಿನ ಪಂದ್ಯದಲ್ಲೂ ರೋಚಕ ಕ್ರಿಕೆಟ್ ನಿರೀಕ್ಷೆಯಲ್ಲಿದ್ದಾರೆ ಎಂಬುದರಲ್ಲಿ ಅನುಮಾನವೇ ಬೇಡ,(ಏಜೆನ್ಸೀಸ್).