Vaibhav Sooryavanshi: ನಿನ್ನೆ (ನ.15) ಅಲ್ ಅಮೆರಾತ್ ಕ್ರೀಡಾಂಗಣದಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು 1 ವಿಕೆಟ್ನಿಂದ ಬಗ್ಗುಬಡಿದು, ಕೊನೆಯ ಓವರ್ನಲ್ಲಿ ರೋಚಕ ಗೆಲುವು ಸಾಧಿಸಿದ ಟೀಮ್ ಇಂಡಿಯಾಗೆ ಇದೀಗ ವಿಶ್ವ ಕ್ರಿಕೆಟ್ ಅಭಿಮಾನಿಗಳಿಂದ ಮೆಚ್ಚುಗೆ, ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ಮಧ್ಯೆ, ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಯನ್ನು ಏಕೆ ಆಡಿಸಲಿಲ್ಲ? ಯಾವ ಕಾರಣಕ್ಕೆ ಅವರನ್ನು ಕೈಬಿಡಲಾಯಿತು? ಎಂಬ ಪ್ರಶ್ನೆಗಳು ಸದ್ಯ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗಳಿಗೆ ಕಾರಣವಾಗಿದೆ.
ಕೇವಲ 15ನೇ ವಯಸ್ಸಿನಲ್ಲೇ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿರುವ ಈ ಯುವ ಆಟಗಾರ, 2026ರ ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಏಕೆ ಕಾಣಿಸಿಕೊಳ್ಳಲಿಲ್ಲ. ವಯಸ್ಸಿನ ಅರ್ಹತೆ ಇದ್ದರೂ ತಂಡದಲ್ಲಿ ಸ್ಥಾನ ಸಿಗದಿರುವುದಕ್ಕೆ, ಇದಕ್ಕೆ ಬಿಸಿಸಿಐ ಕಟ್ಟುನಿಟ್ಟಿನ ನಿಯಮ ಏನಾದರೂ ಇತ್ತಾ? ಇದ್ದರೆ, ಆ ನಿಯಮ ಏನು? ವೈಭವ್‌ಗೆ ಮತ್ತೆ ಅಂಡರ್-19 ಏಷ್ಯಾಕಪ್ ಆಡುವ ಅವಕಾಶ ಏಕೆ ಕೊಡಲಿಲ್ಲ ಎಂಬ ಅನೇಕ ಕ್ರಿಕೆಟ್ ಪ್ರೇಮಿಗಳಿಗೆ ಇಲ್ಲಿದೆ ನೋಡಿ ವಿವರವಾದ ಉತ್ತರ.
ಈ ವರ್ಷದ ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ ಪರ ವೈಭವ್ ಆಡದಿರಲು ಒಂದು ಬಲವಾದ ಕಾರಣವಿದೆ. ಮಾರ್ಚ್ 2026ರಲ್ಲಿ 15ನೇ ವರ್ಷಕ್ಕೆ ಕಾಲಿಟ್ಟ ವೈಭವ್, ಟೂರ್ನಿಯಲ್ಲಿ ಆಡಲು ವಯಸ್ಸಿನ ಅರ್ಹತೆ ಹೊಂದಿದ್ದರೂ ತಂಡದಲ್ಲಿ ಕಾಣಿಸಿಕೊಳ್ಳದಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಇದಕ್ಕೆ ಪ್ರಮುಖ ಕಾರಣ ಬಿಸಿಸಿಐ 2016ರಲ್ಲಿ ಜಾರಿಗೆ ತಂದಿರುವ ಅಂಡರ್-19 ವಿಶ್ವಕಪ್‌ಗೆ ಸಂಬಂಧಿಸಿದ ನಿಯಮಾವಳಿಗಳು ಎನ್ನಲಾಗಿದೆ.
ಬಿಸಿಸಿಐ 2016ರಲ್ಲಿ ಕಿರಿಯರ ಕ್ರಿಕೆಟ್‌ನಲ್ಲಿ ವಯಸ್ಸಿಗೆ ಸಂಬಂಧಿಸಿದ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೊಳಿಸಿತು. 2015-16ರ ವಾರ್ಷಿಕ ವರದಿಯ ಪ್ರಕಾರ, ಬಿಸಿಸಿಐನ ದೇಶೀಯ ಕ್ರಿಕೆಟ್ ವ್ಯವಸ್ಥೆಗೆ ನೇರವಾಗಿ ಅಂಡರ್-19 ಹಂತದಲ್ಲಿ ಪ್ರವೇಶಿಸುವ ಆಟಗಾರರು ಗರಿಷ್ಠ ಎರಡು ವರ್ಷಗಳ ಕಾಲ ಮಾತ್ರ ಅದರ ಅಂಡರ್-19 ಟೂರ್ನಿಗಳಲ್ಲಿ ಭಾಗವಹಿಸಬಹುದು ಎಂಬ ನೀತಿ ಇದೆ.
ಇದರೊಂದಿಗೆ, ಆಟಗಾರನಿಗೆ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಒಂದು ಬಾರಿ ಮಾತ್ರ ಅವಕಾಶವಿದೆ ಎಂಬ ನಿರ್ಬಂಧವೂ ಇದೆ. ಹೀಗಾಗಿ, 2026ರ ಅಂಡರ್-19 ವಿಶ್ವಕಪ್‌ನಲ್ಲಿ ಆಡಿರುವ ವೈಭವ್, ವಯಸ್ಸಿನ ಅರ್ಹತೆ ಉಳಿದಿದ್ದರೂ ಮತ್ತೊಂದು ಐಸಿಸಿ ಅಂಡರ್-19 ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಲು ಸಾಧ್ಯವಾಗುವುದಿಲ್ಲ.
ಆದರೆ, ಈ ನಿಯಮವು ಎಲ್ಲ ಅಂಡರ್-19 ಟೂರ್ನಿಗಳಿಗೂ ಅನ್ವಯಿಸುವುದಿಲ್ಲ ಎಂಬುದು ಗಮನಾರ್ಹ. ಇದು ನಿರ್ದಿಷ್ಟವಾಗಿ ಐಸಿಸಿ ಅಂಡರ್-19 ವಿಶ್ವಕಪ್‌ಗೆ ಸಂಬಂಧಿಸಿದೆ. ಹೀಗಾಗಿ, ವೈಭವ್ ಅಂಡರ್-19 ಏಷ್ಯಾಕಪ್ ತಂಡದಲ್ಲಿ ಇಲ್ಲದಿರುವುದಕ್ಕೆ ಈ ನಿಯಮವೊಂದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ.
2026ರ ಫೆಬ್ರವರಿಯಲ್ಲಿ ಜಿಂಬಾಬ್ವೆಯಲ್ಲಿ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ವೈಭವ್ ಅದ್ಭುತ ಇನ್ನಿಂಗ್ಸ್ ತೋರಿದರು. ಏಳು ಇನ್ನಿಂಗ್ಸ್‌ಗಳಲ್ಲಿ 169.49ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 439 ರನ್ ಗಳಿಸಿ, ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು. ಇನ್ನು, ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೇವಲ 80 ಎಸೆತಗಳಲ್ಲಿ 175 ರನ್ ಸಿಡಿಸಿದ್ದು ಅವರ ಆಟದ ಪ್ರಮುಖ ಆಕರ್ಷಣೆಯಾಗಿತ್ತು. ಈ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ 15 ಸಿಕ್ಸರ್‌ಗಳು ಸೇರಿದ್ದವು. ವೈಭವ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 100 ರನ್‌ಗಳ ಜಯ ಸಾಧಿಸಿ, ಆರನೇ ಬಾರಿ ಅಂಡರ್-19 ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿತ್ತು.
ಅಂಡರ್-19 ವಿಶ್ವಕಪ್ ಬಳಿಕ ವೈಭವ್ ಹಿರಿಯರ ಕ್ರಿಕೆಟ್‌ನಲ್ಲೂ ಗಮನ ಸೆಳೆದಿದ್ದಾರೆ. 2026ರ ಜುಲೈ 4ರಂದು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಅಂತಾರಾಷ್ಟ್ರೀಯ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದರು. ಇದರೊಂದಿಗೆ ಭಾರತದ ಪರ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಜತೆಗೆ ಹಳೆಯ ದಾಖಲೆಗಳನ್ನು ಉಡೀಸ್ ಮಾಡಿ ತನ್ನದೇ ಹೊಸ ರೆಕಾರ್ಡ್ ನಿರ್ಮಿಸಿದರು.
ಇದೀಗ ನವೆಂಬರ್ 19ರಿಂದ 29ರವರೆಗೆ ಕತಾರ್‌ನ ದೋಹಾದಲ್ಲಿ ನಡೆಯಲಿರುವ ಎಸಿಸಿ ಮೆನ್ಸ್ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ 2026ರ ಭಾರತ ಎ ತಂಡದಲ್ಲೂ ವೈಭವ್ ಸ್ಥಾನ ಪಡೆದಿದ್ದಾರೆ. ತಿಲಕ್ ವರ್ಮಾ ನಾಯಕತ್ವದ 15 ಸದಸ್ಯರ ತಂಡದಲ್ಲಿ ಅಭಿಷೇಕ್ ಶರ್ಮಾ ಕೂಡ ಇದ್ದಾರೆ. ನವೆಂಬರ್ 22ರಂದು ಭಾರತ ಎ ತಂಡ ಈಗಷ್ಟೇ ಏಷ್ಯಾಕಪ್‌ನಲ್ಲಿ ಸೋತು ಸುಣ್ಣವಾಗಿರುವ ಪಾಕಿಸ್ತಾನ ಎ ವಿರುದ್ಧ ಸೆಣಸಲಿದೆ.
ಇನ್ನೊಂದೆಡೆ, ವೈಭವ್ ಇಲ್ಲದೆಯೇ ಭಾರತ ಅಂಡರ್-19 ತಂಡ 2026ರ ಎಸಿಸಿ ಅಂಡರ್-19 ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದು ಬೀಗಿದೆ. ನವೆಂಬರ್ 14ರಂದು ಒಮಾನ್‌ನ ಅಲ್ ಅಮರತ್‌ನಲ್ಲಿ ನಡೆದ ಫೈನಲ್‌ನಲ್ಲಿ ಪಾಕಿಸ್ತಾನ ಕೊಟ್ಟಿದ್ದ 338 ರನ್‌ಗಳ ಗುರಿಯನ್ನು ಭಾರತ ಕೊನೆಯ ಎಸೆತದಲ್ಲಿ ಬೆನ್ನಟ್ಟಿ, ಒಂದು ವಿಕೆಟ್‌ನ ರೋಚಕ ಜಯ ಸಾಧಿಸಿತು. ಮೊಹಿತ್ ಉಲ್ವಾ ಗೆಲುವಿನ ಬೌಂಡರಿ ಬಾರಿಸುವ ಮೂಲಕ ಭಾರತಕ್ಕೆ ಒಂಬತ್ತನೇ ಅಂಡರ್-19 ಏಷ್ಯಾಕಪ್ ಪ್ರಶಸ್ತಿ ಗೆದ್ದು ಬೀಗಿತು.
ಒಟ್ಟಾರೆ, ಅಂಡರ್-19 ವಿಶ್ವಕಪ್‌ನಲ್ಲಿ ಈಗಾಗಲೇ ಭಾರತವನ್ನು ಪ್ರತಿನಿಧಿಸಿರುವ ವೈಭವ್ ಸೂರ್ಯವಂಶಿಗೆ ಮತ್ತೊಂದು ವಿಶ್ವಕಪ್ ಆಡುವ ಅವಕಾಶ ಇಲ್ಲದಿದ್ದರೂ, ಹಿರಿಯರ ಕ್ರಿಕೆಟ್‌ನಲ್ಲಿ ಅವರ ಪಯಣ ವೇಗವಾಗಿ ಮುಂದುವರಿಯುತ್ತಿದೆ ಮತ್ತು ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುವ ಮೂಲಕ ವಿಶ್ವ ಕ್ರಿಕೆಟ್ ಲೋಕದಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ದಿಗ್ಗಜರ ದಾಖಲೆಗಳನ್ನು ಸರಿಗಟ್ಟುತ್ತಿರುವುದು ನಿಜಕ್ಕೂ ಹುಬ್ಬೇರಿಸುವಂತ ಸಂಗತಿ,(ಏಜೆನ್ಸೀಸ್).