

ಹುತ್ರಿದುರ್ಗ ( ಕುಣಿಗಲ್ ) : ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ( Kunigal News ) ಹುತ್ರಿದುರ್ಗ ಹೋಬಳಿಯ ಚೌಡನಾಯಕನಪಾಳ್ಯ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.
ಕಂಠಪೂರ್ತಿ ಕುಡಿದ ಮತ್ತಿನಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಪಾಪಿ ತಂದೆಯೊಬ್ಬ, ಜಗಳ ಬಿಡಿಸಲು ಅಡ್ಡಬಂದ ತನ್ನದೇ 16 ವರ್ಷದ ಮಗನನ್ನು ಅತ್ಯಂತ ಬರ್ಬರವಾಗಿ ಹತ್ಯೆಗೈದಿದ್ದಾನೆ. ನಂಜೆಗೌಡ ಎಂಬಾತನೇ ಈ ಕೃತ್ಯ ಎಸಗಿದ ಕಟುಕ ತಂದೆಯಾಗಿದ್ದು, ಹದಿನಾರರ ಹರೆಯದ ಅಮಾಯಕ ಬಾಲಕ ಸುನೀಲ್, ತಂದೆಯ ಕ್ರೌರ್ಯಕ್ಕೆ ಬಲಿಯಾಗಿದ್ದಾನೆ. ಹೆತ್ತ ಮಗನನ್ನೇ ಕೊಂದು ವಿಕೃತಿ ಮೆರೆದಿರುವ ಈ ಘಟನೆ ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಆರೋಪಿ ನಂಜೆಗೌಡ ವಿಪರೀತ ಮದ್ಯವ್ಯಸನಿಯಾಗಿದ್ದು, ಪ್ರತಿನಿತ್ಯ ಕುಡಿದು ಬಂದು ಮನೆಯಲ್ಲಿ ಪತ್ನಿ ರಂಜಿತಾಳೊಂದಿಗೆ ಜಗಳವಾಡುವುದನ್ನೇ ಚಾಳಿಯನ್ನಾಗಿಸಿಕೊಂಡಿದ್ದನು. ಈ ಹಿಂದೆಯೂ ಇದೇ ವಿಚಾರವಾಗಿ ಪತ್ನಿ ರಂಜಿತಾಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಈತ, ಪ್ರಕರಣ ದಾಖಲಾಗಿ ಜೈಲು ಸೇರಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದನು. ಆದರೆ, ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ನಂಜೆಗೌಡ, ಭಾನುವಾರ ಬೆಳಗ್ಗೆ ಮತ್ತೆ ಪತ್ನಿಯೊಂದಿಗೆ ಕಾಲು ಕೆರೆದು ಜಗಳ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದ್ದು, ಪತ್ನಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಲು ಮುಂದಾಗಿದ್ದಾನೆ.
ತಾಯಿಯ ಮೇಲೆ ತಂದೆ ನಡೆಸುತ್ತಿದ್ದ ಕ್ರೂರ ಹಲ್ಲೆಯನ್ನು ಕಂಡು ಬೆಚ್ಚಿಬಿದ್ದ ಮಗ ಸುನೀಲ್ (16), ತಕ್ಷಣವೇ ಮಧ್ಯಪ್ರವೇಶಿಸಿ ತಂದೆಯನ್ನು ತಡೆಯಲು ಮತ್ತು ಜಗಳ ಬಿಡಿಸಲು ಮುಂದಾಗಿದ್ದಾನೆ. ಇದರಿಂದ ಮತ್ತಷ್ಟು ಕೆರಳಿದ ನಂಜೆಗೌಡ, ಮಗನ ಮೇಲೆಯೇ ತನ್ನ ಕೋಪವನ್ನು ತಿರುಗಿಸಿದ್ದಾನೆ.
ಆವೇಶದ ಭರದಲ್ಲಿ ಪತ್ನಿ ರಂಜಿತಾಳನ್ನು ಮನೆಯಿಂದ ಹೊರಕ್ಕೆ ತಳ್ಳಿ ಒಳಗಿನಿಂದ ಬಾಗಿಲು ಭದ್ರಪಡಿಸಿಕೊಂಡ ಪಾಪಿ ತಂದೆ, ಮನೆಯಲ್ಲಿದ್ದ ಹರಿತವಾದ 'ಆರೆ'ಯನ್ನು (ಕಬ್ಬಿಣದ ಆಯುಧ) ತೆಗೆದುಕೊಂಡು ಮಗ ಸುನೀಲ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಮಗನ ಆರ್ತನಾದ ಕೇಳಿ ಹೊರಗಿದ್ದ ತಾಯಿ ಹಾಗೂ ಅಕ್ಕಪಕ್ಕದವರು ಬಾಗಿಲು ಬಡಿದು ರಕ್ಷಿಸಲು ಪ್ರಯತ್ನಿಸಿದರೂ, ಒಳಗಿದ್ದ ಕಟುಕ ತಂದೆ ಬಾಲಕನ ಪ್ರಾಣ ಹೋಗುವವರೆಗೂ ಬಿಡದೆ ಬರ್ಬರವಾಗಿ ಕೊಲೆಗೈದಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕುಣಿಗಲ್ ಸಿಪಿಐ ಮಾಧ್ಯನಾಯಕ್ ಹಾಗೂ ಪೊಲೀಸ್ ಸಿಬ್ಬಂದಿ ತಕ್ಷಣವೇ ಚೌಡನಾಯಕನಪಾಳ್ಯ ಗ್ರಾಮಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕ ಸುನೀಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕರುಳಬಳ್ಳಿಯನ್ನೇ ಕತ್ತರಿಸಿ ವಿಕೃತಿ ಮೆರೆದಿದ್ದ ಆರೋಪಿ ನಂಜೆಗೌಡನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕುಡಿತದ ಚಟಕ್ಕೆ ಬಿದ್ದು ಸಂಸಾರವನ್ನೇ ಬೀದಿಗೆ ತಂದ ಈತನ ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.