ನೆದರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಸಿರಾಜ್​ ಜೆರ್ಸಿ ಧರಿಸಿದ್ದೇಕೆ ಅಭಿಷೇಕ್​? ಬಹಿರಂಗವಾಯ್ತು ಕಾರಣ! Abhishek Sharma

ಟೀಮ್​ ಇಂಡಿಯಾದ ಆರಂಭಿಕ ಸ್ಫೋಟಕ ಆಟಗಾರ ಅಭಿಷೇಕ್​ ಶರ್ಮಾ ( Abhishek Sharma )
ಟೀಮ್​ ಇಂಡಿಯಾದ ಆರಂಭಿಕ ಸ್ಫೋಟಕ ಆಟಗಾರ ಅಭಿಷೇಕ್​ ಶರ್ಮಾ ( Abhishek Sharma )
Published on

ಪ್ರಮುಖ ಮುಖ್ಯಾಂಶಗಳು

  • ನಿನ್ನೆ ನೆದರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಒಂದು ಕುತೂಹಲಕಾರಿ ಸಂಗತಿ ನಡೆಯಿತು
  • ಅಭಿಷೇಕ್​ ಶರ್ಮಾ ಅವರು ಮೊಹಮ್ಮದ್​ ಸಿರಾಜ್ ಅವರ ಜೆರ್ಸಿ ಧರಿಸಿ ಬ್ಯಾಟಿಂಗ್​ ಮಾಡಿದರು
  • ಅಷ್ಟಕ್ಕೂ ಅಭಿ, ಸಿರಾಜ್​ ಅವರ ಜರ್ಸಿ ಏಕೆ ಧರಿಸಿದರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ
Abhishek Sharma : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ಓಟ ಮುಂದುವರೆದಿದೆ. ಈ ಟೂರ್ನಿಯಲ್ಲಿ ಭಾರತ ಮತ್ತೊಂದು ಗೆಲುವು ಸಾಧಿಸಿದೆ. ನಿನ್ನೆ (ಫೆ.18) ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ, ನೆದರ್ಲೆಂಡ್​ ತಂಡವನ್ನು 17 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 193 ರನ್ ಗಳಿಸಿತು. 194 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನೆದರ್ಲೆಂಡ್​ ತಂಡ ನಿಗದಿತ ಓವರ್​ಗಳಲ್ಲಿ 176 ರನ್‌ಗಳಿಗೆ 7 ವಿಕೆಟ್​ ಕಳೆದುಕೊಂಡ ಸೋಲನ್ನೊಪ್ಪಿತು.
ಈ ಪಂದ್ಯದ ಆರಂಭದಲ್ಲಿ ಒಂದು ಕುತೂಹಲಕಾರಿ ಸಂಗತಿ ಕೂಡ ನಡೆಯಿತು. ಅದೇನೆಂದರೆ, ಟೀಮ್​ ಇಂಡಿಯಾದ ಆರಂಭಿಕ ಸ್ಫೋಟಕ ಆಟಗಾರ ಅಭಿಷೇಕ್​ ಶರ್ಮಾ, ವೇಗದ ಬೌಲರ್​ ಮೊಹಮ್ಮದ್​ ಸಿರಾಜ್ ಅವರ ಜೆರ್ಸಿ ಧರಿಸಿ, ಬ್ಯಾಟಿಂಗ್​ಗೆ ಇಳಿದರು. ಅಷ್ಟಕ್ಕೂ ಅಭಿ, ಸಿರಾಜ್​ ಅವರ ಜೆರ್ಸಿ ಏಕೆ ಧರಿಸಿದರು? ಅಭಿ ಜೆರ್ಸಿಗೆ ಏನಾಯಿತು? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಈ ಪ್ರಶ್ನೆಗೆ ಉತ್ತರ ತಿಳಿಯಲು ಬಯಸುವುದಾದರೆ ಮುಂದೆ ಓದಿ.
ಟೀಮ್​ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬೆನ್ನಲ್ಲೇ ಅಭಿಷೇಕ್​, ಮೈದಾನಕ್ಕೆ ಇಳಿಯಲು ಸ್ವಲ್ಪ ತಡವಾಯಿತು. ಆರಂಭದಲ್ಲಿ ಅರ್ಷದೀಪ್​ ಸಿಂಗ್ ಅವರ ಜೆರ್ಸಿ ಧರಿಸಿದ್ದರು. ಬಳಿಕ ಅದನ್ನು ಬದಲಾಯಿಸಲು ವಿಳಂಬವಾಯಿತು. ಭಾರತದ ಇನ್ನಿಂಗ್ಸ್‌ಗೂ ಮುನ್ನ, ಅಭಿ ಹೊಸ ಜೆರ್ಸಿಗಾಗಿ ವಿನಂತಿಸಿದ್ದರು. ಆದರೆ, ಡ್ರೆಸ್ಸಿಂಗ್ ರೂಮ್ ಉದ್ದವಾದ ಮೆಟ್ಟಿಲುಗಳ ಮೇಲೆ ಅಂದರೆ, ಎತ್ತರದಲ್ಲಿ ಇದ್ದುದರಿಂದ ಅದನ್ನು ಪಡೆಯಲು ಸಾಕಷ್ಟು ಸಮಯವಿರಲಿಲ್ಲ. ಹೀಗಾಗಿ, ಅಂತಿಮವಾಗಿ ಸಿರಾಜ್ ಅವರ ಜೆರ್ಸಿಯಲ್ಲಿ ಅಭಿ ಬ್ಯಾಟಿಂಗ್ ಮಾಡಿದರು.
ಟೀಮ್​ ಇಂಡಿಯಾ ಬ್ಯಾಟಿಂಗ್ ಶುರು ಮಾಡುತ್ತಿದ್ದಂತೆ​ ಅಭಿಷೇಕ್ ಅವರ ಜೆರ್ಸಿಯನ್ನು ಗಮನಿಸಿದ ವೀಕ್ಷಕ ವಿವರಣೆಗಾರರಾದ ನಾಸರ್ ಹುಸೇನ್ ಮತ್ತು ಸುನಿಲ್ ಗವಾಸ್ಕರ್, ಅಭಿಷೇಕ್​ ತಮ್ಮ ಜೆರ್ಸಿಯನ್ನು ತಂಡದ ಹೋಟೆಲ್‌ನಲ್ಲೇ ಮರೆತುಬಂದಿರುವಂತೆ ತೋರುತ್ತದೆ ಎಂದರು. ಆದರೂ, ಸಾಮಾಜಿಕ ಜಾಲತಾಣದಲ್ಲಿರುವ ಕೆಲ ಕ್ರೀಡಾಭಿಮಾನಿಗಳು, ಅಮೆರಿಕ ಮತ್ತು ಪಾಕಿಸ್ತಾನ ವಿರುದ್ಧ ಸತತವಾಗಿ ಡಕೌಟ್​ ಆದ ನಂತರ 'ಅದೃಷ್ಟ'ಕ್ಕಾಗಿ ಜೆರ್ಸಿ ಬದಲಾಯಿಸಿದ್ದಾರೆ ಎಂದು ನಂಬಿದ್ದಾರೆ. ಆದರೆ, ದುರಾದೃಷ್ಟವಶಾತ್, ನಿನ್ನೆಯ ಪಂದ್ಯದಲ್ಲೂ ಅಭಿ ಡಕೌಟ್​ ಆದರು. ಈ ಮೂಲಕ ಸತತ ಮೂರನೇ ಬಾರಿಗೆ ಶೂನ್ಯಕ್ಕೆ ಔಟಾದರು.

ಹುಸಿಯಾದ ಎಲ್ಲರ ನಿರೀಕ್ಷೆ

ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಅಭಿಷೇಕ್ ಶರ್ಮಾ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಈ ವಿಶ್ವಕಪ್‌ನಲ್ಲಿ ಅಭಿಷೇಕ್ ತಮ್ಮ ಬ್ಯಾಟಿಂಗ್‌ನಿಂದ ಮಿಂಚುತ್ತಾರೆ ಮತ್ತು ಹೊಸ ದಾಖಲೆಗಳನ್ನು ನಿರ್ಮಿಸುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ, ಈ ಎಡಗೈ ಬ್ಯಾಟ್ಸ್‌ಮನ್ ಪ್ರತಿ ಪಂದ್ಯದಲ್ಲೂ ವಿಫಲರಾಗುತ್ತಿದ್ದಾರೆ. ಈ ಸ್ಟಾರ್ ಬ್ಯಾಟ್ಸ್‌ಮನ್ ಈ ವಿಶ್ವಕಪ್‌ನಲ್ಲಿ ತಮ್ಮ ಕಳಪೆ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ನೆದರ್ಲೆಂಡ್​ ವಿರುದ್ಧದ ಪಂದ್ಯದಲ್ಲಿಯೂ ಅಭಿಷೇಕ್ ಶರ್ಮಾ ಮೂರು ಎಸೆತಗಳಲ್ಲಿ ಔಟಾದರು ಮತ್ತು ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಈ ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಅಭಿಷೇಕ್ ಒಂದೇ ಒಂದು ರನ್ ಗಳಿಸಲು ಸಾಧ್ಯವಾಗಿಲ್ಲ. ವಾಸ್ತವವಾಗಿ, ಇದು ಅವರ ಸತತ ಮೂರನೇ ಡಕ್ ಆಗಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಅಭಿಷೇಕ್ ಖಾತೆ ತೆರೆಯಲಿಲ್ಲ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಭಿಷೇಕ್ ಶರ್ಮಾ ಅವರ ಔಟ್ ಸರಣಿ ಆರಂಭವಾಯಿತು. ಯುಎಸ್ಎ ವಿರುದ್ಧದ ಪಂದ್ಯದ ಮೊದಲ ಎಸೆತದಲ್ಲೇ ಶರ್ಮಾ ಔಟ್ ಆದರು. ನಂತರ ಅವರು ಅನಾರೋಗ್ಯಕ್ಕೆ ಒಳಗಾದರು ಮತ್ತು ನಮೀಬಿಯಾ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡರು. ಆದಾಗ್ಯೂ, ಕೊಲಂಬೊದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕೆ ಮರಳಿದ ಅಭಿಷೇಕ್ ಕೇವಲ ನಾಲ್ಕು ಎಸೆತಗಳನ್ನು ಎದುರಿಸಿದ ನಂತರ ಖಾತೆ ತೆರೆಯದೆಯೇ ಔಟಾದರು. ಈಗ, ನೆದರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಅವರು ಮತ್ತೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ ಮತ್ತು ಕೇವಲ ಮೂರು ಎಸೆತಗಳನ್ನು ಎದುರಿಸಿದ ನಂತರ ಡಕ್ ಆಗಿ ಮೈದಾನ ತೊರೆದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net