

INDvsNZ: ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 135 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುವಾಗ ಭಾರತ ತಂಡವು ಅಕ್ಷರ್ ಪಟೇಲ್ರನ್ನು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿತು. ಆದರೆ, ವೇಗಿಗಳಿಗೆ ಸಹಕಾರಿಯಾಗಿದ್ದ ಪಿಚ್ನಲ್ಲಿ ಅಕ್ಷರ್ ರನ್ ಗಳಿಸಲು ಪರದಾಡಿ 17 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಮ್ಯಾಥ್ಯೂ ಫಿಶರ್ ಬೌಲಿಂಗ್ನಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು.
ಈ ಕುರಿತು ಕ್ರಿಕ್ಬಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಟೀಮ್ ಇಂಡಿಯಾ ಮಾಜಿ ಆಟಗಾರ ಅಂಬಟಿ ರಾಯುಡು, ಇಂತಹ ಕಠಿಣ ಸನ್ನಿವೇಶಗಳಲ್ಲಿ ಅಕ್ಷರ್ ಪಟೇಲ್ 5ನೇ ಕ್ರಮಾಂಕಕ್ಕೆ ಸೂಕ್ತವಲ್ಲ, ಅವರು 6 ಅಥವಾ 7ನೇ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಮಾಡಬಲ್ಲರು. ಆದರೆ 5ನೇ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಮತ್ತು ರಾಹುಲ್ ಅವರೊಂದಿಗೆ ಕ್ರಿಸ್ನಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಸ್ಪೆಷಲಿಸ್ಟ್ ಬ್ಯಾಟರ್ ಅಗತ್ಯವಿದೆ. ಆದ್ದರಿಂದ ಅಕ್ಷರ್ ಬದಲಿಗೆ ಇಶಾನ್ ಕಿಶನ್ರನ್ನು 5ನೇ ಕ್ರಮಾಂಕದಲ್ಲಿ ಆಡಿಸುವುದು ಸೂಕ್ತ. ಆದ್ದರಿಂದ ನಮನ್ಧೀರ್ರನ್ನು ತಂಡದಿಂದ ಹೊರಗಿಡಬಹುದು ಎಂದು ಸಲಹೆ ನೀಡಿದರು.
ಅಂಬಟಿ ರಾಯುಡು ಈ ಹೇಳಿಕೆಯನ್ನು ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್ ವಿರೋಧಿಸಿದ್ದು, ಇಶಾನ್ ಕಿಶನ್ರನ್ನು 6 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಡಿಸುವುದು ಟೈಮ್ ವೇಸ್ಟ್ ಎಂದರು.
ಕಾರ್ತಿಕ್ ತಮ್ಮ ಮಾತು ಮುಂದುವರೆಸುತ್ತಾ, ಇಶಾನ್ ಕಿಶನ್ಗೆ ಸೂಕ್ತ ಕ್ರಮಾಂಕ ಎಂದರೆ ಅದು ಟಾಪ್ 3 (ವಿಶೇಷವಾಗಿ 3ನೇ ಕ್ರಮಾಂಕ). ಆದರೆ ಪ್ರಸ್ತುತ ತಂಡದಲ್ಲಿ ವಿರಾಟ್ ಕೊಹ್ಲಿ 3, ಶ್ರೇಯಸ್ ಅಯ್ಯರ್ 4 ಮತ್ತು ಕೆ ಎಲ್ ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಹೀಗಿರುವಾಗ ಕಿಶನ್ರನ್ನು 6ನೇ ಕ್ರಮಾಂಕದಲ್ಲಿ ಆಡಿಸುವುದು ವ್ಯರ್ಥ. ಇದಷ್ಟೆ ಅಲ್ಲದೆ, ನಮನ್ ಧೀರ್ ಬ್ಯಾಟಿಂಗ್ ಟೈಮಿಂಗ್ ಉತ್ತಮವಾಗಿದೆ ಎಂದು ಸಮರ್ಥಿಸಿಕೊಂಡರು.
ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್ರ ಇತ್ತೀಚಿನ ಫಾರ್ಮ್ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಹಾಗೂ 4 ವಿಕೆಟ್ ಪಡೆದು ಉತ್ತಮವಾಗಿ ಆಟವಾಡಿದ್ದ ಅಕ್ಷರ್, ಆ ನಂತರದ ಪಂದ್ಯಗಳಲ್ಲಿ ಕ್ರಮವಾಗಿ 1, 2, ಮತ್ತು 0 ರನ್ಗಳಿಗೆ ಔಟಾಗಿದ್ದು, ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದಾರೆ. ತಂಡವು ಪಂದ್ಯಗಳನ್ನು ಗೆಲ್ಲುತ್ತಿದ್ದರೂ, ಮಧ್ಯಮ ಕ್ರಮಾಂಕದ ಈ ಬ್ಯಾಟಿಂಗ್ ಗೊಂದಲ ಮತ್ತು ಅಕ್ಷರ್ ಫಾರ್ಮ್ ಕುರಿತು ಮಾಜಿ ಆಟಗಾರರ ನಡುವಿನ ಈ ಚರ್ಚೆ ಇದೀಗ ತೀವ್ರ ಕುತೂಹಲ ಮೂಡಿಸಿದೆ(ಏಜೆನ್ಸೀಸ್).