Hardik Pandya Trade: ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಹಾರ್ದಿಕ್ ಪಾಂಡ್ಯ ಅವರ ಟ್ರೇಡಿಂಗ್ ಕುರಿತು ಭಾರಿ ಚರ್ಚೆ ನಡೆಯುತ್ತಿದ್ದು, ಈ ಕುರಿತು ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಮಹತ್ವದ ಹೇಳಿಕೆ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಒತ್ತಡದಿಂದ ಹೊರಬಂದು, ಮುಕ್ತವಾಗಿ ಕ್ರಿಕೆಟ್ ಆನಂದಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ರಾಯುಡು ಸಲಹೆ ನೀಡಿದ್ದಾರೆ.
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ನಲ್ಲೇ ಉಳಿಯಲಿ ಅಥವಾ ಪಂಜಾಬ್ ಕಿಂಗ್ಸ್ಗೆ ಸ್ಥಳಾಂತರಗೊಳ್ಳಲಿ, ಸದ್ಯಕ್ಕೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಬಾರದು ಎಂದು ರಾಯುಡು ಅಭಿಪ್ರಾಯಪಟ್ಟಿದ್ದಾರೆ. ನಾನು ಹಾರ್ದಿಕ್ ಸ್ಥಾನದಲ್ಲಿದ್ದರೆ, ನನ್ನ ಕ್ರಿಕೆಟ್ ಅನ್ನು ಆನಂದಿಸಲು ಸಾಧ್ಯವಾಗುವ ಹಾಗೂ ಉತ್ತಮ ಮಾನಸಿಕ ನೆಮ್ಮದಿ ಸಿಗುವ ತಂಡಕ್ಕೆ ಹೋಗಲು ಬಯಸುತ್ತಿದ್ದೆ. ಹೊಸ ಫ್ರಾಂಚೈಸಿಯ ವಾತಾವರಣ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಂಡ ನಂತರವೇ ನಾಯಕತ್ವದ ಬಗ್ಗೆ ಯೋಚಿಸುವುದು ಸೂಕ್ತ. ಪ್ರಸ್ತುತ ಹಾರ್ದಿಕ್ ಅವರಿಗೆ ಉತ್ತಮ ಕ್ರಿಕೆಟ್ ಆಡುವುದು ಹಾಗೂ ಮೈದಾನದಲ್ಲಿ ಶ್ರೇಷ್ಠ ಪ್ರದರ್ಶನ ನೀಡುವುದು ಬಹಳ ಮುಖ್ಯ ಎಂದು ಅವರು ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಹಾರ್ದಿಕ್ ಪಾಂಡ್ಯ ಮತ್ತು ಭಾರತದ ವೇಗಿ ಅರ್ಷದೀಪ್ ಸಿಂಗ್ ಬದಲಾವಣೆಯ ಕುರಿತು ಮಾತುಕತೆ ಅಂತಿಮ ಹಂತದಲ್ಲಿದೆ ಎನ್ನಲಾಗಿದೆ. ಪಂಜಾಬ್ ಕಿಂಗ್ಸ್ನಲ್ಲಿ ಶ್ರೇಯಸ್ ಅಯ್ಯರ್ ಅವರೇ ನಾಯಕತ್ವ ಮುಂದುವರಿಸುವ ಸಾಧ್ಯತೆಯಿರುವುದರಿಂದ, ಹಾರ್ದಿಕ್ ಅಲ್ಲಿ ನಾಯಕನಾಗಿ ಅಲ್ಲದೆ ಕೇವಲ ಆಟಗಾರನಾಗಿ ಸೇರ್ಪಡೆಯಾಗಲಿದ್ದಾರೆ. ಇದೇ ರೀತಿಯ ಮುಕ್ತ ವಾತಾವರಣ ಹಾರ್ದಿಕ್ಗೆ ಸದ್ಯ ಅಗತ್ಯವಿದೆ ಎನ್ನುವುದು ರಾಯುಡು ಅಭಿಪ್ರಾಯ.
2024ರ ಐಪಿಎಲ್ನಲ್ಲಿ ರೋಹಿತ್ ಶರ್ಮಾ ಅವರಿಂದ ನಾಯಕತ್ವ ವಹಿಸಿಕೊಂಡ ನಂತರ ಮುಂಬೈ ಇಂಡಿಯನ್ಸ್ನಲ್ಲಿ ಹಾರ್ದಿಕ್ ಎದುರಿಸಿದ ಕಠಿಣ ಸವಾಲುಗಳನ್ನು ರಾಯುಡು ನೆನಪಿಸಿಕೊಂಡಿದ್ದಾರೆ. ಮುಂಬೈ ಡ್ರೆಸ್ಸಿಂಗ್ ರೂಮ್ನಲ್ಲಿ ಹಾರ್ದಿಕ್ ತಮಗರಿವಿಲ್ಲದೇ ಏಕಾಂಗಿತನವನ್ನು ಅನುಭವಿಸಿದ್ದರು. ಅಂತಹ ಒತ್ತಡದ ಪರಿಸ್ಥಿತಿಯಲ್ಲಿ ಸ್ವಾಭಾವಿಕವಾಗಿ ಆಡುವುದು ಕಷ್ಟ. ಅವರು ಎಂಐನಲ್ಲೇ ಉಳಿದುಕೊಂಡರೂ ಸಹ, ನಾಯಕತ್ವದ ಜವಾಬ್ದಾರಿ ಇಲ್ಲದೆ ಒಬ್ಬ ಆಟಗಾರನಾಗಿ ಪಂದ್ಯಗಳನ್ನು ಗೆಲ್ಲಿಸಿಕೊಡುವುದರತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಪಂಜಾಬ್ ಕಿಂಗ್ಸ್ ಹೆಡ್ ಕೋಚ್ ರಿಕಿ ಪಾಂಟಿಂಗ್ ಅವರೊಂದಿಗೆ ಹಾರ್ದಿಕ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪಾಂಟಿಂಗ್ ಮಾರ್ಗದರ್ಶನದಲ್ಲಿ ಹಾರ್ದಿಕ್ ತಮ್ಮ ಹಳೆಯ ಫಾರ್ಮ್ ಹಾಗೂ ಆತ್ಮವಿಶ್ವಾಸವನ್ನು ಮರಳಿ ಪಡೆಯಬಹುದು ಎಂಬುದು ರಾಯುಡು ಲೆಕ್ಕಾಚಾರ. ಅದೇ ಸಮಯದಲ್ಲಿ, ಹಾರ್ದಿಕ್ ಅವರಂತಹ ಶ್ರೇಷ್ಠ ಆಲ್ರೌಂಡರ್ನನ್ನು ಕೈಬಿಡಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸುಲಭವಾಗಿ ಒಪ್ಪುತ್ತದೆಯೇ ಎಂಬ ಸಂಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಹಾರ್ದಿಕ್ ಪಾಂಡ್ಯ 2026ರ ಐಪಿಎಲ್ನ ಮೇ 24ರ ಪಂದ್ಯದ ನಂತರ ಗಾಯದ ಸಮಸ್ಯೆಯಿಂದಾಗಿ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಸದ್ಯ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಚೇತರಿಸಿಕೊಳ್ಳುತ್ತಿರುವ ಅವರು, ಭಾರತ ತಂಡಕ್ಕೆ ಕಂಬ್ಯಾಕ್ ಮಾಡುವ ಮುನ್ನ ದೇಶೀಯ ಕ್ರಿಕೆಟ್ ಆಡುವುದು ಕಡ್ಡಾಯ ಎಂದು ನಾಯಕ ಶುಭಮಾನ್ ಗಿಲ್ ಇತ್ತೀಚೆಗೆ ಸ್ಪಷ್ಟಪಡಿಸಿದ್ದರು(ಏಜೆನ್ಸೀಸ್).