ಇಂದು ನನ್ನ ದಿನವೆಂದು ನಂಬಿದ್ದೆ, ಆ ಒಂದು ಬಾಲ್‌ಗಾಗಿ ಕಾಯುತ್ತಿದ್ದೆ: ಜಯದ ಬಳಿಕ ಮೋಹಿತ್ ಉಲ್ವಾ ಮೊದಲ ಪ್ರತಿಕ್ರಿಯೆ! | Mohit Ulva

ಇಂದು ನನ್ನ ದಿನವೆಂದು ನಂಬಿದ್ದೆ, ಆ ಒಂದು ಬಾಲ್‌ಗಾಗಿ ಕಾಯುತ್ತಿದ್ದೆ: ಜಯದ ಬಳಿಕ ಮೋಹಿತ್ ಉಲ್ವಾ ಮೊದಲ ಪ್ರತಿಕ್ರಿಯೆ! | Mohit Ulva
Published on: 

Mohit Ulva: ಒಮಾನ್‌ನ ಮಸ್ಕತ್ ಸಮೀಪದ ಅಲ್ ಅಮೆರಾತ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 1 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಪಾಕಿಸ್ತಾನ ನೀಡಿದ್ದ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಮ್​ ಇಂಡಿಯಾ ಹುಡುಗರು, ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 339 ರನ್ ಗಳಿಸುವ ಮೂಲಕ ದಾಖಲೆಯ ಒಂಬತ್ತನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತು.

ಅಂತಿಮ ಎಸೆತದಲ್ಲಿ ಗೆಲುವಿನ ಬೌಂಡರಿ ಬಾರಿಸಿ ಅಜೇಯ 49 ರನ್ ಗಳಿಸಿದ ಮೋಹಿತ್ ಉಲ್ವಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಬಳಿಕ ಮಾತನಾಡಿದ ಅವರು, ಒತ್ತಡದ ಸನ್ನಿವೇಶದಲ್ಲಿ ತಮ್ಮಲ್ಲಿದ್ದ ಆತ್ಮವಿಶ್ವಾಸ ಮತ್ತು ದೇವರ ಮೇಲಿನ ನಂಬಿಕೆಯೇ ತಂಡವನ್ನು ಗೆಲುವಿನ ದಡ ಸೇರಿಸಲು ನೆರವಾಯಿತು ಎಂದು ಹೇಳಿದ್ದಾರೆ.

ನನ್ನ ದಿನವೆಂದು ನಂಬಿದ್ದೆ, ಬೌಂಡರಿ ಬಾರಿಸುವ ವಿಶ್ವಾಸವಿತ್ತು

ಕೊನೆಯ ಓವರ್‌ನಲ್ಲಿ ಭಾರತದ ಗೆಲುವಿಗೆ 8 ರನ್‌ಗಳ ಅಗತ್ಯವಿದ್ದರೆ, ಪಾಕಿಸ್ತಾನಕ್ಕೆ ಪ್ರಶಸ್ತಿ ಗೆಲ್ಲಲು ಕೇವಲ 1 ವಿಕೆಟ್ ಬೇಕಿತ್ತು. ಅಂತಿಮ ಎಸೆತದಲ್ಲಿ 3 ರನ್ ಬೇಕಿದ್ದಾಗ ಅಹ್ಮದ್ ಹುಸೇನ್ ಎಸೆತವನ್ನು ಬೌಂಡರಿಗಟ್ಟಿದ ಮೋಹಿತ್, ಟೀಮ್​ ಇಂಡಿಯಾ ಪಾಳಯದಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು. ಈ ರೋಚಕ ಕ್ಷಣದ ಕುರಿತು ಪ್ರತಿಕ್ರಿಯಿಸಿದ ಮೋಹಿತ್, ನನ್ನಲ್ಲಿ ನನಗಿದ್ದ ನಂಬಿಕೆ ಮತ್ತು ದೇವರ ಮೇಲಿನ ಭಕ್ತಿಯೇ ನನ್ನನ್ನು ಶಾಂತವಾಗಿರಿಸಿತು. ಈ ಟೂರ್ನಿಯಲ್ಲಿ ನನ್ನ ಪ್ರದರ್ಶನ ಅಷ್ಟೇನೂ ಉತ್ತಮವಾಗಿರಲಿಲ್ಲ. ನಾನೊಬ್ಬ ಬೌಲರ್ ಆಗಿದ್ದರೂ, ನನ್ನಲ್ಲೊಬ್ಬ ಆಲ್‌ರೌಂಡರ್ ಇದ್ದಾನೆ ಎಂಬ ನಂಬಿಕೆಯಿತ್ತು. ಅದನ್ನು ಸಾಬೀತುಪಡಿಸಲು ಸರಿಯಾದ ಅವಕಾಶ ಸಿಕ್ಕಿರಲಿಲ್ಲ. ಆದರೆ ನಾನು ಇದನ್ನು ಮಾಡಬಲ್ಲೆ ಎಂಬ ವಿಶ್ವಾಸ ಇತ್ತು ಎಂದರು.

ಕೊನೆಯ ಓವರ್‌ನಲ್ಲಿ ನಾನು ಆ ಒಂದು ಎಸೆತಕ್ಕಾಗಿ ಕಾಯುತ್ತಿದ್ದೆ. ಬೌಂಡರಿ ಬಾರಿಸಿ ಪಂದ್ಯವನ್ನು ಮುಗಿಸಬಲ್ಲೆ ಎಂಬ ಸ್ಪಷ್ಟ ಅರಿವು ನನಗಿತ್ತು. ಇಂದು ನನ್ನ ದಿನ, ನಾನೇ ಪಂದ್ಯವನ್ನು ಗೆಲ್ಲಿಸಿಕೊಡುತ್ತೇನೆ ಎಂದು ದೇವರ ಮೇಲೆ ಪೂರ್ಣ ಭರವಸೆ ಇಟ್ಟಿದ್ದೆ ಎಂದು ಮೋಹಿತ್ ಭಾವುಕರಾಗಿ ನುಡಿದರು.

Also Read
ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿ ಪಾಕಿಗಳಿಗೆ ಮನೆ ದಾರಿ ತೋರಿಸಿದ ಟೀಮ್ ಇಂಡಿಯಾ ಆಟಗಾರರು!..ವಿಡಿಯೋ ವೈರಲ್ |IND Vs PAK U19 Asia Cup
ಇಂದು ನನ್ನ ದಿನವೆಂದು ನಂಬಿದ್ದೆ, ಆ ಒಂದು ಬಾಲ್‌ಗಾಗಿ ಕಾಯುತ್ತಿದ್ದೆ: ಜಯದ ಬಳಿಕ ಮೋಹಿತ್ ಉಲ್ವಾ ಮೊದಲ ಪ್ರತಿಕ್ರಿಯೆ! | Mohit Ulva

ಮನಲ್ ಚೌಹಾಣ್ ಮತ್ತು ವೆಂಕಟ ಬೆಂಬಲಕ್ಕೆ ಶ್ಲಾಘನೆ

ಭಾರತ 254 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದ್ದಾಗ, 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಮೋಹಿತ್ ಉಲ್ವಾ ಅವರಿಗೆ ಮನಲ್ ಚೌಹಾಣ್ (32 ಎಸೆತಗಳಲ್ಲಿ 47 ರನ್) ಮತ್ತು ಕೊನೆಯ ವಿಕೆಟ್‌ಗೆ ಚಿಗುರುಪಾಟಿ ವೆಂಕಟ (ಅಜೇಯ 11 ರನ್) ಉತ್ತಮ ಸಾಥ್ ನೀಡಿದರು. 47ನೇ ಓವರ್‌ನಲ್ಲಿ ಔಟಾಗುವ ಮುನ್ನ ಮನಲ್ ಚೌಹಾಣ್ ಅವರು ಮೋಹಿತ್ ಜೊತೆಗೂಡಿ 57 ರನ್‌ಗಳ ನಿರ್ಣಾಯಕ ಜೊತೆಯಾಟವಾಡಿದರು.

ನನಗಿಂತ ಮುಂಚಿತವಾಗಿ ಕ್ರೀಸ್‌ಗೆ ಬಂದು ಮನಲ್ ಚೌಹಾಣ್ ನಿರ್ಮಿಸಿದ ವಾತಾವರಣ ಅದ್ಭುತವಾಗಿತ್ತು. ನಾನು ಹೋಗಿ ಆಟವನ್ನು ಪೂರ್ಣಗೊಳಿಸುವ ಜವಾಬ್ದಾರಿ ಮಾತ್ರ ಇತ್ತು ಎಂದು ಮೋಹಿತ್ ಶ್ಲಾಘಿಸಿದರು. ಅಲ್ಲದೆ, ಅಂತಿಮ ಕ್ಷಣದಲ್ಲಿ ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ವೆಂಕಟ ಅವರ ಪ್ರೋತ್ಸಾಹವನ್ನು ಸ್ಮರಿಸಿದ ಮೋಹಿತ್, ಇಲ್ಲ, ನಿನ್ನಿಂದ ಸಾಧ್ಯವಿದೆ, ಹೋಗಿ ಆಡು, ನೀನೇ ಪಂದ್ಯ ಮುಗಿಸುತ್ತೀಯ ಎಂದು ವೆಂಕಟ ನಿರಂತರವಾಗಿ ಧೈರ್ಯ ತುಂಬುತ್ತಿದ್ದರು. ಕೊನೆಯ ಎಸೆತದಲ್ಲೂ ನಾವು ಗೆಲ್ಲಬಲ್ಲೆವು ಎಂಬ ಅವರ ನಂಬಿಕೆ ನನ್ನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತು ಎಂದರು.

10ನೇ ಕ್ರಮಾಂಕದ ಅದೃಷ್ಟ!

ತಮಗೆ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಅದೃಷ್ಟದ ಸ್ಥಾನವಾಗಿದೆ ಎಂದು ಹೇಳಿದ ಮೋಹಿತ್, ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿದ್ದರಿಂದ ಬೃಹತ್ ಗುರಿ ಬೆನ್ನಟ್ಟುವ ವಿಶ್ವಾಸ ತಂಡದಲ್ಲಿತ್ತು ಎಂದರು. ಆರಂಭದಲ್ಲಿ ನಾಯಕ ಲಕ್ಷ್ಯ ರಾಯ್‌ಚಂದಾನಿ (80 ರನ್) ಮತ್ತು ಆರ್ಯವೀರ್ ಸೆಹ್ವಾಗ್ (58 ರನ್) ಭದ್ರ ಬುನಾದಿ ಹಾಕಿಕೊಟ್ಟಿದ್ದರು. ನಾನು ಬ್ಯಾಟಿಂಗ್‌ಗೆ ಹೋಗುವ ಮುನ್ನ ಕೋಚ್ ನನ್ನ ಬಳಿ ಬಂದು, ನಿನ್ನಿಂದ ಸಾಧ್ಯವಿದೆ, ನಿನ್ನ ಮೇಲೆ ನಂಬಿಕೆಯಿಡು ಎಂದು ಹೇಳಿದ್ದರು. ಹೀಗಾಗಿ ನಾನು ಮೈದಾನದಲ್ಲಿ ಏನಾಗುತ್ತಿದೆ ಅಥವಾ ಮುಂದೇನಾಗಬಹುದು ಎಂದು ಅತಿಯಾಗಿ ಯೋಚಿಸಲಿಲ್ಲ. ಕೇವಲ ಚೆಂಡನ್ನು ನೋಡುತ್ತಾ ನನ್ನ ಶಾಟ್‌ಗಳನ್ನು ಆಡಿದೆ ಎಂದು ತಮ್ಮ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ, ಉಸ್ಮಾನ್ ಖಾನ್ (107), ಅಬ್ದುಲ್ ಖಾದಿರ್ (80) ಮತ್ತು ನಾಯಕ ಫರ್ಹಾನ್ ಯೂಸುಫ್ (63) ಅವರ ಬ್ಯಾಟಿಂಗ್ ಬಲದಿಂದ 337/9 ರನ್ ಗಳಿಸಿತ್ತು. ಭಾರತದ ಪರ ಕಾವ್ಯಾ ಪಟೇಲ್ 4 ಮತ್ತು ಚಿಗುರುಪಾಟಿ ವೆಂಕಟ 3 ವಿಕೆಟ್ ಪಡೆದಿದ್ದರು. ಪಾಕ್ ಪರ ರಿಜ್ವಾನುಲ್ಲಾ 3 ಹಾಗೂ ನಿಕಾಬ್ ಶಫೀಕ್ 2 ವಿಕೆಟ್ ಪಡೆದರೂ ತಂಡವನ್ನು ಸೋಲಿನಿಂದ ಪಾರುಮಾಡಲು ಸಾಧ್ಯವಾಗಲಿಲ್ಲ(ಏಜೆನ್ಸೀಸ್​).