ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿ ಪಾಕಿಗಳಿಗೆ ಮನೆ ದಾರಿ ತೋರಿಸಿದ ಟೀಮ್ ಇಂಡಿಯಾ ಆಟಗಾರರು!..ವಿಡಿಯೋ ವೈರಲ್ |IND Vs PAK U19 Asia Cup

ಪಾಕಿಗಳಿಗೆ ಮನೆ ದಾರಿ ತೋರಿಸಿದ ಟೀಮ್ ಇಂಡಿಯಾ ಆಟಗಾರರು!..
ಪಾಕಿಗಳಿಗೆ ಮನೆ ದಾರಿ ತೋರಿಸಿದ ಟೀಮ್ ಇಂಡಿಯಾ ಆಟಗಾರರು!..
Published on: 

IND Vs PAK U19 Asia Cup: ಅಲ್ ಅಮೆರಾತ್‌ನಲ್ಲಿ ಶನಿವಾರ ನಡೆದ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತದ ಯುವ ಪಡೆ ಪಾಕಿಸ್ತಾನದ ವಿರುದ್ಧ 1 ವಿಕೆಟ್‌ಗಳ ಅವಿಸ್ಮರಣೀಯ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಪಾಕಿಸ್ತಾನ ನೀಡಿದ್ದ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಅಂತಿಮ ಹಂತದಲ್ಲಿ ಸೋಲಿನ ಭೀತಿ ಎದುರಾಗಿತ್ತು. ಆದರೆ, ಕೆಳಕ್ರಮಾಂಕದ ಆಟಗಾರರಾದ ಮೋಹಿತ್ ಉಲ್ವಾ ಮತ್ತು ಮನಲ್ ಚೌಹಾಣ್ ಅಸಾಧ್ಯವಾದುದನ್ನು ಸಾಧಿಸಿ ತೋರಿಸುವ ಮೂಲಕ ಪಾಕ್ ಕೈಯಲ್ಲಿದ್ದ ಗೆಲುವನ್ನು ಕಸಿದುಕೊಂಡರು.

ಬೃಹತ್ ಮೊತ್ತದ ಗುರಿ ಬೆನ್ನಟ್ಟುವ ಕೊನೆಯ ಕೆಲವು ಓವರ್‌ಗಳಲ್ಲಿ ಭಾರತಕ್ಕೆ ಪ್ರತಿ ಓವರ್‌ಗೆ 10ಕ್ಕೂ ಹೆಚ್ಚು ರನ್ ಗಳಿಸಬೇಕಾದ ಒತ್ತಡವಿತ್ತು. ವಿಕೆಟ್‌ಗಳು ಉರುಳುತ್ತಿದ್ದರಿಂದ ಟೀಮ್​ ಇಂಡಿಯಾ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಈ ನಿರ್ಣಾಯಕ ಹಂತದಲ್ಲಿ ಜೊತೆಯಾದ ಮೋಹಿತ್ ಉಲ್ವಾ ಮತ್ತು ಮನಲ್ ಚೌಹಾಣ್, ಪಾಕ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಕೇವಲ 35 ಎಸೆತಗಳಲ್ಲಿ 57 ರನ್‌ಗಳ ಸ್ಫೋಟಕ ಜೊತೆಯಾಟವಾಡಿದ ಈ ಜೋಡಿ ಪಂದ್ಯದ ದಿಕ್ಕನ್ನೇ ಬದಲಿಸಿತು. ಮನಲ್ ಚೌಹಾಣ್ 32 ಎಸೆತಗಳಲ್ಲಿ 47 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರೆ, ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದ ಮೋಹಿತ್ ಉಲ್ವಾ ಕೇವಲ 26 ಎಸೆತಗಳಲ್ಲಿ ಅಜೇಯ 49 ರನ್ ಬಾರಿಸಿ ಗೆಲುವಿನ ರನ್ ಗಳಿಸಿದರು.

ಉಲ್ವಾ ಗೆಲುವಿನ ಬೌಂಡರಿ ಬಾರಿಸುತ್ತಿದ್ದಂತೆ ಮೈದಾನದಲ್ಲಿ ಭಾರತೀಯ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತು. ಪಂದ್ಯದುದ್ದಕ್ಕೂ ಇದ್ದ ತೀವ್ರ ಒತ್ತಡ ಹಾಗೂ ಭಾವನೆಗಳ ಸ್ಫೋಟ ಎಂಬಂತೆ ಟೀಮ್ ಇಂಡಿಯಾ ಆಟಗಾರರು ಪಾಕ್ ಆಟಗಾರರಿಗೆ ಖಡಕ್ ಸೆಂಡ್-ಆಫ್ ನೀಡುವ ಮೂಲಕ ತಮ್ಮ ಗೆಲುವನ್ನು ಆಚರಿಸಿದರು.

Also Read
ಗಾಯದ ನೋವಿನಲ್ಲೂ ದಿಟ್ಟ ಹೋರಾಟ: ವಿರಾಟ್ ಸ್ಟೈಲ್ ಕಾಪಿ ಮಾಡಿ ಸಂಭ್ರಮಿಸಿದ ಸೆಹ್ವಾಗ್ ಪುತ್ರ ಆರ್ಯವೀರ್! | Aaryavir Sehwag
ಪಾಕಿಗಳಿಗೆ ಮನೆ ದಾರಿ ತೋರಿಸಿದ ಟೀಮ್ ಇಂಡಿಯಾ ಆಟಗಾರರು!..

ಉಸ್ಮಾನ್ ಶತಕ, ಪಾಕ್ ಬೃಹತ್ ಮೊತ್ತ

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಪಾಕ್ ಪರ ಆರಂಭಿಕ ಆಟಗಾರ ಉಸ್ಮಾನ್ ಖಾನ್ ಅತ್ಯಂತ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿ 106 ಎಸೆತಗಳಲ್ಲಿ ಶತಕ ಪೂರೈಸಿ, ಒಟ್ಟು 107 ರನ್ ಗಳಿಸಿದರು. ಮೊದಲ ವಿಕೆಟ್‌ಗೆ ಹಯಾಮ್ ಖಾನ್ ಅವರೊಂದಿಗೆ ಕೇವಲ 8.1 ಓವರ್‌ಗಳಲ್ಲಿ 62 ರನ್ ಸೇರಿಸಿ ಉಸ್ಮಾನ್ ಭದ್ರ ಬುನಾದಿ ಹಾಕಿಕೊಟ್ಟರು.

ನಂತರ ಉಸ್ಮಾನ್ ಜೊತೆಗೂಡಿದ ಅಬ್ದುಲ್ ಖಾದಿರ್ ಮಧ್ಯಮ ಓವರ್‌ಗಳಲ್ಲಿ ಭಾರತದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಈ ಜೋಡಿ ಕೇವಲ 18 ಓವರ್‌ಗಳಲ್ಲಿ 135 ರನ್‌ಗಳ ಜೊತೆಯಾಟವಾಡಿ ಪಾಕ್ ತಂಡಕ್ಕೆ ಸಂಪೂರ್ಣ ಹಿಡಿತ ಒದಗಿಸಿತು. ಆಕ್ರಮಣಕಾರಿ ಆಟವಾಡಿದ ಖಾದಿರ್ 39 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿ, ಒಟ್ಟು 54 ಎಸೆತಗಳಲ್ಲಿ 80 ರನ್ ಚಚ್ಚಿದರು.

36 ಓವರ್‌ಗಳಲ್ಲಿ 3 ವಿಕೆಟ್‌ಗೆ 240 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಪಾಕಿಸ್ತಾನಕ್ಕೆ ನಾಯಕ ಫರ್ಹಾನ್ ಯೂಸುಫ್ (63 ಎಸೆತಗಳಲ್ಲಿ 60 ರನ್) ನೆರವಾಗುವ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಅಂತಿಮ ಓವರ್‌ಗಳಲ್ಲಿ ಭಾರತದ ವೇಗಿಗಳಾದ ಕಾವ್ಯಾ ಪಟೇಲ್ (68ಕ್ಕೆ 4) ಮತ್ತು ಸಿ. ವೆಂಕಟ (40ಕ್ಕೆ 3) ಮಾರಕ ದಾಳಿ ನಡೆಸಿ ಪಾಕ್ ವಿಕೆಟ್‌ಗಳನ್ನು ಕಬಳಿಸಿದರಾದರೂ, ಅಷ್ಟರಲ್ಲಾಗಲೇ ಪಾಕಿಸ್ತಾನ ಸವಾಲಿನ ಮೊತ್ತ ಪೇರಿಸಿತ್ತು. ಆದರೆ ಅಂತಿಮವಾಗಿ ಭಾರತದ ಯುವ ಬ್ಯಾಟರ್‌ಗಳ ಕೆಚ್ಚೆದೆಯ ಹೋರಾಟದ ಮುಂದೆ ಪಾಕಿಸ್ತಾನದ ಬೃಹತ್ ಮೊತ್ತವೂ ಮಂಡಿಯೂರಿತು(ಏಜೆನ್ಸೀಸ್​).