ರಾಜಸ್ಥಾನ ರಾಯಲ್ಸ್​ ನೀವು ತಪ್ಪು ಮಾಡಿಬಿಟ್ರಿ...ವೈಭವ್​ಗೆ ಹೋಲಿಸಿ ಈ ಕ್ರಿಕೆಟಿಗನ ವಿರುದ್ಧ ವೀರೂ ಆಕ್ರೋಶ! Virender Sehwag

ರಾಜಸ್ಥಾನ ರಾಯಲ್ಸ್​ ನೀವು ತಪ್ಪು ಮಾಡಿಬಿಟ್ರಿ...ವೈಭವ್​ಗೆ ಹೋಲಿಸಿ ಈ ಕ್ರಿಕೆಟಿಗನ ವಿರುದ್ಧ ವೀರೂ ಆಕ್ರೋಶ! Virender Sehwag
ರಾಜಸ್ಥಾನ ರಾಯಲ್ಸ್​ ನೀವು ತಪ್ಪು ಮಾಡಿಬಿಟ್ರಿ...ವೈಭವ್​ಗೆ ಹೋಲಿಸಿ ಈ ಕ್ರಿಕೆಟಿಗನ ವಿರುದ್ಧ ವೀರೂ ಆಕ್ರೋಶ! Virender Sehwag
Published on

ಪ್ರಮುಖ ಮುಖ್ಯಾಂಶಗಳು

  • ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಹೀನಾಯ ಸೋಲು
  • ಜೈಪುರದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತಲೆಬಾಗಿದ ರಾಜಸ್ಥಾನ ರಾಯಲ್ಸ್​
  • ರಾಜಸ್ಥಾನದ ಬೌಲರ್‌ಗಳು 229 ರನ್‌ಗಳ ಬೃಹತ್ ಗುರಿಯನ್ನು ಉಳಿಸಿಕೊಳ್ಳಲೂ ಸಾಧ್ಯವಾಗಲಿಲ್ಲ
  • ರಿಯಾನ್​ ಪರಾಗ್​ ಅವರನ್ನು ಟೀಕಿಸಿದರ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್
Virender Sehwag : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಹೀನಾಯ ಸೋಲು ಅನುಭವಿಸಿತು. ಶನಿವಾರ (ಏಪ್ರಿಲ್​ 25) ಜೈಪುರದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ತಂಡ 5 ವಿಕೆಟ್‌ಗಳಿಂದ ಸೋಲುಂಡಿತು. ರಾಜಸ್ಥಾನದ ಬೌಲರ್‌ಗಳು 229 ರನ್‌ಗಳ ಬೃಹತ್ ಗುರಿಯನ್ನು ಉಳಿಸಿಕೊಳ್ಳಲೂ ಸಾಧ್ಯವಾಗಲಿಲ್ಲ.
ನಾಯಕ ರಿಯಾನ್ ಪರಾಗ್ ಅವರ ದುಡುಕಿನ ನಿರ್ಧಾರಗಳೇ ರಾಜಸ್ಥಾನದ ಸೋಲಿಗೆ ಕಾರಣವೆಂದು ಹೇಳಬಹುದು. ಈ ಪಂದ್ಯದಲ್ಲಿ, ಪರಾಗ್ ಉನ್ನತ ದರ್ಜೆಯ ಸ್ಪಿನ್ನರ್‌ಗಳಾದ ರವಿ ಬಿಷ್ಣೋಯ್ ಮತ್ತು ರವೀಂದ್ರ ಜಡೇಜಾ ಅವರಿಂದ ತಲಾ ಒಂದು ಓವರ್ ಮಾತ್ರ ಬೌಲಿಂಗ್ ಮಾಡಿಸಿದರು. ಬ್ರಿಜೇಶ್ ಶರ್ಮಾ ಅವರಿಂದ ಪರಾಗ್, ನಾಲ್ಕು ಓವರ್ ಬೌಲಿಂಗ್ ಮಾಡಿಸಿದರು. ಅಲ್ಲದೆ, ಬ್ರಿಜೇಶ್​ ಬಹಳಷ್ಟು ರನ್‌ಗಳನ್ನು ಬಿಟ್ಟುಕೊಟ್ಟರು.
ಇನ್ನೂ ನಾಯಕತ್ವದ ವಿಷಯದಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ರಿಯಾನ್ ನಿರಾಸೆ ಮೂಡಿಸಿದರು. ನಿನ್ನೆಯ ಪಂದ್ಯದಲ್ಲಿ ಪರಾಗ್ ಕೇವಲ 7 ರನ್‌ಗಳನ್ನು ಗಳಿಸಿದರು ಮತ್ತು ಪ್ಯಾಟ್ ಕಮ್ಮಿನ್ಸ್ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್ ಆದರು. ಇಲ್ಲಿಯವರೆಗೆ 8 ಪಂದ್ಯಗಳನ್ನು ಆಡಿರುವ ಪರಾಗ್ ಕೇವಲ 88 ರನ್‌ಗಳನ್ನು ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 20 ರನ್‌ಗಳು ಮಾತ್ರ. ಈ ಸಂದರ್ಭದಲ್ಲಿ, ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಪರಾಗ್ ಅವರನ್ನು ಕಟುವಾಗಿ ಟೀಕಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ಆಡಳಿತ ಮಂಡಳಿಯು ರಿಯಾನ್ ಪರಾಗ್ ಅವರ ನಾಯಕತ್ವದ ಬಗ್ಗೆ ಮರು ವಿಮರ್ಶೆ ನಡೆಸಬೇಕು. ರಿಯಾನ್​ ಪರಾಗ್​ ಸರಿಯಾದ ನಾಯಕನೇ ಎಂದು ಮತ್ತೊಮ್ಮೆ ಯೋಚಿಸಬೇಕು. ನೀವು 25 ಜನರನ್ನು ಸಂದರ್ಶಿಸಿ ಪರಾಗ್ ಅವರನ್ನು ಆಯ್ಕೆ ಮಾಡಬಹುದಿತ್ತು. ಪರಾಗ್​ ಅವರು ತಾನೊಬ್ಬ ನಾಯಕ ಎಂದು ಸಾಬೀತುಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕ್ರಿಕ್​ಬಜ್​ ಜತೆ ಮಾತನಾಡುತ್ತಾ ಸೆಹ್ವಾಗ್​ ಹೇಳಿದರು.
ಪರಾಗ್​ ಅವರ ತಂತ್ರಗಳ ಬಗ್ಗೆ ಮಾತನಾಡಿದ ಸೆಹ್ವಾಗ್​, ಮೈದಾನದಲ್ಲಿ ಪರಾಗ್​ ಅವರು ಬಳಸುತ್ತಿರುವ ತಂತ್ರಗಳಿಗೆ ಯಾವುದೇ ಅರ್ಥವಿಲ್ಲ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ, ವಿಕೆಟ್ ಪಡೆಯುವ ಬೌಲರ್‌ಗಳಾದ ರವಿ ಬಿಷ್ಣೋಯ್ ಮತ್ತು ರವೀಂದ್ರ ಜಡೇಜಾ ಅವರಿಂದ ಕೇವಲ ಒಂದು ಓವರ್ ಬೌಲಿಂಗ್ ಮಾಡಿಸಿದರು. ಅಂತಹ ವಿಶ್ವ ದರ್ಜೆ ಬೌಲರ್​ಗಳಿಗೆ ಕೇವಲ ಒಂದು ಓವರ್ ನೀಡಿದರೆ, ನೀವು ವಿಕೆಟ್ ಪಡೆಯುವುದು ಹೇಗೆ ಎಂದು ಪ್ರಶ್ನೆ ಮಾಡಿದ ವೀರೂ, ಪರಾಗ್​ ಅವರು ಬ್ಯಾಟ್ಸ್‌ಮನ್ ಆಗಿಯೂ ವಿಫಲರಾಗುತ್ತಿದ್ದಾರೆ ಎಂದರು.
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಅವರ ಪ್ರಸಕ್ತ ಸೀಸನ್‌ನ ಕಳಪೆ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ನಾಯಕನಾಗಿ ಪರಾಗ್ ತಮ್ಮ ಜವಾಬ್ದಾರಿಯನ್ನು ಅರಿತು ಹೆಚ್ಚು ರನ್ ಗಳಿಸಬೇಕಿದೆ ಹಾಗೂ ಕೇವಲ ಹದಿಹರೆಯದ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾಯಕನೇ ರನ್ ಗಳಿಸದಿದ್ದಾಗ ಅದು ಅವರ ನಾಯಕತ್ವದ ಮೇಲೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ತಂಡದ ಕಿರಿಯ ಆಟಗಾರ ವೈಭವ್ 36 ಎಸೆತಗಳಲ್ಲಿ ಶತಕ ಸಿಡಿಸಿದಾಗ, ಒಬ್ಬ ಸೀನಿಯರ್ ಆಟಗಾರನಾಗಿ ನಾನು ಏಕೆ ರನ್ ಗಳಿಸುತ್ತಿಲ್ಲ ಎಂಬ ಆತಂಕ ಮತ್ತು ಒತ್ತಡ ಸಹಜವಾಗಿಯೇ ಕಾಡುತ್ತದೆ. ಆದರೆ, ನಾಯಕನಾದವನು ಜವಾಬ್ದಾರಿಯುತವಾಗಿ ಆಡದಿದ್ದರೆ, ಫಲಿತಾಂಶವೂ ಕೆಟ್ಟದಾಗಿಯುತ್ತದೆ. ಇನ್ನಾದರೂ ಪರಾಗ್​ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎಂದು ಸೆಹ್ವಾಗ್​ ಎಚ್ಚರಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net