

Virat Kohli Test Retirement: ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದು ಅಂದು ಕೋಟ್ಯಂತರ ಅಭಿಮಾನಿಗಳಿಗೆ ಆಘಾತ ತಂದಿತ್ತು. ಈ ಕುರಿತು ಮನಬಿಚ್ಚಿ ಮಾತನಾಡಿರುವ ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಮ್ ಜಾಫರ್, ತಮ್ಮ ವಿದಾಯದ ವಿಚಾರದಲ್ಲಿ ಕೆಲವರು ನಡೆದುಕೊಂಡ ರೀತಿಯಿಂದ ಕೊಹ್ಲಿ ತುಂಬಾ ಬೇಸರಗೊಂಡಿದ್ದರು ಎಂಬ ಸ್ಫೋಟಕ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕಾಗಿ ಕೊಹ್ಲಿ ಭರ್ಜರಿಯಾಗಿಯೇ ಸಿದ್ಧತೆ ನಡೆಸುತ್ತಿದ್ದರು. ಜೊತೆಗೆ ಇನ್ನೂ ಕೆಲ ವರ್ಷಗಳ ಕಾಲ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಮುಂದುವರಿಯುವ ಮನಸ್ಥಿತಿಯಲ್ಲೂ ಅವರಿದ್ದರು. ಹೀಗಿರುವಾಗ, ಅಷ್ಟೊಂದು ದೊಡ್ಡ ಮಟ್ಟದ ಆಟಗಾರನ ವಿಷಯವನ್ನು ಕ್ರಿಕೆಟ್ ಮಂಡಳಿ ಇಷ್ಟೊಂದು ಹಗುರವಾಗಿ ನಿರ್ವಹಿಸುವ ಬದಲು ಇನ್ನಷ್ಟು ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು ಎಂದು ಜಾಫರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಅಭಿಷೇಕ್ ಶರ್ಮಾ ದಾಖಲೆಯ ಆಟ...ವಿಂಡೀಸ್ಗೆ ಬಿಗ್ ಟಾರ್ಗೆಟ್ ನೀಡಿದ ಟೀಮ್ ಇಂಡಿಯಾ | IndVsWI
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ವಾಸಿಮ್ ಜಾಫರ್, ವಿರಾಟ್ ಕೊಹ್ಲಿಯಂತಹ ಆಟಗಾರ ಸ್ಟೇಡಿಯಂಗೆ ಜನರನ್ನು ಆಕರ್ಷಿಸುತ್ತಾರೆ ಮತ್ತು ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ಅವರು ಇನ್ನೂ ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಬಹುದಿತ್ತು. ತೆರೆಮರೆಯಲ್ಲಿ ನಿಜವಾಗಿಯೂ ಏನು ನಡೆಯಿತು ಎಂಬುದು ಸ್ವತಃ ವಿರಾಟ್ ಬಾಯಿಂದ ಬರುವವರೆಗೆ ನಮಗೆ ಸ್ಪಷ್ಟತೆ ಸಿಗುವುದಿಲ್ಲ ಎಂದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಭವಿಷ್ಯದ ಬಗ್ಗೆ ಹಲವು ತಿಂಗಳುಗಳಿಂದ ಇದ್ದ ಗೊಂದಲ ಹಾಗೂ ಅನಿಶ್ಚಿತತೆಯ ಬಳಿಕ ಈ ನಿವೃತ್ತಿ ನಿರ್ಧಾರ ಹೊರಬಿದ್ದಿತ್ತು. ಅವರು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ಮತ್ತು ಟೆಸ್ಟ್ ಕ್ರಿಕೆಟ್ ಆಡುವುದನ್ನು ಮುಂದುವರಿಸಲು ಅತ್ಯಂತ ಉತ್ಸುಕರಾಗಿದ್ದರು. ರೆಡ್ಬಾಲ್ ಕ್ರಿಕೆಟ್ ಮೇಲೆ ತಮಗಿರುವ ಬದ್ಧತೆಯನ್ನು ಸಾಬೀತುಪಡಿಸಲು ಅವರು 2025ರ ಜನವರಿಯಲ್ಲಿ ದೆಹಲಿ ಪರ ರಣಜಿ ಟ್ರೋಫಿ ಪಂದ್ಯದಲ್ಲೂ ಕಣಕ್ಕಿಳಿದಿದ್ದರು.
ಆದರೆ, ವರದಿಗಳ ಪ್ರಕಾರ ಏಪ್ರಿಲ್ ತಿಂಗಳಲ್ಲಿ ಸಂಪೂರ್ಣ ಸನ್ನಿವೇಶವೇ ಬದಲಾಯಿತು. ಇಂಗ್ಲೆಂಡ್ ಪ್ರವಾಸಕ್ಕೆ ತಂಡವನ್ನು ಮುನ್ನಡೆಸಲು ಒಬ್ಬ ಯುವ ನಾಯಕನಿಗೆ ಮ್ಯಾನೇಜ್‌ಮೆಂಟ್ ಬೆಂಬಲ ನೀಡಲು ಬಯಸಿದೆ ಎಂದು ಆಯ್ಕೆದಾರರು ಕೊಹ್ಳಿಗೆ ತಿಳಿಸಿದರು. ಅಷ್ಟೇ ಅಲ್ಲದೆ, ಉಳಿದ ಎಲ್ಲ ಬ್ಯಾಟರ್‌ಗಳಂತೆ ಕೊಹ್ಲಿ ಅವರ ಸ್ಥಾನವನ್ನೂ ಒಂದೇ ರೀತಿಯ ಮಾನದಂಡಗಳಡಿ ನೋಡಲಾಗುತ್ತದೆ ಮತ್ತು ಅವರ ಫಾರ್ಮ್ ಆಧರಿಸಿಯೇ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದೂ ಅವರಿಗೆ ಸ್ಪಷ್ಟಪಡಿಸಲಾಗಿತ್ತು.
ಈ ಎಲ್ಲಾ ಬೆಳವಣಿಗೆಗಳಿಂದ ನಿರಾಶೆಗೊಂಡಿದ್ದ ಕೊಹ್ಲಿ, ತಮಗೆ ಇಂಗ್ಲೆಂಡ್ ಪ್ರವಾಸದ ಭಾಗವಾಗಲು ಇಷ್ಟವಿಲ್ಲ ಎಂದು ನಂತರ ಆಯ್ಕೆದಾರರಿಗೆ ತಿಳಿಸಿದರು. ಆಪ್ತರು ಮತ್ತು ಬಿಸಿಸಿಐನ ಕೆಲವು ಅಧಿಕಾರಿಗಳು ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವೊಲಿಸಲು ನಡೆಸಿದ ಪ್ರಯತ್ನಗಳು ನೀರಲ್ಲಿ ಹೋಮ ಮಾಡಿದಂತಾಯಿತು ಎಂದು ವರದಿಯಾಗಿದೆ.
ಇಂಗ್ಲೆಂಡ್ ಪ್ರವಾಸಕ್ಕಾಗಿ ಕೊಹ್ಲಿ ಭರ್ಜರಿಯಾಗಿ ಸಿದ್ಧತೆ ನಡೆಸುತ್ತಿದ್ದರು. ಹೀಗಿರುವಾಗ ಈ ಇಡೀ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಹಲವು ಪ್ರಶ್ನೆಗಳಿಗೆ ಕಾರಣವಾಯಿತು ಎಂದು ವಾಸಿಮ್ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. ಅವರು ಪ್ರವಾಸಕ್ಕಾಗಿ ಸಜ್ಜಾಗುತ್ತಿದ್ದರು. ಈ ವಿಚಾರವನ್ನು ಇನ್ನಷ್ಟು ಉತ್ತಮವಾಗಿ ಹಾಗೂ ವ್ಯವಸ್ಥಿತವಾಗಿ ನಿರ್ವಹಿಸಬಹುದಿತ್ತು ಎಂದು ಜಾಫರ್ ತಿಳಿಸಿದ್ದಾರೆ. ಅಂತಿಮವಾಗಿ, ವಿರಾಟ್ ಕೊಹ್ಲಿ ಕಳೆದ ವರ್ಷ ಮೇ 12 ರಂದು ಟೆಸ್ಟ್ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದರು. ಇದರೊಂದಿಗೆ ಅವರ 14 ವರ್ಷಗಳ ಸುದೀರ್ಘ ಟೆಸ್ಟ್ ವೃತ್ತಿಜೀವನಕ್ಕೆ ತೆರೆಬಿದ್ದಿತು. ಅವರು ತಮ್ಮ 123 ಟೆಸ್ಟ್ ಪಂದ್ಯಗಳಲ್ಲಿ 30 ಶತಕಗಳೊಂದಿಗೆ ಒಟ್ಟು 9,230 ರನ್ ಗಳಿಸಿದ್ದಾರೆ(ಏಜೆನ್ಸೀಸ್).