ಟೀಮ್​ ಇಂಡಿಯಾ ಪರ ಆಡೋಕೆ ಇನ್ಮುಂದೆ ಚಾನ್ಸ್ ಸಿಗಲಿಲ್ಲ ಅಂದ್ರೆ....ಬಿಸಿಸಿಐ ನಿರ್ಲಕ್ಷ್ಯದ ಬೆನ್ನಲ್ಲೇ ಶಮಿ ಸ್ಫೋಟಕ ಹೇಳಿಕೆ! | Mohammed Shami

Mohammed Shami: ಕಳೆದ ವಾರದವರೆಗೆ ಟೀಮ್​ ಇಂಡಿಯಾದ ವಿಚಾರದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಇಬ್ಬರೂ ಒಂದೇ ರೀತಿಯ ಸ್ಥಿತಿಯಲ್ಲಿದ್ದರು. ಸರಿಸುಮಾರು ಒಂದೇ ವಯಸ್ಸಿನವರಾದ ಈ ಇಬ್ಬರೂ ಹಿರಿಯ ಆಟಗಾರರು, ದೇಶೀಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದರು.
ಹಿರಿಯ ಬೌಲರ್​ ಮೊಹಮ್ಮದ್ ಶಮಿ
ಹಿರಿಯ ಬೌಲರ್​ ಮೊಹಮ್ಮದ್ ಶಮಿ
Published on: 

Mohammed Shami: ಕಳೆದ ವಾರದವರೆಗೆ ಟೀಮ್​ ಇಂಡಿಯಾದ ವಿಚಾರದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಇಬ್ಬರೂ ಒಂದೇ ರೀತಿಯ ಸ್ಥಿತಿಯಲ್ಲಿದ್ದರು. ಸರಿಸುಮಾರು ಒಂದೇ ವಯಸ್ಸಿನವರಾದ ಈ ಇಬ್ಬರೂ ಹಿರಿಯ ಆಟಗಾರರು, ದೇಶೀಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದರು. ಆದರೆ, ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಬಿಸಿಸಿಐ ಆಯ್ಕೆ ಸಮಿತಿಯು ಟಿ20 ತಂಡವನ್ನು ಪ್ರಕಟಿಸಿದಾಗ ಇದರಲ್ಲಿ ಕೆಲ ಬದಲಾವಣೆಗಳಾದವು.

ನಾಲ್ಕು ವರ್ಷಗಳ ಬಳಿಕ ಭುವನೇಶ್ವರ್ ಕುಮಾರ್ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಆಯ್ಕೆಯಾದರು, ಆದರೆ ಆ ಪಟ್ಟಿಯಲ್ಲಿ ಮತ್ತೆ ಶಮಿ ಹೆಸರೇ ಇರಲಿಲ್ಲ. 2023ರ ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಶಮಿ, ಕೊನೆಯ ಬಾರಿಗೆ ಟೀಮ್​ ಇಂಡಿಯಾ ಜೆರ್ಸಿ ತೊಟ್ಟಿದ್ದು 2025ರ ಮಾರ್ಚ್​​ನಲ್ಲಿ. ಆರಂಭದಲ್ಲಿ ಗಾಯದ ಸಮಸ್ಯೆಗಳು ಅವರನ್ನು ತಂಡದಿಂದ ದೂರ ಉಳಿಯುವಂತೆ ಮಾಡಿದ್ದವು. ಅದರಿಂದ ಚೇತರಿಸಿಕೊಂಡು ಬಂಗಾಳ ಪರ ದೇಶೀಯ ಕ್ರಿಕೆಟ್ ಆಡಿದ್ದರೂ ಸಹ, ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುತ್ತಿಲ್ಲ.

ಇದನ್ನೂ ಓದಿ:ಹೋಪ್, ರುದರ್‌ಫೋರ್ಡ್ ಅಬ್ಬರ: ವಿಂಡೀಸ್​ಗೆ ಐತಿಹಾಸಿಕ ಜಯ..ಟೀಮ್​ ಇಂಡಿಯಾಗೆ ಭಾರಿ ಮುಖಭಂಗ! | INDvWI

ಈ ವಿಷಯವಾಗಿ ರೆವ್‌ಸ್ಪೋರ್ಟ್ಜ್ ಜತೆ ಮಾತನಾಡಿದ ಶಮಿ, ಭುವನೇಶ್ವರ್ ಕುಮಾರ್‌ಗೆ ಭಾರತ ಪರ ಆಡುವ ಅವಕಾಶ ಸಿಕ್ಕಿದೆ, ಅದು ಅವರಿಗೆ ಒಳ್ಳೆಯದು. ಆದರೆ ಅವರ ಆಯ್ಕೆ ನನಗೆ ಸಂಬಂಧಿಸಿದ್ದಲ್ಲ. ನನಗೆ ಎಲ್ಲಿ ಆಡಲು ಅವಕಾಶ ಸಿಗುತ್ತದೆಯೋ, ಅಲ್ಲಿ ನನ್ನ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ. ಸದ್ಯಕ್ಕೆ ನನ್ನ ಸಂಪೂರ್ಣ ಗಮನ ಭಾನುವಾರದಿಂದ ಆರಂಭವಾಗಲಿರುವ ರಣಜಿ ಟೂರ್ನಿ ಮೇಲಿದೆ ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಶಮಿ, ಕಳೆದ ಎರಡು-ಮೂರು ವರ್ಷಗಳಿಂದ ನಾನು ಪ್ರದರ್ಶನ ನೀಡುತ್ತ ಬಂದಿದ್ದೇನೆ ಮತ್ತು ಬಂಗಾಳ ಪರ ನನ್ನ ಫಿಟ್‌ನೆಸ್ ಅನ್ನು ಸಾಬೀತುಪಡಿಸಿದ್ದೇನೆ. ನನಗೆ ಮತ್ತೆ ಭಾರತದ ಪರ ಆಡುವ ಅವಕಾಶ ಸಿಗದಿದ್ದರೆ, ಅದು ನನ್ನ ನಷ್ಟವಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಅಸಮಾಧಾನ!

ಇತ್ತೀಚೆಗೆ ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಕೂಡ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರಿಗೇಕೆ ಸರಿಯಾಗಿ ಅವಕಾಶ ಸಿಗುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಶಮಿ ಅವರನ್ನು, ವಿಶೇಷವಾಗಿ ಟೆಸ್ಟ್ ತಂಡದಲ್ಲಿ ಕಡ್ಡಾಯವಾಗಿ ಆಯ್ಕೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. ಏಕದಿನ ತಂಡದ ವಿಚಾರದಲ್ಲಿ ಗುರ್ನೂರ್ ಬ್ರಾರ್, ಪ್ರಸಿದ್ಧ ಕೃಷ್ಣ ಮತ್ತು ನಿತೀಶ್ ರೆಡ್ಡಿ ಅವರಂತಹ ಹಲವು ಆಟಗಾರರನ್ನು ಮ್ಯಾನೇಜ್ಮೆಂಟ್ ಪ್ರಯತ್ನಿಸುತ್ತಿರುವುದರಿಂದ, ಮ್ಯಾನೇಜ್ಮೆಂಟ್‌ಗೆ ಇನ್ನುಳಿದ ಹಿರಿಯ ಆಟಗಾರರ ಮೇಲೆ ಭದ್ರವಾದ ವಿಶ್ವಾಸವಿದೆ ಎಂದು ಅನಿಸುವುದಿಲ್ಲ ಎಂದೂ ವಾಸಿಮ್ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ಆಯ್ಕೆಗಾರರು ಮೊಹಮ್ಮದ್ ಸಿರಾಜ್‌ಗೆ ಸತತವಾಗಿ ಆಡುವ ಅವಕಾಶಗಳನ್ನು ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್, ಭಾರತ ತಂಡದ ಎರಡನೇ ಮತ್ತು ಮೂರನೇ ವೇಗದ ಬೌಲರ್‌ಗಳು ಯಾರು ಎಂಬ ಬಗ್ಗೆಯೇ ಸ್ಪಷ್ಟತೆಯಿಲ್ಲ ಎಂದು ಟೀಕಿಸಿದ್ದಾರೆ. ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಹಿರಿಯ ಅನುಭವಿ ವೇಗಿ ಮೊಹಮ್ಮದ್ ಶಮಿ ಖಂಡಿತವಾಗಿಯೂ ಏಕದಿನ ತಂಡದಲ್ಲಿ ಇರಬೇಕಾದದ್ದು ಅತ್ಯಂತ ಮುಖ್ಯವಾಗಿದೆ ಎಂದಿರುವ ಅವರು, ಪ್ರಮುಖ ಟೂರ್ನಿಗಳಲ್ಲಿ ಕಣಕ್ಕಿಳಿಯುವ ಸಾಮರ್ಥ್ಯ ಹಾಗೂ ಅನುಭವವಿರುವ ಆಟಗಾರರನ್ನು ಕಡೆಗಣಿಸದೆ ಕಡ್ಡಾಯವಾಗಿ ಆಡಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಸ್‌ಪ್ರೀತ್ ಬುಮ್ರಾ ಜತೆಗೆ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ತಮ್ಮ ಮೊದಲ ಆಯ್ಕೆಯ ವೇಗದ ಬೌಲಿಂಗ್ ಆಯ್ಕೆಯಾಗಲಿದ್ದಾರೆ ಎಂದು ತಿಳಿಸಿರುವ ಜಾಫರ್, ಮುಂಬರುವ ವಿಶ್ವಕಪ್ ಮುಗಿದ ಬಳಿಕವಷ್ಟೇ ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಬಗ್ಗೆ ಯೋಚಿಸಬೇಕು ಹೊರತು ಈಗಲೇ ಪ್ರಯೋಗಗಳಿಗೆ ಮುಂದಾಗಬಾರದು ಎಂದು ಬಿಸಿಸಿಐ ಆಯ್ಕೆ ಸಮಿತಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಮೊಹಮ್ಮದ್ ಶಮಿ ಅವರನ್ನು ಟೆಸ್ಟ್ ತಂಡಕ್ಕೆ ಮರಳಿ ಕರೆತರುವುದನ್ನು ನೋಡಲು ತಾವು ಬಹಳ ದಿನಗಳಿಂದ ಕಾಯುತ್ತಿರುವುದಾಗಿ ವಾಸಿಮ್ ಜಾಫರ್ ಪುನರುಚ್ಚರಿಸಿದ್ದಾರೆ. ಭಾರತ ತಂಡದ ಆಯ್ಕೆ ಪ್ರಕ್ರಿಯೆ ನಡೆಯುವಾಗಲೆಲ್ಲಾ ತಮ್ಮ ಕಣ್ಣುಗಳು ಮೊಹಮ್ಮದ್ ಶಮಿ ಮತ್ತು ಪ್ರತಿಭಾವಂತ ವೇಗಿ ಔಕಿಬ್ ನಬಿ ಅವರ ಮೇಲಿರುತ್ತವೆ ಎಂದು ಅವರು ತಿಳಿಸಿದ್ದಾರೆ. ಒಂದು ವೇಳೆ ಈ ಬಾರಿಯೂ ಶಮಿ ಅವರನ್ನು ಕಡೆಗಣಿಸಿದರೆ, ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಬಾಗಿಲು ಮುಂಬರುವ ದಿನಗಳಲ್ಲಿ ಸಂಪೂರ್ಣವಾಗಿ ಮುಚ್ಚಲ್ಪಡಬಹುದು ಎಂದು ಜಾಫರ್ ಆತಂಕ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net