ಐಸಿಸಿ ಏಕದಿನ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ 'ಕಿಂಗ್'!...ನಂ.1 ಪಟ್ಟದಲ್ಲಿರುವ ಗಿಲ್ ಹಾಗೂ ವಿರಾಟ್ ನಡುವಿನ ಅಂತರವೆಷ್ಟು ಗೊತ್ತಾ..? | ODI Rankings

ODI Rankings: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದಾಖಲೆಯ 55ನೇ ಏಕದಿನ ಶತಕ ಸಿಡಿಸಿದ ಬಳಿಕ, ಟೀಮ್​ ಇಂಡಿಯಾ ರನ್​ ಮಷಿನ್​ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಒಂದು ಸ್ಥಾನ ಬಡ್ತಿ ಪಡೆದು ಎರಡನೇ ಸ್ಥಾನಕ್ಕೆ ಏರಿದ್ದಾರೆ.
ಐಸಿಸಿ ಏಕದಿನ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ 'ಕಿಂಗ್'!...
ಐಸಿಸಿ ಏಕದಿನ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ 'ಕಿಂಗ್'!...
Published on: 

ODI Rankings: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದಾಖಲೆಯ 55ನೇ ಏಕದಿನ ಶತಕ ಸಿಡಿಸಿದ ಬಳಿಕ, ಟೀಮ್​ ಇಂಡಿಯಾ ರನ್​ ಮಷಿನ್​ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಒಂದು ಸ್ಥಾನ ಬಡ್ತಿ ಪಡೆದು ಎರಡನೇ ಸ್ಥಾನಕ್ಕೆ ಏರಿದ್ದಾರೆ. 9 ಸಿಕ್ಸರ್ ಹಾಗೂ 10 ಬೌಂಡರಿಗಳನ್ನೊಳಗೊಂಡಂತೆ 88 ಎಸೆತಗಳಲ್ಲಿ ಅವರು ಬಾರಿಸಿದ ಅಜೇಯ 139 ರನ್‌ಗಳ ನೆರವಿನಿಂದ ನ್ಯೂಜಿಲೆಂಡ್‌ನ ಡೆರಿಲ್ ಮಿಚೆಲ್​ರನ್ನು (794 ರೇಟಿಂಗ್ ಅಂಕ) ಕಿಂಗ್​ ಹಿಂದಿಕ್ಕಿದ್ದಾರೆ.

ಕೊಹ್ಲಿ 796 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರುವ ಮೂಲಕ, 816 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಟೀಮ್​ ಇಂಡಿಯಾ ಏಕದಿನ ತಂಡದ ನಾಯಕ ಶುಭಮಾನ್ ಗಿಲ್ ನಡುವಿನ ಅಂತರವನ್ನು ಕಡಿಮೆಗೊಳಿಸಿದ್ದಾರೆ. ಇನ್ನು ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ 719 ರೇಟಿಂಗ್ ಅಂಕಗಳೊಂದಿಗೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ತಿರುವನಂತಪುರಂನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ ಮತ್ತು ಗಿಲ್ ಇಬ್ಬರೂ ಶತಕ ಬಾರಿಸುವ ಮೂಲಕ ಭಾರತ ತಂಡವು 296 ರನ್‌ಗಳ ಗುರಿಯನ್ನು ಇನ್ನೂ ಎಂಟು ವಿಕೆಟ್‌ಗಳು ಬಾಕಿ ಇರುವಂತೆಯೇ ಸುಲಭವಾಗಿ ತಲುಪಲು ನೆರವಾದರು.

ಇದನ್ನೂ ಓದಿ:ಮಾಜಿ ಸಿಎಂ ಆದ ನನಗೇ ಹೊರಬರಲು ಬಿಡುತ್ತಿಲ್ಲ!...ಟಿಎಂಸಿ ನಾಯಕರ ಮೇಲಿನ ಮೊಟ್ಟೆ ದಾಳಿ ವಿರುದ್ಧ ರೊಚ್ಚಿಗೆದ್ದ ದೀದಿ | Mamata Banerjee

ಕಳೆದ ಭಾನುವಾರ (ಸೆಪ್ಟೆಂಬರ್ 27) ವಿವಿಧ ಸರಣಿಗಳಲ್ಲಿ ಆಡಿದ ಒಟ್ಟು ಆರು ಬ್ಯಾಟರ್‌ಗಳು ಶತಕ ಸಿಡಿಸುವ ಮೂಲಕ ದಾಖಲೆ ಬರೆದರು. ಈ ಪಟ್ಟಿಯಲ್ಲಿದ್ದ ಇಬ್ಬರು ಭಾರತೀಯರೆಂದರೆ ಗಿಲ್ ಮತ್ತು ಕೊಹ್ಲಿ. ಉಳಿದಂತೆ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಜಸ್ಟಿನ್ ಗ್ರೀವ್ಸ್, ಇಂಗ್ಲೆಂಡ್ ಆರಂಭಿಕ ಆಟಗಾರ ಟಾಮ್ ಬ್ಯಾಂಟನ್ ಹಾಗೂ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಜೋಡಿಯಾದ ನಾಯಕ ತೆಂಬಾ ಬವುಮಾ ಮತ್ತು ಅನುಭವಿ ಡೇವಿಡ್ ಮಿಲ್ಲರ್ ಮೂರಂಕಿ ತಲುಪಿದ (ಶತಕ ಬಾರಿಸಿದ) ಇತರ ಬ್ಯಾಟರ್‌ಗಳಾಗಿದ್ದಾರೆ.

ಎರಡನೇ ಏಕದಿನ ಪಂದ್ಯದಲ್ಲಿ 121 ರನ್‌ಗಳ ಪಂದ್ಯ ಗೆಲ್ಲಿಸುವ ಇನ್ನಿಂಗ್ಸ್ ಆಡಿದ ಶ್ರೀಲಂಕಾದ ಬ್ಯಾಟಿಂಗ್ ಬೆನ್ನೆಲುಬು ಕುಸಲ್ ಮೆಂಡಿಸ್ ಶ್ರೇಯಾಂಕದಲ್ಲಿ ಭಾರಿ ಜಿಗಿತ ಕಂಡು, ಮೂರು ಸ್ಥಾನಗಳನ್ನು ಜಿಗಿದು ಏಳನೇ ಸ್ಥಾನಕ್ಕೆ ತಲುಪಿದ್ದಾರೆ. ಇಂಗ್ಲೆಂಡ್ ಬ್ಯಾಟಿಂಗ್ ಅನುಭವಿ ಜೋ ರೂಟ್ ಎರಡು ಸ್ಥಾನ ಕುಸಿದು ಒಂಬತ್ತನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರೆ, ಶಾಯ್ ಹೋಪ್ 664 ರೇಟಿಂಗ್ ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ.

ಬ್ಯಾಟಿಂಗ್ ರ್‍ಯಾಂಕಿಂಗ್​ನಲ್ಲಿ ಏಷ್ಯಾದ ಆಟಗಾರರದ್ದೇ ಪ್ರಾಬಲ್ಯ ಮುಂದುವರಿದಿದ್ದು, ಅಫ್ಘಾನಿಸ್ತಾನದ ಆರಂಭಿಕ ಆಟಗಾರ ಇಬ್ರಾಹಿಂ ಝದ್ರಾನ್ (719 ರೇಟಿಂಗ್ ಅಂಕ) ಮತ್ತು ಪಾಕಿಸ್ತಾನದ ಪ್ರಮುಖ ಬ್ಯಾಟರ್ ಬಾಬರ್ ಅಜಮ್ (689) ಕ್ರಮವಾಗಿ ಐದನೇ ಮತ್ತು ಆರನೇ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಐರ್ಲೆಂಡ್‌ನ ಹ್ಯಾರಿ ಟೆಕ್ಟರ್ 653 ರೇಟಿಂಗ್ ಅಂಕಗಳೊಂದಿಗೆ 10 ನೇ ಸ್ಥಾನದಲ್ಲಿದ್ದಾರೆ.

ಬೌಲರ್‌ಗಳ ರ್‍ಯಾಂಕಿಂಗ್​ ಹೀಗಿದೆ!...

ಬೌಲರ್‌ಗಳ ರ್‍ಯಾಂಕಿಂಗ್​ನಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ 2/54 ಮತ್ತು 4/20 ವಿಕೆಟ್ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾದ ಪ್ರಮುಖ ಸ್ಪಿನ್ನರ್ ಕೇಶವ್ ಮಹಾರಾಜ್ ಮೂರನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹೇಝಲ್‌ವುಡ್ ಕೂಡ ಮೊದಲ ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಟಾಪ್ 10 ಶ್ರೇಯಾಂಕಕ್ಕೆ ಮರಳಿದ್ದು, ಐದು ಸ್ಥಾನ ಜಿಗಿದು 10 ನೇ ಸ್ಥಾನದಲ್ಲಿದ್ದಾರೆ.

ಇನ್ನು ಭಾರತದ ಸ್ಪಿನ್ನರ್ ಕುಲದೀಪ್ ಯಾದವ್ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಮ್ಮ 12ನೇ ಏಕದಿನ 4-ವಿಕೆಟ್ ಸಾಧನೆ (4/40) ಮಾಡಿದ ನಂತರ ನಾಲ್ಕು ಸ್ಥಾನಗಳನ್ನು ಜಿಗಿದು ಐದನೇ ಸ್ಥಾನಕ್ಕೆ ತಲುಪಿದ್ದಾರೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net