ಬೌನ್ಸರ್ ಹಾಕಿ ಡಕ್ ಔಟ್ ಮಾಡಿದ್ದಕ್ಕೆ ಸಿಕ್ಸರ್ ಮೂಲಕ ಸೇಡು: ಪ್ರಫುಲ್​ ವಿರುದ್ಧ ವೈಭವ್ ರುದ್ರನರ್ತನ! Vaibhav Suryavanshi

ಬೌನ್ಸರ್ ಹಾಕಿ ಡಕ್ ಔಟ್ ಮಾಡಿದ್ದಕ್ಕೆ ಸಿಕ್ಸರ್ ಮೂಲಕ ಸೇಡು: ಪ್ರಫುಲ್​ ವಿರುದ್ಧ ವೈಭವ್ ರುದ್ರನರ್ತನ! Vaibhav Suryavanshi
ಬೌನ್ಸರ್ ಹಾಕಿ ಡಕ್ ಔಟ್ ಮಾಡಿದ್ದಕ್ಕೆ ಸಿಕ್ಸರ್ ಮೂಲಕ ಸೇಡು: ಪ್ರಫುಲ್​ ವಿರುದ್ಧ ವೈಭವ್ ರುದ್ರನರ್ತನ! Vaibhav Suryavanshi
Published on

ಪ್ರಮುಖ ಮುಖ್ಯಾಂಶಗಳು

  • ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣ ನಿನ್ನೆ ಸೇಡಿನ ಪಂದ್ಯಕ್ಕೆ ಸಾಕ್ಷಿಯಾಯಿತು
  • ಹೈದರಾಬಾದ್‌ನ ಉಪ್ಪಾಲ್​ ಕ್ರೀಡಾಂಗಣದಲ್ಲಿ ಆಗಿದ್ದ ಡಕೌಟ್​ಗೆ ಸೂರ್ಯವಂಶಿ ಪ್ರತೀಕಾರ
  • ಬೌನ್ಸರ್‌ ಹಾಕಿ ಮೊದಲ ಎಸೆತದಲ್ಲೇ ವೈಭವ್​ರನ್ನು ಗೋಲ್ಡನ್​ ಡಕ್​ ಔಟ್ ಮಾಡಿದ್ದ ಪ್ರಫುಲ್​ ಹಿಂಗೆ​
  • ನಿನ್ನೆ ನಾಲ್ಕು ಎಸೆತಗಳಲ್ಲಿ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಪ್ರಫುಲ್​ ಹಿಂಗೆ ವಿರುದ್ಧ ವೈಭವ್​ ಪ್ರತೀಕಾರ
Vaibhav Suryavanshi : ರಾಜಸ್ಥಾನ ರಾಯಲ್ಸ್​ ತಂಡದ ತವರು ಮೈದಾನ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣ ನಿನ್ನೆ (ಏಪ್ರಿಲ್​ 25) ಸೇಡಿನ ಪಂದ್ಯಕ್ಕೆ ಸಾಕ್ಷಿಯಾಯಿತು.
ಹೌದು, ಹೈದರಾಬಾದ್‌ನ ಉಪ್ಪಾಲ್​ ಕ್ರೀಡಾಂಗಣದಲ್ಲಿ ಈ ಹಿಂದೆ ನಡೆದ ಪಂದ್ಯದಲ್ಲಿ ಆರ್​ಆರ್​ ತಂಡದ ಸೂಪರ್‌ಸ್ಟಾರ್ ವೈಭವ್ ಸೂರ್ಯವಂಶಿ ಅವರನ್ನು ಬೌನ್ಸರ್‌ ಹಾಕಿ ಮೊದಲ ಎಸೆತದಲ್ಲೇ ಗೋಲ್ಡನ್​ ಡಕ್​ ಔಟ್​ ಮಾಡಲಾಗಿತ್ತು. ತನ್ನ ಪದಾರ್ಪಣೆ ಪಂದ್ಯದಲ್ಲೇ ಸನ್​ ರೈಸರ್ಸ್​ ಹೈದರಾಬಾದ್​ (ಎಸ್​ಆರ್​ಎಚ್​) ತಂಡದ ಪರ ಮಾರಕ ಬೌಲಿಂಗ್​ ದಾಳಿ ಮಾಡಿದ ಪ್ರಫುಲ್​ ಹಿಂಗೆ, ಬೌನ್ಸರ್​ ಹಾಕಿ ವೈಭವ್​ರನ್ನು ಡಕ್​ ಔಟ್​ ಮಾಡಿದ್ದರು. ಆ ಒಂದು ಸೇಡಿಗೆ ವೈಭವ್​ ನಿನ್ನೆ ಪ್ರತೀಕಾರ ತೀರಿಸಿಕೊಂಡಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ, ಮೊದಲ ಓವರ್‌ನ ಮೊದಲ ಎಸೆತವನ್ನು ಯಶಸ್ವಿ ಜೈಸ್ವಾಲ್ ಎದುರಿಸಿದರು. ಜೈಸ್ವಾಲ್​, ಒಂದು ರನ್ ತೆಗೆದುಕೊಂಡು ಸೂರ್ಯವಂಶಿಗೆ ಸ್ಟ್ರೈಕ್ ನೀಡಿದರು. ಬಳಿಕ, ಬ್ಯಾಟ್​ ಬೀಸಿದ ವೈಭವ್​ಗೆ​ ಮೊದಲ ಎಸೆತದಲ್ಲಿ ಯಾವುದೇ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ವೈಭವ್ ಅವರ ಆರ್ಭಟ ಮೂರನೇ ಎಸೆತದಿಂದಲೇ ಪ್ರಾರಂಭವಾಯಿತು. ಸೂರ್ಯವಂಶಿ ಕೊನೆಯ ನಾಲ್ಕು ಎಸೆತಗಳಲ್ಲಿ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಪ್ರಫುಲ್​ ಹಿಂಗೆ ವಿರುದ್ಧ ಪ್ರತೀಕಾರ ತೀರಿಸಿಕೊಂಡರು. ಈ ಪಂದ್ಯವನ್ನು ವೀಕ್ಷಿಸಿದವರು ವೈಭವ್ ಆಡಿದ ಶಾಟ್​ಗಳು ಅವರ ಸಾರ್ವಕಾಲಿಕ ಕ್ಲಾಸಿಕ್ ಶಾಟ್‌ಗಳು ಎಂದು ಗುಣಗಾನ ಮಾಡಿದರು.
ಮೊದಲ ಓವರ್​ನಿಂದಲೇ ಅಬ್ಬರಿಸಿದ ಸೂರ್ಯವಂಶಿ, ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ, ವೈಭವ್​ ಆರ್ಭಟ ಅಷ್ಟಕ್ಕೆ ನಿಲ್ಲಲಿಲ್ಲ. ಕೇವಲ 37 ಎಸೆತಗಳಲ್ಲಿ ಐದು ಬೌಂಡರಿ ಮತ್ತು 12 ಸಿಕ್ಸರ್‌ಗಳ ಸಹಾಯದಿಂದ 103 ರನ್ ಚಚ್ಚಿದರು. ಈ ಮೂಲಕ ಐಪಿಎಲ್​ನಲ್ಲಿ ಮತ್ತೊಂದು ಶತಕವನ್ನು ತಮ್ಮ ಬತ್ತಳಿಕೆಗೆ ಸೇರಿಸಿಕೊಂಡರು.
ಪಂದ್ಯದ ವಿಚಾರಕ್ಕೆ ಬಂದರೆ, ಜೈಪುರದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್, ವೈಭವ್ ಅವರ ಶತಕ ಮತ್ತು ಧ್ರುವ್ ಜುರೆಲ್ ಅವರ ಅರ್ಧಶತಕದ ಕಾರಣದಿಂದಾಗಿ ನಿಗದಿತ 20 ಓವರ್‌ಗಳಲ್ಲಿ 228 ರನ್ ಗಳಿಸಿತು. ಆದಾಗ್ಯೂ, ಇದಕ್ಕೆ ಉತ್ತರವಾಗಿ ಸನ್‌ರೈಸರ್ಸ್ ಹೈದರಾಬಾದ್​ ತಂಡ, ಇಶಾನ್ ಕಿಶನ್ (77), ಅಭಿಷೇಕ್ ಶರ್ಮಾ (57), ನಿತೀಶ್ ಕುಮಾರ್ ರೆಡ್ಡಿ (36) ಮತ್ತು ಹೆನ್ರಿಕ್​ ಕ್ಲಾಸೆನ್ (29) ಅವರ ಉತ್ತಮ ಬ್ಯಾಟಿಂಗ್​ ಪ್ರದರ್ಶನದಿಂದ 18.3 ಓವರ್‌ಗಳಲ್ಲಿ ಗೆಲುವು ಸಾಧಿಸಿತು.
ವೈಭವ್ ಅವರಿಗೆ ಈ ಋತುವಿನ ಮೊದಲ ಶತಕ ಮತ್ತು ಐಪಿಎಲ್‌ನಲ್ಲಿ ಅವರ ಎರಡನೇ ಶತಕವಾಗಿದೆ. ಕಳೆದ ಋತುವಿನಲ್ಲಿ ಗುಜರಾತ್ ವಿರುದ್ಧ ವೈಭವ್​ 101 ರನ್ ಗಳಿಸಿದ್ದರು. ವೈಭವ್ ಈ ಋತುವಿನಲ್ಲಿ ಎಂಟು ಪಂದ್ಯಗಳಿಂದ ಈಗಾಗಲೇ 357 ರನ್ ಗಳಿಸಿದ್ದು, ಇದರಲ್ಲಿ 1 ಶತಕ ಹಾಗೂ ಎರಡು ಅರ್ಧಶತಕಗಳು ಸೇರಿವೆ. ಇದೀಗ ವೈಭವ್ ಆರೆಂಜ್ ಕ್ಯಾಪ್ ಅನ್ನು ತಮ್ಮ ವಶಕ್ಕೆ ಪಡೆದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net