ವಿಷಕಾರಿ ಹಾವಿನ ಜತೆ ಹೋರಾಡಿ 30 ಮಕ್ಕಳ ಜೀವ ಉಳಿಸಿ ಪ್ರಾಣ ಬಿಟ್ಟ ಬೀದಿ ನಾಯಿ: ಧೀರ ಶ್ವಾನಕ್ಕೆ ಅಂತಿಮ ನಮನ! Stray Dog Kali

ವಿಷಕಾರಿ ಹಾವಿನ ಜತೆ ಹೋರಾಡಿ 30 ಮಕ್ಕಳ ಜೀವ ಉಳಿಸಿ ಪ್ರಾಣ ಬಿಟ್ಟ ಬೀದಿ ನಾಯಿ: ಧೀರ ಶ್ವಾನಕ್ಕೆ ಅಂತಿಮ ನಮನ! Stray Dog Kali
ವಿಷಕಾರಿ ಹಾವಿನ ಜತೆ ಹೋರಾಡಿ 30 ಮಕ್ಕಳ ಜೀವ ಉಳಿಸಿ ಪ್ರಾಣ ಬಿಟ್ಟ ಬೀದಿ ನಾಯಿ: ಧೀರ ಶ್ವಾನಕ್ಕೆ ಅಂತಿಮ ನಮನ! Stray Dog Kali
Published on

ಪ್ರಮುಖ ಮುಖ್ಯಾಂಶಗಳು

  • ಮಯೂರಭಂಜದ ಶಾಲೆಯೊಳಗೆ ನುಗ್ಗುತ್ತಿದ್ದ ವಿಷಪೂರಿತ ನಾಗರಹಾವನ್ನು ಎದುರಿಸಿ, 30 ಶಾಲಾ ಮಕ್ಕಳ ಪ್ರಾಣವನ್ನು ಕಾಳಿ ಎಂಬ ಶ್ವಾನ ಉಳಿಸಿದೆ
  • ಹಾವಿನ ಜೊತೆ ತೀವ್ರವಾಗಿ ಹೋರಾಡಿ ಅದನ್ನು ಕೊಂದ ಕಾಳಿ, ಹೋರಾಟದ ಸಮಯದಲ್ಲಿ ಸರ್ಪ ಕಚ್ಚಿದ್ದರಿಂದ ವಿಷವೇರಿ ಮಕ್ಕಳ ಕಣ್ಣೆದುರೇ ಪ್ರಾಣ ಬಿಟ್ಟಿದೆ
  • ಸಾಮಾನ್ಯ ಬೀದಿ ನಾಯಿಯಾಗಿದ್ದರೂ, ಶಾಲೆಯ ಮಕ್ಕಳ ಮೇಲಿನ ಪ್ರೀತಿಯಿಂದ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಶ್ವಾನವು ನಿಷ್ಠೆ ಮೆರೆದಿದೆ
  • ಮಕ್ಕಳನ್ನು ರಕ್ಷಿಸಿದ ಕಾಳಿಗೆ ಗ್ರಾಮಸ್ಥರೆಲ್ಲರೂ ಸೇರಿ ಹೂವಿನಿಂದ ಅಲಂಕೃತಗೊಂಡ ಟ್ರಾಲಿಯಲ್ಲಿ ಮೆರವಣಿಗೆ ಮಾಡುವ ಮೂಲಕ ರಾಜಮರ್ಯಾದೆಯ ಅಂತಿಮ ನಮನ ಸಲ್ಲಿಸಿದ್ದಾರೆ
Stray Dog Kali : ಪ್ರಾಣಿಗಳು ಕೇವಲ ಮೂಕ ಜೀವಿಗಳಲ್ಲ, ಅವುಗಳಿಗೆ ಮನುಷ್ಯರಿಗಿಂತ ಮಿಗಿಲಾದ ಪ್ರೀತಿ ಮತ್ತು ನಿಷ್ಠೆ ಇರುತ್ತದೆ ಎಂಬುದಕ್ಕೆ ಒಡಿಶಾದ ಮಯೂರಭಂಜ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಕ್ಷಿ. ತನ್ನ ಪ್ರಾಣವನ್ನೇ ಪಣಕ್ಕಿಟ್ಟು, 30 ಶಾಲಾ ಮಕ್ಕಳನ್ನು ಸಾವಿನ ದವಡೆಯಿಂದ ಪಾರು ಮಾಡಿದ 'ಕಾಳಿ' ಎಂಬ ಬೀದಿ ನಾಯಿ ಇಂದು ಇಡೀ ಗ್ರಾಮದ ಕಣ್ಮಣಿಯಾಗಿದೆ

ನಡೆದದ್ದೇನು?

ಉದಳ ಬ್ಲಾಕ್‌ನ ಧೀರಾಕುಲ ಗ್ರಾಮದ ಶ್ರೀ ಜಗನ್ನಾಥ ಶಿಶು ವಿದ್ಯಾ ಮಂದಿರದಲ್ಲಿ ಬೆಳಗ್ಗೆ 8.30ರ ಸಮಯ. ಶಾಲೆಯ ಆವರಣದಲ್ಲಿ ಮಕ್ಕಳೆಲ್ಲರೂ ತಮ್ಮ ತರಗತಿಗಳಲ್ಲಿ ಕುಳಿತು ಪಾಠ ಕೇಳುತ್ತಿದ್ದರು. ಆಗ ಹಠಾತ್ತನೆ ಎಲ್ಲಿಂದಲೋ ಬಂದ ಭೀಕರ ವಿಷಕಾರಿ ನಾಗರಹಾವೊಂದು ಮಕ್ಕಳಿದ್ದ ತರಗತಿಯತ್ತ ನುಗ್ಗಲು ಯತ್ನಿಸಿತು. ಹಾವನ್ನು ಕಂಡು ಮಕ್ಕಳು ಆತಂಕಕ್ಕೊಳಗಾದರು.
ಶಾಲೆಯ ಆವರಣದಲ್ಲೇ ಸದಾ ಸುಳಿದಾಡುತ್ತಿದ್ದ ಕಾಳಿ ಎಂಬ ಬೀದಿ ನಾಯಿ, ಅಪಾಯವನ್ನು ಕ್ಷಣಾರ್ಧದಲ್ಲಿ ಗ್ರಹಿಸಿತು. ಹಾವು ಮಕ್ಕಳ ಹತ್ತಿರ ಸುಳಿಯದಂತೆ ಅಡ್ಡ ನಿಂತ ಕಾಳಿ, ಅದರ ಮೇಲೆರಗಿತು. ಸುಮಾರು ಹೊತ್ತು ಕಾಳಿ ಮತ್ತು ವಿಷಸರ್ಪದ ನಡುವೆ ಭೀಕರ ಕಾಳಗ ನಡೆಯಿತು. ಅಂತಿಮವಾಗಿ ಹಾವು ಸತ್ತು ಬಿದ್ದರೂ, ಹೋರಾಟದ ನಡುವೆ ನಾಗರಹಾವು ಕಾಳಿಗೆ ಹಲವು ಬಾರಿ ಕಚ್ಚಿತ್ತು. ಹಾವನ್ನು ಕೊಂದ ಕೆಲವೇ ನಿಮಿಷಗಳಲ್ಲಿ, ಕಾಳಿ ತೀವ್ರವಾದ ವಿಷದ ಏರುವಿಕೆಯಿಂದಾಗಿ ಮಕ್ಕಳ ಕಣ್ಣೆದುರೇ ಕುಸಿದು ಬಿದ್ದು ಕೊನೆಯುಸಿರೆಳೆಯಿತು.

ಕಣ್ಣೀರಿನ ವಿದಾಯ

ತಮ್ಮ ಮಕ್ಕಳ ಪ್ರಾಣ ಉಳಿಸಿದ ಈ ದೇವದೂತ ನಾಯಿಯ ಸಾವು ಗ್ರಾಮಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿತು. ಕಾಳಿಯ ತ್ಯಾಗವನ್ನು ಸ್ಮರಿಸಿದ ಜನರು ಆಕೆಗೆ ರಾಜಮರ್ಯಾದೆಯೊಂದಿಗೆ ಅಂತಿಮ ವಿದಾಯ ಸಲ್ಲಿಸಲು ನಿರ್ಧರಿಸಿದರು. 
ಕಾಳಿಯ ಪಾರ್ಥಿವ ಶರೀರವನ್ನು ಬಿಳಿ ಬಟ್ಟೆಯಿಂದ ಹೊದಿಸಿ, ಹೂವಿನ ಹಾರಗಳಿಂದ ಅಲಂಕರಿಸಲಾಗಿತ್ತು. ಗ್ರಾಮಸ್ಥರು ಒಂದು ಟ್ರಾಲಿಯಲ್ಲಿ ಕಾಳಿಯನ್ನು ಮಲಗಿಸಿ, ಮಂತ್ರಘೋಷಗಳ ನಡುವೆ ಗ್ರಾಮದಾದ್ಯಂತ ಮೆರವಣಿಗೆ ಮಾಡಿದರು. ಮಕ್ಕಳ ಪ್ರಾಣ ಉಳಿಸಿದ ಆ 'ವೀರ ಶ್ವಾನವನ್ನು ಸಕಲ ವಿಧಿವಿಧಾನಗಳೊಂದಿಗೆ ಭೂತಾಯಿಯ ಮಡಿಲಲ್ಲಿ ಮಣ್ಣು ಮಾಡಲಾಯಿತು.
ನಾಯಿ ಕೇವಲ ಪ್ರಾಣಿಯಲ್ಲ, ಅದು ನಂಬಿಕೆಯ ಸಾಕಾರ ರೂಪ. ಇಂದು ಕಾಳಿ ಇರದಿದ್ದರೆ ನಮ್ಮ ಮನೆ ದೀಪಗಳು ಆರಿಹೋಗುತ್ತಿದ್ದವು.  ಆ ಶ್ವಾನಕ್ಕೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು," ಎಂದು ಗ್ರಾಮಸ್ಥರು ಕಣ್ಣೀರಿಟ್ಟರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net